ಜೂನ್‌ 23 ರಂದು ಚನ್ನರಾಯಪಟ್ಟಣದಲ್ಲಿ ಅದ್ಧೂರಿ ಬಸವ, ರೇಣುಕರ ಜಯಂತಿ ಆಚರಣೆ

| Published : Jun 17 2024, 01:31 AM IST

ಸಾರಾಂಶ

ಚನ್ನರಾಯಪಟ್ಟಣ ತಾಲೂಕು ಕೇಂದ್ರದ ಮೇಘಲ ಕೇರಿ ಬಸವನ ಕಟ್ಟೆಯ ಕಾಡುಬಸವೇಶ್ವರ ದೇವಾಲಯದ ಆವರಣದಲ್ಲಿ ಜೂ.23ರ ಭಾನುವಾರ ಬಸವ ಜಯಂತಿ ಹಾಗೂ ರೇಣುಕರ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತದೆ

ಪುರ ವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ । ಪ್ರತಿಭಾ ಪುರಸ್ಕಾರ । ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಚನ್ನರಾಯಪಟ್ಟಣ ತಾಲೂಕು ಕೇಂದ್ರದ ಮೇಘಲ ಕೇರಿ ಬಸವನ ಕಟ್ಟೆಯ ಕಾಡುಬಸವೇಶ್ವರ ದೇವಾಲಯದ ಆವರಣದಲ್ಲಿ ಜೂ.23ರ ಭಾನುವಾರ ಬಸವ ಜಯಂತಿ ಹಾಗೂ ರೇಣುಕರ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತದೆ ಎಂದು ನುಗ್ಗೇಹಳ್ಳಿ ಪುರ ವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನುಗ್ಗೇಹಳ್ಳಿ ವೀರಶೈವ ಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಆಯೋಜಿಸಿದ್ದ ಬಸವ ಜಯಂತಿ, ರೇಣುಕಾ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಅರಳೆಪೇಟೆ ಬಸವೇಶ್ವರ ಸ್ವಾಮಿ ದೇಗುಲದಿಂದ ಮೇಘಲಕೇರಿ ಕಾಡುಬಸವೇಶ್ವರ ದೇವಾಲಯದವರೆಗೂ ಬಸವೇಶ್ವರರ ಭಾವಚಿತ್ರದ ಬೆಳ್ಳಿ ರಥದ ಮೆರವಣಿಗೆ, ಮಂಗಳವಾದ್ಯ ಲಿಂಗದ ವೀರರ ಕುಣಿತ ನಂದಿ ಧ್ವಜ ಕುಣಿತ ನಡೆಯುತ್ತದೆ. 11.30ಕ್ಕೆ ಧಾರ್ಮಿಕ ಸಮಾರಂಭದ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ಬಸವಣ್ಣನವರು ಇಷ್ಟಲಿಂಗ ಪೂಜೆಯನ್ನು 12ನೇ ಶತಮಾನದಲ್ಲಿಯೇ ಪ್ರಾರಂಭಿಸಿದರು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಆಚಾರ ಮತ್ತು ವಿಚಾರಗಳಿಗೆ ಬದ್ಧರಾಗಿ ಬದುಕುವುದೇ ಧ್ಯೇಯವಾಗಬೇಕು. ದೇಹ ಮತ್ತು ಮನಸುಗಳನ್ನು ಭಗವಂತನಿಗೆ ಅರ್ಪಣೆ ಮಾಡಿಕೊಂಡು ಶಾಂತಿ ನೆಮ್ಮದಿಯಿಂದ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ಪರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಪಟೇಲ್ ರಾಜಣ್ಣ, ಇಟ್ಟಿಗೆ ನಾಗರಾಜ್, ಮಹಾಸಭಾ ಜಿಲ್ಲಾ ಸಮಿತಿ ಖಜಾಂಚಿ ಆರ್. ರುದ್ರಸ್ವಾಮಿ, ಮಹಾಸಭಾ ಕಾರ್ಯದರ್ಶಿ ನಂದೀಶ್, ಖಜಾಂಚಿ ಮಾವಿನಳ್ಳಿ ಸುರೇಶ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎನ್.ಎಸ್.ಗಿರೀಶ್, ಉಪಾಧ್ಯಕ್ಷ ಕೃಪ ಶಂಕರ್, ಮಾವಿನಹಳ್ಳಿ ಸುರೇಶ್, ನಿರ್ದೇಶಕರು, ಸದಸ್ಯರು, ಇತರರು ಹಾಜರಿದ್ದರು.