ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನವೆಂಬರ್ 11 ರಂದು ನಗರದ ಜೈಭೀಮ್ ವಸತಿ ನಿಲಯದ ಆವರಣದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾಡಳಿತ ಮತ್ತು ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಸಮಿತಿ ವತಿಯಿಂದ ಜಾತ್ಯಾತೀತವಾಗಿ ಜಯಂತಿ ಅಚರಣೆ ಮಾಡುತ್ತಿದ್ದು, ಶಾಸಕ ಪ್ರದೀಪ್ ಈಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಭಾಗಿಯಾಗುವರು ಎಂದು ಒನಕೆ ಓಬವ್ವ ಜಯಂತ್ಯುತ್ಸವ ಸಮಿತಿ ಸಂಚಾಲಕ ಹಾಗೂ ಸಮತಾ ಸೈನಿಕ ದಳದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ವೆಂಕಟರಮಣಪ್ಪ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರವನಿತೆ ಒನಕೆ ಓಬವ್ವ 18ನೇ ಶತಮಾನದಲ್ಲಿ ಜೀವಿಸಿದ್ದು, ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಹೈದರಾಲಿ ಸೈನಿಕರನ್ನು ಸದೆಬಡಿದು ಕೋಟೆಯನ್ನು ಉಳಿಸುವ ಸಲುವಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ವೀರವನಿತೆಯಾಗಿ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಇವರ ಬದುಕು ಭಾರತೀಯ ಮಹಿಳೆಯರಿಗೆ ಆದರ್ಶವಾಗಿದೆ. ಇಂತಹ ವೀರ ವನಿತೆಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲು ಮೂರು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಸರ್ಕಾರ ಕಾರಣವಾಗಿರುವುದಕ್ಕೆ ಸಮಿತಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ನವೆಂಬರ್ 11 ರಂದು ನಗರದ ಜೈಭೀಮ್ ವಸತಿ ನಿಲಯದ ಆವರಣದಲ್ಲಿ ನಡೆಯುವ ಜಯಂತಿ ಹಲವು ವಿಶೇಷಗಳನ್ನು ಹೊಂದಿದ್ದು, ಸರ್ವ ಜಾತಿ, ಜನಾಂಗದವರು ಏಕತೆಯಿಂದ ಭಾಗಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾಗಬೇಕು ಎಂದರು.ಜಿಲ್ಲಾ ಕೇಂದ್ರದಲ್ಲಿ ನಡೆಯುವ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಂಗವಾಗಿ ಓಬವ್ವಳ ಭಾವಚಿತ್ರವನ್ನು ನಗರದ ಅಂಬೇಡ್ಕರ್ ಭವನದಿಂದ ಪಲ್ಲಕ್ಕಿಗಳ ಮೆರವಣಿಗೆಯಲ್ಲಿ, ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ, ತಮಟೆ ವಾಧ್ಯಗಳ ಸಹಿತ ಪೂರ್ಣಕುಂಭ ಕಳಶಗಳ ಮೆರವಣಿಗೆ ಮೂಲಕ ಪ್ರಾರಂಭಿಸಿ, ಅಂಬೇಡ್ಕರ್ ವೃತ್ತ, ಬಿಬಿ ರಸ್ತೆ ಮೂಲಕ ಎಂ.ಜಿ.ರಸ್ತೆಯಲ್ಲಿರುವ ಜೈ ಭೀಮ್ ಹಾಸ್ಟೆಲ್ ಆವರಣದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ಮುಕ್ತಾಯವಾಗಲಿದೆ.
ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗುತ್ತಾರೆ. ಅಲ್ಲಿಯೇ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ವೇದಿಕೆ ಕಾರ್ಯಕ್ರಮದಲ್ಲಿ ಶಾಸಕರು, ಸಚಿವರು ಸೇರಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಎಸ್‌ಎಸ್‌ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವೀರವನಿತೆ ಒನಕೆ ಓಬವ್ವ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಲು ಉಪನ್ಯಾಸಕ ಮುನಿರಾಜು.ಎಂ.ಅರಿಕೆರೆ ಭಾಗಿಯಾಗುವರು ಎಂದು ತಿಳಿಸಿದರು.
ಮಹಿಳಾ ಮುಖಂಡರಾದ ಮಮತಾ ಮೂರ್ತಿ ಮಾತನಾಡಿ, ಒನಕೆ ಓಬವ್ವ ಮಹಿಳಾ ಲೋಕದ ಧ್ರುವತಾರೆ. ಇವರ ಧೈರ್ಯ, ಕೆಚ್ಚು, ಸಾಹಸ ಮನೋಭಾವವನ್ನು ನಾವೆಲ್ಲಾ ಅರಿಯಬೇಕಿದೆ. ಶನಿವಾರ ನಡೆಯುವ ಜಯಂತಿಯಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ದುಡಿಯೋಣ ಎಂದರು.ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ರಾಮಕೃಷ್ಣ, ರಾಮಪ್ಪ, ಜಿ.ಸಿ.ವೆಂಕಟೇಶ್, ಪಿ.ವಿ.ವೆಂಕಟೇಶ್, ಪಾಳ್ಯಕೆರೆ ವೆಂಕಟೇಶ್, ನಾರಾಯಣಸ್ವಾಮಿ,ಕೃಷ್ಣಪ್ಪ, ಗಣೇಶ್, ಎಂ.ಸಿ.ಚಿಕ್ಕನರಸಿಂಹಪ್ಪ,ಕೃಷ್ಣಮೂರ್ತಿ ಮತ್ತಿತರರು ಇದ್ದರು.