ಸಾರಾಂಶ
ಬ್ಯಾಡಗಿ: ತಾಲೂಕು ಕಾನೂನುಗಳ ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಮಾ. 8ರಂದು ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ‍್ಯಕ್ರಮ ಆಯೋಜಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರೇಕುಡೆ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಕೆಲ ಸಣ್ಣಪುಟ್ಟ ಸಮಸ್ಯೆಗಳಿಗೆ ಸಾರ್ವಜನಿಕರ ಸಮಯ ಹಾಗೂ ಹಣ ವ್ಯರ್ಥವಾಗುವ ಜತೆಗೆ ಮಾನಸಿಕವಾಗಿ ತೊಂದರೆಗೆ ಸಿಲುಕುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಲೋಕ ಅದಾಲತ್ ಉತ್ತಮ ವೇದಿಕೆ ಎಂದರು.ಸರ್ವೋಚ್ಚ ನ್ಯಾಯಾಲಯ ನಿರ್ಧಾರ: ಸಾರ್ವಜನಿಕರಿಗೆ ಸಕಾಲದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಾರ್ಷಿಕವಾಗಿ 4 ಬಾರಿ ಲೋಕ ಅದಾಲತ್ ಕಾರ್ಯಕ್ರಮ ಜರುಗಲಿದೆ ಎಂದರು. ರಾಜಿ ಸಂಧಾನದಿಂದ ತೀರ್ಮಾನ: ಅಪಘಾತ ಪ್ರಕರಣ, ಮನೆ, ಇತರೆ ವ್ಯಾಜ್ಯಗಳು, ವೈವಾಹಿಕ ಹಾಗೂ ಕೌಟುಂಬಿಕ ವ್ಯಾಜ್ಯ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್‌ಗಳಲ್ಲಿ ಕಟಬಾಕಿದಾರರ(ಎನ್‌ಪಿ) ಹಣ ವಸೂಲಾತಿ, ಭೂಸ್ವಾಧೀನ ಪ್ರಕರಣ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲು, ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ತಾಲೂಕು ಉಚಿತ ಕಾನೂನು ಸಮಿತಿ ಸೂಕ್ತಮಾರ್ಗದರ್ಶನ ನೀಡುವ ಮೂಲಕ ಇತ್ಯರ್ಥಪಡಿಸಲಿದೆ ಎಂದರು.ಸಂಧಾನಕಾರರು ಇಬ್ಬರೂ ಒಪ್ಪಿಗೆ ನೀಡಿದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡದಿದ್ದರೂ ಅಂದಿನ ದಿನವೇ ರಾಜಿಗೆ ಅವಕಾಶವಿದೆ. ಕಕ್ಷಿದಾರರಿಬ್ಬರಿಗೂ ಹಣ ಮತ್ತು ಸಮಯ ಉಳಿತಾಯ ಜತೆ ಬಾಂಧವ್ಯ ವೃದ್ಧಿಸಲಿದೆ ಎಂದರು.ರಿಯಾಯಿತಿ ಪಡೆದುಕೊಳ್ಳಿ: ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಲ್ಲಿ ನ್ಯಾಯ ಪಡೆದುಕೊಳ್ಳಲು ಮುಂದಾಗಬೇಕು. ರೈತರ ಕಟಬಾಕಿ ಸಾಲ ಜಮೆ ಮಾಡಲಾಗದೇ ದುಸ್ಥಿತಿಯಲ್ಲಿ ಸಿಲುಕಿರುತ್ತಾರೆ. ಅಂಥವರು ಬ್ಯಾಂಕ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಾಲದ ಅಸಲಿನಲ್ಲಿ ರಿಯಾಯಿತಿ ಪಡೆದು ತೀರುವಳಿ ಮಾಡಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ, ಕಾರ್ಯದರ್ಶಿ ಮಂಜುನಾಥ ಹಂಜಗಿ, ಸಹ ಕಾರ‍್ಯದರ್ಶಿ ಎನ್.ಬಿ. ಬಳಿಗಾರ, ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಜಣ್ಣ ನ್ಯಾಮತಿ, ಕೆ.ಆರ್. ಲಮಾಣಿ, ನ್ಯಾಯವಾದಿಗಳಾದ ಶ್ರೀನಿವಾಸ ಕೊಣ್ಣೂರ, ಚಂದ್ರಪ್ಪ ಕಾರಗಿ ಇತರರಿದ್ದರು.