ದವನದ ಹುಣ್ಣಿಮೆ ಪ್ರಯುಕ್ತ 2 ಲಕ್ಷ ಭಕ್ತರಿಂದ ಹುಲಿಗೆಮ್ಮನ ದರ್ಶನ

| Published : Apr 24 2024, 02:22 AM IST

ಸಾರಾಂಶ

ಬೇಸಿಗೆಯ ಉರಿ ಬಿಸಿಲು ಲೆಕ್ಕಿಸದೇ ದವನದ ಹುಣ್ಣಿಮೆ ಪ್ರಯುಕ್ತ ಸುಮಾರು 2 ಲಕ್ಷಕ್ಕೂ ಅಧಿಕ ಜನ ಭಕ್ತರು ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಶಕ್ತಿ ಕೇಂದ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಮುನಿರಾಬಾದ್

ಬೇಸಿಗೆಯ ಉರಿ ಬಿಸಿಲು, ಬೀಸುತ್ತಿರುವ ಉಷ್ಣಗಾಳಿಯನ್ನು ಲೆಕ್ಕಿಸದೇ ದವನದ ಹುಣ್ಣಿಮೆ ಪ್ರಯುಕ್ತ ಸುಮಾರು 2 ಲಕ್ಷಕ್ಕೂ ಅಧಿಕ ಜನ ಭಕ್ತರು ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಶಕ್ತಿ ಕೇಂದ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ಭಕ್ತರು ಬೆಳಗ್ಗೆ 6 ಗಂಟೆಯಿಂದಲೇ ಅಮ್ಮನವರ ದರ್ಶನ ಪಡೆಯಲು ಪ್ರಾರಂಭಿಸಿದರು. ಒಂದು ಕಡೆ ಬಿಸಿಲು ಏರುತ್ತಿದ್ದಂತೆ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯೂ ಏರಿಕೆ ಆಯಿತು. ಮಧ್ಯಾಹ್ನ 12 ಗಂಟೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಜನ ಭಕ್ತಾಧಿಗಳು ಅಮ್ಮನವರ ದರ್ಶನ ಪಡೆದರು. ಮಧ್ಯಾಹ್ನ 3 ಗಂಟೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ 1.5 ಲಕ್ಷ ದಾಟಿತ್ತು. ಸಂಜೆ 5ಗಂಟೆಗೆ ವೇಳೆಗೆ ಭಕ್ತರ ಸಂಖ್ಯೆ 2 ಲಕ್ಷ ದಾಟಿತ್ತು.

ಹುಣ್ಣಿಮೆ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮವು ಭಕ್ತರ ಅನುಕೂಲಕ್ಕಾಗಿ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ಹುಲಿಗಿ ಗ್ರಾಮಕ್ಕೆ ವಿಶೇಷ ಬಸ್ಸಿನ ಸೌಲಭ್ಯ ಕಲ್ಪಿಸಿತ್ತು. ಇದಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರು ಅಮ್ಮನವರ ದರ್ಶನ ಪಡೆಯಲು ದ್ವಿಚಕ್ರ ವಾಹನ ಹಾಗೂ ಬಾಡಿಗೆ ಆಟೋಗಳಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮುಂದುವರೆದ ಟ್ರಾಫಿಕ್ ಜಾಮ್:

ಹುಲಿಗಿ ರೈಲ್ವೆ ಗೇಟಿನಲ್ಲಿ ಪದೇ ಪದೇ ಗೇಟು ಹಾಕುತ್ತಿದ್ದ ಹಿನ್ನೆಲೆ ಹುಲಿಗೆಮ್ಮ ದೇವಿಯ ದರ್ಶನ ಪಡೆಯಲು ಆಗಮಿಸಿದ ಭಕ್ತಾಧಿಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡಬೇಕಾದ ಪರಿಸ್ಥಿತಿ ಉಂಟಾಯಿತು. ರೈಲ್ವೆ ಇಲಾಖೆಯಿಂದ ನೂತನ ಮೇಲ್ಸೇತುವೆ ಸೇತುವೆ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದ್ದು, ಕಾಮಗಾರಿಯು ಇನ್ನೂ ಪ್ರಾರಂಭವಾಗಿಲ್ಲ. ಶೀಘ್ರ ಕಾಮಗಾರಿ ಪ್ರಾರಂಭಿಸಬೇಕೆಂದು ಹುಲಿಗಿ ಗ್ರಾಮಸ್ಥರು ರೈಲ್ವೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.