ಸಾರಾಂಶ
ಇಂದ್ರಾಳಿಯ ಇಂದ್ರಾಣಿ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಸನಿಹ, ನಯನ ಮನೋಹರ ಪ್ರಕೃತಿಯ ನಡುವೆ ಇರುವ ಶ್ರೀ ಆಂಜನೇಯ ದೇವರ ಗುಡಿಯ ಜೀರ್ಣೋದ್ಧಾರಕ್ಕೆ ಜ.11ರಂದು ಚಾಲನೆ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಉಡುಪಿ
ಇಂದ್ರಾಳಿಯ ಇಂದ್ರಾಣಿ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಸನಿಹ, ನಯನ ಮನೋಹರ ಪ್ರಕೃತಿಯ ನಡುವೆ ಇರುವ ಶ್ರೀ ಆಂಜನೇಯ ದೇವರ ಗುಡಿಯ ಜೀರ್ಣೋದ್ಧಾರಕ್ಕೆ ಜ.11ರಂದು ಚಾಲನೆ ನೀಡಲಾಗುವುದು.ಪುರಾಣ ಪ್ರಸಿದ್ಧವಾದ ಇಂದ್ರಾಣಿ ದೇವಸ್ಥಾನ ಮಗ್ಗುಲಲ್ಲಿರುವ 108 ಮೆಟ್ಟಿಲುಗಳನ್ನು ಇಳಿದು ಮುಂದೆ ಸಾಗಿದರೆ, ಇಂದ್ರಾಣಿ ತೀರ್ಥದ ಪಕ್ಕದಲ್ಲಿ ಈ ಗುಡಿ ಇದೆ. ಇಲ್ಲಿ ತೀರ್ಥ ಕುಂಡದಲ್ಲಿ ನಿತ್ಯ ಹರಿಯುವ ಸ್ವಚ್ಛ ನೀರು, ಸ್ವಚ್ಛಂದವಾಗಿ ನೆಲೆಸಿರುವ ಪಕ್ಷಿಸಂಕುಲ, ಮತ್ಸ್ಯರಾಶಿ ಮತ್ತು ಕೂರ್ಮಗಳನ್ನು ಒಡಲಲ್ಲಿಟ್ಟುಕೊಂಡ ಪುಷ್ಕರಣಿ, ಅಭಿಮುಖವಾಗಿ ವನವೇ ಅವರಿಸಿಕೊಂಡಿರುವ ನಾಗಬನ, ಇವುಗಳ ನಡುವೆ ಪೂಜಿಸಲ್ಪಡುವ ಶ್ರೀ ಆಂಜನೇಯ ದೇವರ ಗುಡಿ. ಪ್ರಸ್ತುತ ಶಿಥಿಲಾವಸ್ಥೆಯಲ್ಲಿದ್ದು, ಅದರ ಜೀರ್ಣೋದ್ಧಾರ ಕಾರ್ಯಕ್ಕೆ, ಜೀರ್ಣೋದ್ಧಾರ ಸಮಿತಿಯು ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಶನಿವಾರದಂದು ಬೆಳಗ್ಗೆ 8.30ಕ್ಕೆ ಸರಿಯಾಗಿ ದೇವರಿಗೆ ಬಾಲಾಲಯದ ನಿರ್ಮಾಣ ಕಾರ್ಯ ಶುಭಾರಂಭಗೊಳ್ಳಲಿದೆ. ಈಗಾಗಲೇ ಪೆರ್ಡೂರಿನಲ್ಲಿ ದೇವಾಲಯದ ಶಿಲೆಗಳ ಕೆತ್ತನೆಯ ಕಾರ್ಯ ಭರದಿಂದ ಸಾಗಿದ್ದು, ಸಂಜೆ 4.30ಕ್ಕೆ ಸರಿಯಾಗಿ ಈ ಶಿಲಾ ಶಿಲ್ಪ ಕಲ್ಲುಗಳನ್ನು ಇಂದ್ರಾಳಿ ಪೇಟೆಯಿಂದ ಶ್ರೀ ಆಂಜನೇಯ ದೇವರ ಗುಡಿಯವರೆಗೆ ಶೋಭಾಯಾತ್ರೆಯಲ್ಲಿ ತರಲಾಗುವುದು. ಸಂಜೆ 6 ಗಂಟೆಗೆ ಪವಿತ್ರವಾದ ಹನುಮಾನ್ ಚಾಲೀಸಾ ಲೇಖನ ಯಜ್ಞದ ಬರವಣಿಗೆ ಪುಸ್ತಕವನ್ನು ಬಿಡುಗಡೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಆಗಮಿಸಿ, ತನು ಮನ ಧನದ ಸಹಕಾರವನ್ನು ನೀಡಿ ಶ್ರೀ ಆಂಜನೇಯ ದೇವರ ಗುಡಿ ಶೀಘ್ರವಾಗಿ ಸಂಪೂರ್ಣಗೊಳ್ಳಲು ಸಹಕರಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಜೀರ್ಣೋದ್ದಾರ ಸಮಿತಿಯ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.