ಸೆ.4ಕ್ಕೆ ರಾಜ್ಯಾದ್ಯಂತ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

| Published : Aug 31 2024, 01:33 AM IST

ಸೆ.4ಕ್ಕೆ ರಾಜ್ಯಾದ್ಯಂತ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್‌ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ, ವಿದ್ಯುತ್ ಶುಲ್ಕ ವಿಧಿಸುವ ಸರ್ಕಾರದ ಯೋಜನೆ ವಿರೋಧಿಸಿ ಸೆ.4ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಾದ್ಯಂತ ಜಿಲ್ಲಾ ವಿದ್ಯುತ್‌ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕೃಷಿ ಪಂಪ್‌ ಸೆಟ್‌ಗಳಿಗೆ ಆಧಾರ್ ಜೋಡಿಸುವ ಸರ್ಕಾರದ ನೀತಿ ಖಂಡನೀಯ: ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್‌ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ, ವಿದ್ಯುತ್ ಶುಲ್ಕ ವಿಧಿಸುವ ಸರ್ಕಾರದ ಯೋಜನೆ ವಿರೋಧಿಸಿ ಸೆ.4ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಾದ್ಯಂತ ಜಿಲ್ಲಾ ವಿದ್ಯುತ್‌ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ದಾವಣಗೆರೆ ಬೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್ ಕಚೇರಿ ಮುಂಭಾಗ ಅಂದು ಬೆಳಗ್ಗೆ 11 ಗಂಟೆಗೆ ಸಂಘದ ಪದಾಧಿಕಾರಿಗಳು ಹಾಗೂ ರೈತರಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ಕೃಷಿ ಪಂಪ್ ಸೆಟ್‌ಗಳ ಆರ್‌.ಆರ್. ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ ಶುಲ್ಕ ವಿಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಸರ್ಕಾರ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೃಷಿ ಕೊಳವೆ ಬಾವಿಗಳಿಗೆ 2023 ರಿಂದ ಟಿ.ಸಿ., ವಿದ್ಯುತ್ ಕಂಬಗಳು, ವೈರ್‌ಗಳು, ಇತರೆ ಸಾಮಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಕಾನೂನು ಜಾರಿಗೊಳಿಸಿದೆ. ರಾಜ್ಯದಲ್ಲಿ ರೈತರು ಕೊಳವೆ ಬಾವಿಗಳ ಆಶ್ರಯದಲ್ಲಿ ಕೃಷಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಈ ಹಿಂದೆ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಶುಲ್ಕ ವಸೂಲಿ ಮಾಡುತ್ತಿದ್ದ ಸರ್ಕಾರದ ನೀತಿಗಳ ವಿರುದ್ಧ ಹೋರಾಟದ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪಡೆಯಲಾಯಿತು ಎಂದರು.

ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನಿಗದಿಗೊಳಿಸಿ ಕಾನೂನು ಬದ್ಧಗೊಳಿಸುವವರೆಗೂ ಕೃಷಿ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳಾದ ಭೂಮಿ, ರಸ್ತೆ, ನೀರು, ವಿದ್ಯುತ್, ಬಿತ್ತನೆ ಬೀಜಗಳು, ರಸಗೊಬ್ಬರ, ಕೀಟನಾಶಕಗಳು, ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಹೀಗಿರುವಾಗ ಸರ್ಕಾರದ ಈ ರೈತ ವಿರೋಧಿ ವಿದ್ಯುತ್ ನೀತಿ ರದ್ದು ಮಾಡಲು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ, ವಿದ್ಯುತ್ ಶುಲ್ಕ ವಿಧಿಸುವ ಯೋಜನೆ ಜಾರಿ ಮಾಡಬಾರದು. ಕೊಳವೆ ಬಾವಿಗಳಿಗೆ 2023 ರಿಂದ ಜಾರಿಗೊಳಿಸಿರುವ ಕಾನೂನು ರದ್ದುಪಡಿಸಿ, ಹಿಂದಿನಂತೆ ಟಿ.ಸಿ., ಕಂಬ, ವೈರು ಇತರೆ ಉಪಕರಣಗಳನ್ನು ಇಲಾಖೆ ಸರಬರಾಜು ಮಾಡಿ, ವಿದ್ಯುತ್ ಸಂಪರ್ಕ ನೀಡಬೇಕು. ಮನೆ ಬಳಕೆ 200 ಯೂನಿಟ್ ಉಚಿತ ವಿದ್ಯುತ್ ಜಾರಿ ಮಾಡಿರುವ ಸರ್ಕಾರ ಹೆಚ್ಚಿಸಿರುವ ಯೂನಿಟ್ ದರವನ್ನು ಕಡಿಮೆ ಮಾಡಬೇಕು. ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮರಣಹೊಂದುವ ವ್ಯಕ್ತಿಯ ಕುಟುಂಬಕ್ಕೆ ₹10 ಹತ್ತು ಲಕ್ಷ ಪರಿಹಾರ ನೀಡಬೇಕು. ಸೋಲಾರ್ ಸಂಪರ್ಕ ಹೊಂದುವ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಆದೇಶ ಕೈ ಬಿಡಬೇಕು. ಕೃಷಿ ಕ್ಷೇತ್ರಕ್ಕೆ ರೈತರಿಗೆ ನೀಡುತ್ತಿರುವ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಲೀ, ಕೇಸುಗಳನ್ನು ಹಾಕುವುದಾಗಲೀ ಮಾಡಬಾರದು. ಒಂದುವೇಳೆ ಈ ರೀತಿ ವಿನಾಕಾರಣ ತೊಂದರೆ ಕೊಟ್ಟರೆ ಉಗ್ರ ಹೋರಾಟ ಮಾಡಲಾಗುವುದು ಎಂಬುದು ಸೇರಿದಂತೆ ಅನೇಕ ಹಕ್ಕೊತ್ತಾಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ವೀರನಗೌಡ ಪಾಟೀಲ್, ಬೈರೇಗೌಡ, ಮಹಾದೇವಿ ಎಸ್.ಬೇವಿನಾಳ ಮಠ, ಶತಕೋಟಿ ಬಸಪ್ಪ, ವಿಶ್ವನಾಥ, ಖಲೀಂವುಲ್ಲ, ಕಾಳೇಶ್ ಇತರರು ಇದ್ದರು.

- - - -30ಕೆಡಿವಿಜಿ31ಃ:

ದಾವಣಗೆರೆಯಲ್ಲಿ ರೈತ ಸಂಘ, ಹಸಿರು ಸೇನೆಯಿಂದ ರಾಜ್ಯಾದ್ಯಂತ ವಿದ್ಯುತ್‌ ಕಚೇರಿಗಳ ಮುಂಭಾಗ ಪ್ರತಿಭಟನೆ ನಡೆಸುವ ಕುರಿತು ಕೋಡಿಹಳ್ಳಿ ಚಂದ್ರಶೇಖರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.