ಸಾರಾಂಶ
೨೦೨೪ರ ಚುನಾವಣೆಯಲ್ಲಿ ಮೋದಿ ಆಟ ನಡೆಯಲ್ಲ ಎನ್ನುತ್ತಿರುವವರಿಗೆ ಭಾರಿ ಆಘಾತ ಕಾದಿದೆ. ೨೦೨೯ರ ಹೊತ್ತಿಗೆ ಮೋದಿ ಆಡಳಿತದಲ್ಲಿ ದೇಶ ಜಗತ್ತಿನ ತೃತೀಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ
ಬ್ಯಾಡಗಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ೨೫ ಸ್ಥಾನ ಹಾಗೂ ದೇಶದಲ್ಲಿ ೩೫೦ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಸುಭದ್ರ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ತಾಲೂಕಿನ ತಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೨೪ರ ಚುನಾವಣೆಯಲ್ಲಿ ಮೋದಿ ಆಟ ನಡೆಯಲ್ಲ ಎನ್ನುತ್ತಿರುವವರಿಗೆ ಭಾರಿ ಆಘಾತ ಕಾದಿದೆ. ೨೦೨೯ರ ಹೊತ್ತಿಗೆ ಮೋದಿ ಆಡಳಿತದಲ್ಲಿ ದೇಶ ಜಗತ್ತಿನ ತೃತೀಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.ಬಿಜೆಪಿ ಶಾಸಕ ಬಸವನಗೌಡ ಯತ್ನಾಳ ಬಿಜೆಪಿ ನಾಯಕರ ವಿರುದ್ಧವೇ ವಾಗ್ದಾಳಿ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಏನೇ ಸಮಸ್ಯೆ ಇದ್ದರೂ ಅದು ನಮ್ಮ ಸಮಸ್ಯೆ, ಕುಟುಂಬದ ಸಮಸ್ಯೆಯನ್ನು ಕೇಂದ್ರದಲ್ಲಿನ ರಾಷ್ಟ್ರೀಯ ಹಿರಿಯ ನಾಯಕರು ಪರಿಹರಿಸುತ್ತಾರೆ ಎಂದರು.
ಒಳ ಜಗಳ, ಮುನಿಸು, ಸೇರಿದಂತೆ ಹಲವು ಸಮಸ್ಯೆಗಳನ್ನು ಕಾಂಗ್ರೆಸ್ ಎದುರಿಸುತ್ತಿದೆ. ಇಂತಹ ಪಕ್ಷಕ್ಕೆ ನಮ್ಮ ಬಿಜೆಪಿ ನಾಯಕರು ಯಾರೂ ಹೋಗಲ್ಲ ಎನ್ನುವುದು ನನ್ನ ಭಾವನೆ. ಒಂದು ವೇಳೆ ಹೋದಲ್ಲಿ ಅವರಂಥ ಮೂರ್ಖರು ಮತ್ಯಾರೂ ಇಲ್ಲ ಎಂದರು.ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಜೋಶಿ ಕಾರಣ ಎಂಬ ಬಿ.ಕೆ. ಹರಿಪ್ರಸಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ ಅವರಿಗೆ ನಾನು ಇಷ್ಟೇ ಹೇಳೋದು, ನೀವು ನನ್ನ ಎಷ್ಟೇ ಬಯ್ದರೂ ಮಂತ್ರಿ ಸ್ಥಾನ ಸಿಗಲ್ಲ, ಒಂದು ವೇಳೆ ಸಿಗುತ್ತೆ ಅನ್ನೋದಾದರೆ ಬಯ್ಯಲಿ, ನನ್ನದೇನೂ ಅಭ್ಯಂತರವಿಲ್ಲ ಎಂದರು.