ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಬಾಗಲಕೋಟೆಗೆ ಪ್ರಚಾರಕ್ಕೆ ಬರ್ತಿದ್ದಾರೆ. ಯಾವ ನೆಲೆಗಟ್ಟಿನ ಮೇಲೆ ಮತ ಕೇಳುತ್ತೀರಿ ಎಂದು ಅವರನ್ನು ಕೇಳುತ್ತಿದ್ದಿನಿ. ನಾನು ಬಹಳಷ್ಟು ಸಾಲ ಮಾಡಿದ್ದಿನಿ ಎಂದು ಹೇಳಿ ಮತ ಕೇಳುತ್ತಾರೆ ನೋಡಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಬಾಗಲಕೋಟೆಗೆ ಪ್ರಚಾರಕ್ಕೆ ಬರ್ತಿದ್ದಾರೆ. ಯಾವ ನೆಲೆಗಟ್ಟಿನ ಮೇಲೆ ಮತ ಕೇಳುತ್ತೀರಿ ಎಂದು ಅವರನ್ನು ಕೇಳುತ್ತಿದ್ದಿನಿ. ನಾನು ಬಹಳಷ್ಟು ಸಾಲ ಮಾಡಿದ್ದಿನಿ ಎಂದು ಹೇಳಿ ಮತ ಕೇಳುತ್ತಾರೆ ನೋಡಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಮುಂದೆ ಹುಟ್ಟುವಂತಹ ಮಕ್ಕಳ ಮೇಲೂ ಸಾಲ ಹೊರಿಸಿದ್ದಾರೆ. ಯಾರೂ ಮಾಡದ ಸಾಲವನ್ನು ಇವರು ಮಾಡಿದ್ದಾರೆ. ₹89 ಸಾವಿರ ಕೋಟಿ ಸಾಲಕ್ಕೆ ಬಡ್ಡಿ ಕಟ್ತೀನಿ ಎಂದು ಹೇಳಿ ಮತ ಕೇಳುತ್ತಿದ್ದಾರೆ. ಹೈಕಮಾಂಡ್ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಎಲ್ಲವನ್ನೂ ನುಂಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಜೊತೆಯಲ್ಲಿ ಎಲ್ಲ ದಿನಸಿಗಳ ಬೆಲೆ ಏರಿಕೆ ಮಾಡುತ್ತಿದ್ದಾರೆ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿದ್ರಿ, ವಾಪಸ್‌ ಕಟ್ತೀನಿ ಅಂದ್ರಿ ಕಟ್ಟಿಲ್ಲ, 139 ಜನ ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಅವಕಾಶ ನೀಡಿದ್ದೀನಿ ಎಂದು ಮತ ಕೇಳ್ತಾರಾ, ಸಿಎಂ ಏನು ಅಜೆಂಡಾ ಇಟ್ಟುಕೊಂಡು ಮತ ಕೇಳ್ತಾರೆ ನೋಡಬೇಕು.

ಎರಡು ವರ್ಷಗಳ ಕಾಲ ಮಾಡಿದ ದುರಾಡಳಿತಕ್ಕೆ ನಮ್ಮ ಸವಾಲ್ ಇದು, ನಮ್ಮ ಸವಾಲ್ ಗೆ ಸಿಎಂ ಉತ್ತರ ಕೊಟ್ಟು ಮತ ಕೇಳಲಿ ಎಂದು ಹೇಳಿದರು.ವಿಧಾನಸೌಧದಲ್ಲಿ ಯು.ಟಿ. ಖಾದರ್ ಅವರನ್ನು ಬದಲಾವಣೆ ಮಾಡಲು ಹೊರಟಿದ್ದಾರೆ, ಸಿಎಂ , ಡಿಸಿಎಂ ಕುರ್ಚಿ ಕಾಳಗ ನಡೀತಿದೆ, ಖುರ್ಚಿ ಬೋಲ್ಟ್ ಟೈಟ್ ಮಾಡಬೇಕು ಎಂದು ಕೇಳುತ್ತೇನೆ ಎಂದ ಅವರು, ಕ್ರಿಕೆಟ್ ವೀಕ್ಷಣೆಗೆ ಕಾಂಗ್ರೆಸ್ ಶಾಸಕ ಕಾಶಪ್ಪನವರ 5 ಟಿಕೆಟ್ ಕೊಡಬೇಕೆಂದು ಬೇಡಿಕೆ ಇಡುತ್ತಾರೆ, ಪ್ರತ್ಯೇಕ ಗ್ಯಾಲರಿ ಬೇಕು ಎಂದು ಹೇಳುತ್ತಾರೆ. ಶಾಸಕರೇನು ದೇವಮಾನವರೇ, ಜನರ ಜೊತೆ ಕೂರಬೇಕು, ಶಾಸಕರ ಗ್ಯಾಲರಿಗೆ ನನ್ನ ಹೆಸರಿಡಿ ಎಂದು ಕಾಶಪ್ಪನವರ ಪುಣ್ಯಕ್ಕೆ ಕೇಳಿಲ್ಲ ಎಂದು ವ್ಯಂಗ್ಯವಾಡಿದರು.

ಎಲ್ಲ ನಿಗಮಗಳ ಹಣವನ್ನ ಸಚಿವರು ಲೂಟಿ ಮಾಡುತ್ತಿದ್ದಾರೆ. ಎಲ್ಲಡೆಯೂ ಹಣ ಲೂಟಿ ಮಾಡಿ ಗೆಲ್ಲಬೇಕು ಅಂತಿದ್ದಾರೆ. ಬಾಗಲಕೋಟೆ ಜನ ದುಡ್ಡಿನ ಹಿಂದೆ ಹೋಗಲ್ಲ, ಈ ಬಾರಿ ಬಿಜೆಪಿಯ ಚರಂತಿಮಠರನ್ನು ಜನರು ಬಿಟ್ಟು ಕೊಡಲ್ಲ, ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ಎಂಬ ಇಂಟಲಿಜೆನ್ಸ್ ರಿಪೋರ್ಟ್‌ ಕಾರಣಕ್ಕೆ ಸಿಎಂ 5 ದಿನ ಇಲ್ಲಿಗೆ ಬರುತ್ತಿದ್ದಾರೆ, ಬರಲಿ ನೋಡೋಣ ಎಂದು ರಾಮುಲು ಸವಾಲು ಹಾಕಿದರು.ಬಾಕ್ಸ್

ಯಾತ್ನಾಳ ನಮ್ಮ ನಾಯಕರು ಪ್ರಚಾರ ಮಾಡ್ತಾರೆ:

ಉಪಚುನಾವಣೆಯಲ್ಲಿ ಯತ್ನಾಳ ಪ್ರಚಾರಕ್ಕೆ ಬರುವ ಕುರಿತು ಮಾತನಾಡಿ, ಯತ್ನಾಳ ನಮ್ಮ ನಾಯಕರು, ಯತ್ನಾಳಗೆ ಬರಲಿ ಎಂದು ಹೇಳುತ್ತಿದ್ದಾರೆ, ರಾಜ್ಯಾಧ್ಯಕ್ಷರು ಯಾರೂ ಬರಬೇಕು, ಬೇಡ ಎಂದು ಎಲ್ಲಿಯೂ ಹೇಳಿಲ್ಲ, ಬೇರೆ ಬೇರೆ ಕಾರಣ ಇವೆ. ಯತ್ನಾಳ ಬರೋದ್ರಿಂದ ಪಕ್ಷಕ್ಕೆ ಲಾಭ ಇದೆ, ಯತ್ನಾಳಗೂ ಇರಿಸಮುರಿಸು ಇರಬಹುದು. ಎಲ್ಲರೂ ಸೇರಿ ಎಲೆಕ್ಷನ್ ಮಾಡುತ್ತಾರೆ. ಹೀಗಾಗಿ ಯತ್ನಾಳ ಸಹ ಬಂದು ಪ್ರಚಾರ ಮಾಡುತ್ತಾರೆ, ನಾವೂ ಸಹ ಅವರ ಜೊತೆ ಕೈ ಜೋಡಿಸಿ ಗೆಲುವಿಗೆ ಪ್ರಚಾರ ಮಾಡುತ್ತೇವೆ. ಯತ್ನಾಳ ಅವರನ್ನ ಹಿಂದೆಯೂ ಬಿಟ್ಟಿಲ್ಲ, ಮುಂದೆಯೂ ಬಿಡಲ್ಲ, ಟೆಕ್ನಿಕಲ್ ಪ್ರಾಬ್ಲಂನಿಂದ ದೂರವಿದ್ದಾರೆ. ಎಲ್ಲರೂ ಸೇರಿ ಬಾಗಲಕೋಟೆಯಲ್ಲಿ ಕೇಸರಿ ಧ್ವಜ ಹಾರಿಸೋಣ, ನಮ್ಮ ರಾಷ್ಟ್ರೀಯ ನಾಯಕರು ಅಂತಿಮವಾಗಿ ಯತ್ನಾಳ ಸೇರ್ಪಡೆ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಶ್ರೀರಾಮುಲು ಹೇಳಿದರು.