ಒಂದೆಡೆ ಸಂತೋಷ, ಮತ್ತೊಂದೆಡೆ ಆಕ್ರೋಶ!

| Published : Sep 23 2024, 01:16 AM IST

ಸಾರಾಂಶ

ಲೋಕಾಪುರ ರೈಲು ನಿಲ್ದಾಣವನ್ನು ಗೂಡ್ಸ್ ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದು, ಕಾರ್ಖಾನೆಗಳ ಮಾಲೀಕರಿಗೆ ಸಂತಸವಾದರೆ, ಸಾರ್ವಜನಿಕರಿಗೆ ಹಾಗೂ ರೈಲು ಹೋರಾಟಗಾರರಿಗೆ ಬೇಸರ ವ್ಯಕ್ತವಾಗಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಲೋಕಾಪುರ ರೈಲು ನಿಲ್ದಾಣವನ್ನು ಗೂಡ್ಸ್‌ ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದು, ಕಾರ್ಖಾನೆಗಳ ಮಾಲೀಕರಿಗೆ ಸಂತಸವಾದರೆ, ಸಾರ್ವಜನಿಕರಿಗೆ ಹಾಗೂ ರೈಲು ಹೋರಾಟಗಾರರಿಗೆ ಬೇಸರ ವ್ಯಕ್ತವಾಗಿದೆ.

ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಆಗಲೆಂದು ಸಾರ್ವಜನಿಕರು ಹಾಗೂ ರೈಲು ಹೋರಾಟಗಾರರು ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕಾಗಿ ಹಲವು ವರ್ಷಗಳ ಹೋರಾಟದ ತಪಸಿನ ಫಲವಾಗಿ ಇಂದು ರೈಲು ಮಾರ್ಗ ಲೋಕಾಪುರವರೆಗೆ ಬಂದು ತಲುಪಿದೆ. ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುತ್ತಿದಂತೆ ಸಾರ್ವನಿಕರ ಪ್ರಯಾಣಕ್ಕೆ ಪ್ಯಾಸೆಂಜರ್‌ ರೈಲು ಓಡಿಸಿ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದ್ದ ಅಧಿಕಾರಿಗಳು, ಈಗ ಕೇವಲ ಗೂಡ್ಸ್‌ ರೈಲು ಪ್ರಾರಂಭಿಸಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ದೂಡಿದೆ. ಆದರೆ ರೈಲು ಅಧಿಕಾರಿಗಳು ಈ ಭಾಗದಲ್ಲಿ ಸಕ್ಕರೆ, ಸಿಮೆಂಟ್‌ ಹಾಗೂ ಸುಣ್ಣದ ಕಲ್ಲು ಕಾರ್ಖಾನೆಗಳ ಹೆಚ್ಚಿಗೆ ಇರುವುದರಿಂದ ಈ ಮಾರ್ಗದಲ್ಲಿ ರೈಲು ಓಡಾಟ ಮಾಲೀಕರಿಗೆ ಅನುಕೂಲವಾಗಲೆಂದು ರೈಲು ಅಧಿಕಾರಿಗಳು ಪ್ರತಿದಿನ ಬೆಳಗ್ಗೆ ೬ ರಿಂದ ರಾತ್ರಿ ೧೦ರವರೆಗೆ ರೈಲು ಓಡಾಟಕ್ಕೆ ಅನಕೂಲ ಮಾಡಿಕೊಟ್ಟಿದ್ದು ಸಾರ್ವಜನಿಕರಿಗೆ ನಿರಾಸೆ ಮೂಡಿಸಿದಲ್ಲದೇ ವಿರೋಧ ವ್ಯಕ್ತ ಪಡಿಸಿದ್ದಾರೆ.

ಪೂರ್ಣಗೊಳ್ಳದ ಕಾಮಗಾರಿ:

ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಲೋಕಾಪುರ ರೈಲು ನಿಲ್ದಾಣ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳದೆ, ಇನ್ನೂ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಗೆ ವೇಗ ನೀಡಿ ಆದಷ್ಟು ಬೇಗನೆ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತಗೊಳಿಸುನ ನಿಟ್ಟಿನಲ್ಲಿ ರೈಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ.

ಕುಡಚಿ ತಲುಪದ ರೈಲು:

ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಯೋಜನೆ ಆರಂಭಗೊಂಡು ದಶಕಗಳೆ ಕಳೆದರೂ ಕಾಮಗಾರಿ ಮುಕ್ತಾಯ ಕನಸಾಗಿಯೇ ಉಳಿದಿದೆ. ಲೋಕಾಪೂರವರೆಗೆ ಬಂದು ತಲುಪಿರುವ ಕಾಮಗಾರಿನೆ ಆಮೆಗತಿಯಲ್ಲಿ ಸಾಗಿದ್ದು, ಕುಡಚಿ ತಲಪುವುದು ಕನಸಾಗಿಯೇ ಉಳಿದಿದೆ

ಸಂಬಂಧಿಸಿದ ಸಂಸದರು ಹಾಗೂ ರೈಲು ಇಲಾಖೆ ಅಧಿಕಾರಿಗಳು ಇತ್ತ ಕಡೆ ಮುತುವರ್ಜಿ ವಹಿಸಿ ಗೂಡ್ಸ್‌ ರೈಲುಗಳ ಸಂಚಾರಕ್ಕೆ ಮುನ್ನ ಪ್ಯಾಸೆಂಜರ್‌ ರೈಲು ಓಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಹಾಗೂ ಹೋರಾಟಗಾರ ಒತ್ತಾಯವಾಗಿದೆ.

---

ಕೋಟ್‌

ಲೋಕಾಪುರದಿಂದ ಪ್ರಥಮವಾಗಿ ಸಾರ್ವಜನಿಕ ಪ್ಯಾಸೆಂಜರ್‌ ರೈಲುಗಳು ಪ್ರಾರಂಭಿಸಬೇಕು. ಈಗಾಗಲೆ ರೈಲ್ವೆ ಇಲಾಖೆಗೆ ಪ್ರಥಮವಾಗಿ ಪ್ಯಾಸೆಂಜರ್‌ ರೈಲು ಪ್ರಾರಂಭಿಸಲು ಮನವಿ ಮುಖಾಂತರ ಎಚ್ಚರಿಸಲಾಗಿದೆ. ರೈಲ್ವೆ ಇಲಾಖೆ ಮೊಂಡ ಸ್ವಭಾವ ಬಿಟ್ಟು ಜಿಲ್ಲೆಯ ಜನರ ಅಪೇಕ್ಷೆಯಂತೆ ಪ್ಯಾಸೆಂಜರ್‌ ರೈಲು ಪ್ರಾರಂಭಿಸಿ ನಂತರ ಸರಕು ಸಾಗಾಣಿಕೆಗೆ ಅವಕಾಶ ಕಲ್ಪಿಸಬೇಕು. ಇಲ್ಲಾದರೆ ಹೋರಾಟ ಸಮಿತಿಯು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪಕ್ಷಾತೀತ ಹೋರಾಟ ಮಾಡಿ ರೈಲ್ವೆ ಇಲಾಖೆಗೆ ಬಿಸಿ ತಟ್ಟಿಸಬೇಕಾಗುತ್ತದೆ.

-ಕುತುಬುದ್ದೀನ ಖಾಜಿ,ಕುಡಚಿ ರೈಲು ಮಾರ್ಗ ನಿರ್ಮಾಣದ ಹೋರಾಟ ಸಮಿತಿ ಅಧ್ಯಕ್ಷ

---

ಸಾರ್ವಜನಿಕರಿಗೆ ಅನೂಕುಲವಾಗಲೆಂದು ಈ ಭಾಗದ ರೈತರು ಕುಡಚಿ ರೈಲು ಮಾರ್ಗಕ್ಕೆ ಜಮೀನು ನೀಡಿದ್ದಾರೆ. ಆದರೆ, ಅಧಿಕಾರಿಗಳು ಕಾರ್ಖಾನೆಗಳ ಮಾಲೀಕರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಗೂಡ್ಸ್‌ ರೈಲು ಪ್ರಾರಂಭಿಸಿದ್ದಾರೆ. ಒಂದು ವೇಳೆ ಪ್ಯಾಸೆಂಜರ್‌ ರೈಲು ಬೀಡದೆ, ಗೂಡ್ಸ್‌ ರೈಲು ಬಿಟ್ಟರೆ ನಮ್ಮ ವಿರೋಧವಿದ್ದು ಸಾರ್ವಜನಿಕರೊಂದಿಗೆ ಪ್ರತಿಭಟನೆ ಮಾಡಲಾಗುವುದು.

-ಗುರುರಾಜ ಬ. ಉದುಪುಡಿ ನಗರದ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ