ಒಂದು ಬಡಾವಣೆಯ ಸಮಾನ ಮನಸ್ಕ ಹಾಗೂ ಪರಿಸರ ಚಿಂತನೆಯ ಗುಂಪು ಸೇರಿದರೆ ಆ ಬಡಾವಣೆಯಲ್ಲಿ ಉತ್ತಮ ಪರಿಸರ ಸೃಷ್ಟಿಸಬಹುದು ಎಂಬುದಕ್ಕೆ ಇಲ್ಲಿಯ ಭಾರತಿ ನಗರ ನಿವಾಸಿಗಳು ಸಾಕ್ಷಿಯಾಗಿದ್ದಾರೆ.
ಧಾರವಾಡ:
ಒಂದು ಬಡಾವಣೆಯ ಸಮಾನ ಮನಸ್ಕ ಹಾಗೂ ಪರಿಸರ ಚಿಂತನೆಯ ಗುಂಪು ಸೇರಿದರೆ ಆ ಬಡಾವಣೆಯಲ್ಲಿ ಉತ್ತಮ ಪರಿಸರ ಸೃಷ್ಟಿಸಬಹುದು ಎಂಬುದಕ್ಕೆ ಇಲ್ಲಿಯ ಭಾರತಿ ನಗರ ನಿವಾಸಿಗಳು ಸಾಕ್ಷಿಯಾಗಿದ್ದಾರೆ.ಭಾರತಿ ನಗರ ನಿವಾಸಿಗಳ ಅಭಿವೃದ್ಧಿ ಸಂಘವು ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಸಹಯೋಗದಲ್ಲಿ ತಮ್ಮ ಬಡಾವಣೆಯ ಉದ್ಯಾನವನವನ್ನು ₹ 9 ಲಕ್ಷ ವೆಚ್ಚದಲ್ಲಿ ಮಾದರಿಯಾಗಿ ಅಭಿವೃದ್ಧಿಗೊಳಿಸಿದ್ದಾರೆ. ಇದೇ ಸೆ. 27ರಂದು ಬೆಳಗ್ಗೆ 10ಕ್ಕೆ ಉದ್ಯಾನವನದ ಉದ್ಘಾಟನೆ ಸಹ ಆಯೋಜಿಸಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಕಾರ್ಯದರ್ಶಿ, ಎಸ್‌ಡಿಎಂ ನಿವೃತ್ತ ಪ್ರಾಧ್ಯಾಪಕ ಪ್ರೊ. ವಾಸುದೇವ ಪರ್ವತಿ ಮಾಹಿತಿ ನೀಡಿದರು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಉದ್ಯಾವನಕ್ಕೆ ಚಾಲನೆ ನೀಡಲಿದ್ದು, ಭಾರತಿ ನಗರ ನಿವಾಸಿಗಳ ಸಂಘದ ಅಧ್ಯಕ್ಷ ಶಂಕರ ಸಾಧನಿ ಹಾಗೂ ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ ಭಾಗವಹಿಸಲಿದ್ದಾರೆ. ಬರೀ ಇದೊಂದೆ ಅಲ್ಲದೇ ಅವಳಿ ನಗರದ ಇಂತಹ ಪರಿಸರ ಅಭಿವೃದ್ಧಿ ಕಾರ್ಯಗಳನ್ನು ಸಂಘವು ಮಾಡಲು ಸದಾ ಮುಂದಿದೆ ಎಂದರು.ರೋಟರಿ ಕ್ಲಬ್ ಆಫ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ನಾಗರಾಜ ತಾಯಣ್ಣವರ ಮಾತನಾಡಿ, ನಿರ್ವಹಣೆ ಇಲ್ಲದೇ ಉದ್ಯಾನವನ ಸಂಪೂರ್ಣ ಹಾಳಾಗಿತ್ತು. ಆದ್ದರಿಂದ ಉದ್ಯಾನವನವನ್ನು ದತ್ತು ಪಡೆದು ಮಹಾನಗರ ಪಾಲಿಕೆ ಅನುದಾನ ಹಾಗೂ ನಿರ್ವಹಣೆಗಾಗಿ ಕಾಯದೇ ಕ್ಲಬ್ ಹಾಗೂ ಬಡಾವಣೆ ನಿವಾಸಿಗಳ ಸಹಕಾರದಲ್ಲಿ ವಿಆರ್‌ಎಲ್ ಸಮೂಹದ ಸಿಎಸ್‌ಆರ್ ಅನುದಾನ ಬಳಸಿಕೊಂಡು ವಿಶೇಷವಾಗಿ ವೃದ್ಧರು, ಮಕ್ಕಳು ಹಾಗೂ ಮಹಿಳೆಯರಿಗಾಗಿ ಸೌಲಭ್ಯವುಳ್ಳ ಉದ್ಯಾನವನ ರಚಿಸಿದ್ದೇವೆ. ಬರೀ ಗಿಡ-ಮರಗಳ ಸೌಂದರ್ಯ ಮಾತ್ರವಲ್ಲದೇ ಹೊರಾಂಗಣ ಜಿಮ್ ಇದೆ. ಫುಟ್‌ಪಾತ್ ಅಗಲೀಕರಣ, ಯೋಗ ತರಗತಿಗಳು, ಕಸ ನಿರ್ವಹಣೆ ಮಾಡಿ ಅದನ್ನು ಗೊಬ್ಬರವಾಗಿ ಬಳಸುವುದು, ನೀರು ನಿರ್ವಹಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗಿರೀಶ ಬೆಟಗೇರಿ, ಕರಣ ದೊಡವಾಡ ಮತ್ತಿತರರು ಇದ್ದರು.