ಸಾರಾಂಶ
ತುಂಗಾಭದ್ರ ಸಭಾಂಗಣದಲ್ಲಿ ನಡೆದ ಒಬವ್ವ ಜಯಂತಿ ಆಚರಣೆಯಲ್ಲಿ ಡಿಸಿ ಜಿ.ಎಂ. ಗಂಗಾಧರ್‌ಸ್ವಾಮಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸ ನಮ್ಮ ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.ಜಿಲ್ಲಾಡಳಿತ ತುಂಗಾಭದ್ರ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ದಾವಣಗೆರೆ ಇವರ ಆಶ್ರಯದಲ್ಲಿ ನಡೆದ ವೀರವನಿತೆ ಒನಿಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶ, ಸಮಾಜ ಹಾಗೂ ರಾಜ್ಯಕ್ಕಾಗಿ ಯಾರು ತ್ಯಾಗ ಮಾಡುತ್ತಾರೆ, ಅಂತಹವರು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯುತ್ತಾರೆ. ಈ ಹಿನ್ನಲೆಯಲ್ಲಿ ನಮ್ಮ ದೇಶಕ್ಕೆ ಇರುವಂತಹ ಮಹತ್ವ ಇನ್ನೊಂದು ದೇಶಕ್ಕಿಲ್ಲ ಎಂದು ಹೇಳಿದರು.ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಗಾಂಧೀಜಿ, ನೆಹರು, ಬಾಬಾ ಸಾಹೇಬ್ ಅಂಬೇಡ್ಕರ್ ರಂತಹ ಮಹಾನೀಯರು ತಮಗಾಗಿ ಕೆಲಸ ಮಾಡದೆ, ದೇಶ ಹಾಗೂ ಸಮಾಜಕ್ಕಾಗಿ ದುಡಿದಿ ಕಾರಣ ಇತಿಹಾಸ ಪುಟಗಳಲ್ಲಿ ಅಜಾರಮರವಾಗಿ ಉಳಿದಿದ್ದಾರೆ. ಅದೇ ರೀತಿ ನಾವು ಸಮಾಜದ ಒಳಿತಿಗಾಗಿ ಕೆಲಸ ಮಾಡಿದಾಗ ಮಾತ್ರ ಇತಿಹಾಸ ಪುಟಗಳಲ್ಲಿ ಸೇರಲು ಸಾಧ್ಯ ಎಂದ ಅವರು, ಹೆಣ್ಣು ಮಕ್ಕಳು ಒನಕೆ ಓಬವ್ವನ ಧೈರ್ಯ, ಶೌರ್ಯದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಛಲವಾದಿ ಸಮಾಜದ ಮುಖಂಡರಾದ ಎಂ.ಸಿ.ಓಂಕಾರಪ್ಪ ಅವರು ಒನಕೆ ಓಬವ್ವನ ತ್ಯಾಗ, ಧೈರ್ಯ, ಸ್ವಾಮಿ ನಿಷ್ಠೆ ಬಗ್ಗೆ ಉಪನ್ಯಾಸ ನೀಡಿದರು.
ಮಹಾನಗರ ಪಾಲಿಕೆ ಮಹಾಪೌರ ಕೆ.ಚಮನ್ ಸಾಬ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್, ಎಂ.ಸಂತೋಷ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ದೂಡ ಸದಸ್ಯ ಗಿರೀಶ್, ಉಪ ಮೇಯರ್ ಸೋಗಿ ಶಾಂತಕುಮಾರ್, ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ ಸಮಾಜದ ಮುಖಂಡ ಜಯಪ್ರಕಾಶ್, ಉಪಾಧ್ಯಕ್ಷರಾದ ರುದ್ರಮ್ಮ, ಜಿಲ್ಲಾ ಮಾದಿಗ ಸಮಾಜದ ಮುಖಂಡ ಬಿ.ಎಚ್.ವೀರಭದ್ರಪ್ಪ ಹಾಗೂ ಕೆ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.