ಆಶ್ರಯ ಮನೆ ತ್ವರಿತ ಹಂಚಿಕೆಗಾಗಿ ನಾಡಿದ್ದು ಸಚಿವರ ಭೇಟಿ: ಈಶ್ವರಪ್ಪ

| Published : Jul 25 2024, 01:18 AM IST

ಆಶ್ರಯ ಮನೆ ತ್ವರಿತ ಹಂಚಿಕೆಗಾಗಿ ನಾಡಿದ್ದು ಸಚಿವರ ಭೇಟಿ: ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಆಶ್ರಯ ಮನೆ ಹಂಚಿಕೆಯಲ್ಲಿ ವಿಳಂಬ ಹಾಗೂ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಸಚಿವರ ಗಮನ ಸೆಳೆಯುವ ನಿಟ್ಟಿನಲ್ಲಿ ಜು.27ರಂದು ಭೇಟಿಯಾಗುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಡವರಿಗೆ ಮೀಸಲಿರಿಸಿದ್ದ ಆಶ್ರಯ ಮನೆ ಹಂಚಿಕೆಯಲ್ಲಿ ವಿಳಂಬ ಹಾಗೂ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಸಚಿವರನ್ನು ಗಮನ ಸೆಳೆಯುವ ನಿಟ್ಟಿನಲ್ಲಿ ಜು.27ರಂದು ವಸತಿ ಸಚಿವ ಜಮೀರ್‌ ಆಹಮ್ಮದ್‌ ಹಾಗೂ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಗರ ಗೋಪಿಶೆಟ್ಟಿಕೊಪ್ಪ ಹಾಗೂ ಗೋವಿಂದಪುರದಲ್ಲಿ ಮನೆ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಶಿವಮೊಗ್ಗಕ್ಕೆ ಆಗಮಿಸುವುದಾಗಿ ಸಚಿವ ಜಮೀರ್‌ ಅಹಮ್ಮದ್‌ ತಿಳಿಸಿದ್ದಾರೆ. ಆದರೆ, ಇದೂವರೆಗೆ ಅವರು ಬಂದು ಪರಿಶೀಲನೆ ಮಾಡಿಲ್ಲ. ಮನೆಗಾಗಿ ಸಾಲ ಮಾಡಿ ಹಣ ಕಟ್ಟಿರುವ ಪಲಾನುಭವಿಗಳಿಗೆ ಇನ್ನೂ ಮನೆ ಸಿಕ್ಕಿಲ್ಲ. ಹೀಗಾಗಿ ಈ ಬಗ್ಗೆ ಗಮನಸೆಳೆದು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾ ಗುವುದು ಎಂದು ತಿಳಿಸಿದರು.

ಅದೇ ರೀತಿ, ಕಟ್ಟಡ ಕಾರ್ಮಿಕರ ಸಮಸ್ಯೆಗಳು ದುಪ್ಪಟ್ಟಿವೆ. ಇಲ್ಲಿ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಿರಿಸಿದ್ದ ಹಣ ಸೇರಿದಂತೆ ಸೌಲಭ್ಯಗಳು, ಯೋಜನೆಗಳು ಕಳೆದು ಎರಡು ವರ್ಷದಿಂದ ಬಡವರಿಗೆ ಸೇರುತ್ತಿಲ್ಲ. ಕಟ್ಡಡ ಕಾರ್ಮಿಕರ ಮಕ್ಕಳಿಗೆ 2 ವರ್ಷದಿಂದ 10,632 ರು. ಶೈಕ್ಷಣಿಕ ಸಹಾಯ ಧನ ಲಭಿಸಿಲ್ಲ. ಹೀಗೆ ಅನೇಕ ಸವಲತ್ತು ಗಳು ಕಟ್ಟಡ ಕಾರ್ಮಿಕರ ಕೈ ಸೇರದೆ ಪರದಾಡುವಂತಾಗಿದೆ. ಆದ್ದರಿಂದ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ನೀಡಿ ಮನವಿ ಮಾಡಲಾಗುವುದು. ಈ ಬಗ್ಗೆ ಕರೆ ಮಾಡಿ ತಿಳಿಸಿದ್ದೇನೆ. ಬೆಂಗಳೂರಿಗೆ ಬರುವಂತೆ ತಿಳಿಸಿದ್ದಾರೆ ಎಂದರು.

ಹಗರಣಗಳ ಸಿಬಿಐ ತನಿಖೆಯಾಗಲಿ:

ಮುಡಾ ಹಗರಣ ಹಾಗೂ ವಾಲ್ಮಿಕೀ ಅಭಿವೃದ್ಧಿ ನಿಗಮ ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಆರೋಪ, ಪ್ರತ್ಯಾರೋಪಗಳು ದಿನೇ ದಿನೆ ಹೆಚ್ಚುತ್ತಿವೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಯಾವ ಸರ್ಕಾರದ ಅವಧಿಯಲ್ಲಿ ಹಗರಣ ನಡೆದಿದೆ ಪತ್ತೆ ಹಚ್ಚಬೇಕು. ಅದೇ ರೀತಿ, ಭೋವಿ ಅಭಿವೃದ್ಧಿ ನಿಗಮದಲ್ಲೂ ಹಗರಣ ನಡೆದಿರುವ ಬಗ್ಗೆ ಕೇಳಿ ಬರುತ್ತಿದೆ. ಆದ್ದರಿಂದ ಈ ಎಲ್ಲ ಹಗರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.