ಸಾರಾಂಶ
ಎಂ.ಕೆ.ಹರಿಚರಣ್ ತಿಲಕ್
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸೆಪ್ಟೆಂಬರ್ 2 ರಂದು ಚುನಾವಣೆ ನಡೆಯಲಿದೆ.
ಕಳೆದ 11 ತಿಂಗಳಿಂದ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಲ್ಲದೆ ಖಾಲಿಯಾಗಿತ್ತು. ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ನಿಗಧಿಯಾಗಿದೆ.ಈ ಹಿಂದೆ ಪುರಸಭೆ ಮೊದಲ 30 ತಿಂಗಳ ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಎ’ವರ್ಗ ಮಹಿಳೆಗೆ ಮೀಸಲಾಗಿತ್ತು. ಉಳಿದ 18 ತಿಂಗಳ ಅವಧಿಗೆ ನೂತನ ಮೀಸಲಾತಿ ನಿಯಮದಂತೆ ಚುನಾವಣೆ ನಿಗಧಿಯಾಗಿದೆ.
೨೩ ಸದಸ್ಯರ ಬಲದ ಪುರಸಭೆಯಲ್ಲಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಸ್ಥಳೀಯ ಶಾಸಕ ಎಚ್.ಟಿ.ಮಂಜು ಹಾಗೂ ಸಂಸದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಇದರಿಂದ ಜೆಡಿಎಸ್-ಬಿಜೆಪಿ ಮೈತ್ರಿ ಸದಸ್ಯರ ಬಲ 15ಕ್ಕೇರಿದೆ.ಪುರಸಭೆಯಲ್ಲಿ 11 ಮಂದಿ ಜೆಡಿಎಸ್ ಸದಸ್ಯರಿದ್ದರೂ ಎಲ್ಲರೂ ಸಾಮೂಹಿಕವಾಗಿ ಅಂದು ಮಾಜಿ ಸಚಿವ ಕೆ.ಸಿ. ನಾರಾಯಣಗೌಡರ ಜೊತೆ ಬಿಜೆಪಿ ಪಡೆ ಸೇರಿದ್ದರು. ಮಹಾದೇವಿ ನಂಜುಂಡ ಮತ್ತು ನಟರಾಜು ಅಧ್ಯಕ್ಷರಾಗಿ ಹಾಗೂ ಗಾಯತ್ರಿ ಸುಬ್ಬಣ್ಣ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಬದಲಾದ ಕ್ಷೇತ್ರ ರಾಜಕಾರಣದಲ್ಲಿ ಹಾಲಿ ಶಾಸಕ ಎಚ್.ಟಿ.ಮಂಜು ಬೆಂಬಲಿಸಿ ನಿಷ್ಟಾವಂತ 3 ಸದಸ್ಯರು ಜೆಡಿಎಸ್ಸಿನಲ್ಲಿದ್ದಾರೆ. ಉಳಿದ 8 ಸದಸ್ಯರು ಕೆ.ಸಿ.ನಾರಾಯಣಗೌಡರ ಜೊತೆ ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ರಾಜಕೀಯ ಮೈತ್ರಿಯಿಂದಾಗಿ ಕೆ.ಸಿ.ನಾರಾಯಣಗೌಡರ ಬೆಂಬಲಿಗರಾದ ಶುಭಾ ಗಿರೀಶ್, ಶೋಭಾ ದಿನೇಶ್ ಹಾಗೂ ಶಾಸಕ ಎಚ್.ಟಿ.ಮಂಜು ಬೆಂಬಲಿತ ಜೆಡಿಎಸ್ ಸದಸ್ಯೆ ಇಂದ್ರಾಣಿ ವಿಶ್ವನಾಥ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿರುವ ಗಾಯಿತ್ರಿ ಸುಬ್ಬಣ್ಣ, ಸದಸ್ಯೆ ಪದ್ಮಾ ಲಾಭಿ ನಡೆಸುತ್ತಿದ್ದಾರೆ.ಕಾಂಗ್ರೆಸ್ ಒಡೆದ ಮನೆ:
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಸಹೋದರ ಪ್ರಕಾಶ್ ಪತ್ನಿ ಪಂಕಜರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸುವ ಮಾತುಗಳು ಕೇಳಿಬರುತ್ತಿದೆ. 10 ಕಾಂಗ್ರೆಸ್ ಸದಸ್ಯರಿದ್ದರೂ ಅದು ಒಡೆದ ಮನೆಯಾಗಿದೆ. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಸಹೋದರ ಕೆ.ಬಿ.ಮಹೇಶ್ ಬಣದಲ್ಲಿ 6 ಜನ ಸದಸ್ಯರಿದ್ದಾರೆ. ಕೆ.ಸಿ.ಮಂಜುನಾಥ್ ಬಣದಲ್ಲಿ ನಾಲ್ವರು ಗುರುತಿಸಿಕೊಂಡಿದ್ದಾರೆ. ಪಂಕಜರನ್ನು ಯಾವುದೇ ಕಾರಣಕ್ಕೂ ಅಭ್ಯರ್ಥಿ ಮಾಡಬಾರದೆಂದು ಕೆ.ಸಿ.ಮಂಜುನಾಥ್ ಬಣದ ಸದಸ್ಯರು ವರಿಷ್ಠರೆದುರು ಒತ್ತಾಯಿಸುತ್ತಿದ್ದಾರೆ.ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ನ ಕಲ್ಪನಾ ದೇವರಾಜು ಮತ್ತು ಸೌಭಾಗ್ಯ ಉಮೇಶ್ ನಡುವೆ ಸ್ಪರ್ಧೆಯಿದೆ. ಹೊಸಹೊಳಲಿನ ಕಲ್ಪನಾ ಕೆ.ಸಿ.ನಾರಾಯಣಗೌಡರ ಬೆಂಬಲಿಗರ ಪಡೆಯಲ್ಲಿದ್ದಾರೆ. ಬಿಜೆಪಿಯ ಸದಸ್ಯ ತಿಮ್ಮೇಗೌಡ ಕಾದು ನೋಡುವ ತಂತ್ರ ಬಳಕೆ ಮಾಡುತ್ತಿದ್ದಾರೆ.
ಸದ್ಯದ ಸನ್ನಿವೇಶದಲ್ಲಿ ಜೆಡಿಎಸ್-ಬಿಜೆಪಿ ಮೈತಿಕೂಟ ಪುರಸಭೆ ಗದ್ದುಗೆ ಹಿಡಿಯುವ ವಾತಾವರಣವಿದೆ. ಆದರೆ, ನೆರೆಯ ನಾಗಮಂಗಲದಲ್ಲಿ ಮಾಡಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಗಂಭೀರವಾಗಿ ಕೈಯಾಡಿಸಿದರೆ ಫಲಿತಾಂಶ ಏರುಪೇರಾಗಲಿದೆ.