ಹನುಮ ಜನಿಸಿದ ಸ್ಥಳ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಡಿ. 2 ಮತ್ತು 3ರಂದು ಎರಡು ದಿನಗಳ ಕಾಲ ನಡೆಯುವ ಹನುಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿವಿಧ ಸಮಿತಿಗಳನ್ನು ರಚಿಸಿದೆ.
ರಾಮಮೂರ್ತಿ ನವಲಿ
ಗಂಗಾವತಿ: ಹನುಮ ಜನಿಸಿದ ಸ್ಥಳ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಡಿ. 2 ಮತ್ತು 3ರಂದು ಎರಡು ದಿನಗಳ ಕಾಲ ನಡೆಯುವ ಹನುಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿವಿಧ ಸಮಿತಿಗಳನ್ನು ರಚಿಸಿದೆ. ಪೊಲೀಸರು ಹಾಗೂ ತಾಪಂ, ಗ್ರಾಪಂ ಅಧಿಕಾರಿಗಳನ್ನು ನಿಯೋಜಿಸಿದೆ.ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕೊಪ್ಪಳ ರಾಷ್ಟ್ರೀಯ ಹೆದ್ದಾರಿ, ಗಂಗಾವತಿ ಮತ್ತು ಬಳ್ಳಾರಿ ರಾಜ್ಯ ಹೆದ್ದಾರಿಗಳ ಪ್ರವೇಶ ದ್ವಾರದಲ್ಲಿ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಅಂಜನಾದ್ರಿ ಸನಿಹದಲ್ಲಿ ಆರೋಗ್ಯಕೇಂದ್ರ ಸ್ಥಾಪಿಸಲಾಗಿದ್ದು, ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ.
ಅಂಗಡಿಗಳ ತೆರವು: ಅಂಜನಾದ್ರಿ ಬೆಟ್ಟದ ಕೆಳಗೆ ಇದ್ದ ಗೂಡಂಗಡಿಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಈಚೆಗೆ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಮುಂಭಾಗದಲ್ಲಿ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತದಿಂದಾಗಿ ಕೆಲವು ಭಕ್ತರು ಗಾಯಗೊಂಡಿದ್ದರು. ಈ ಘಟನೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈಗ ಗೂಡಂಗಡಿಗಳನ್ನು ತೆರವುಗೊಳಿಸಿ, ಪರ್ಯಾಯ ಸ್ಥಳದಲ್ಲಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡಿದೆ. ಸ್ವಚ್ಛತೆ ಜತೆಗೆ ಕುಡಿಯುವ ನೀರು, ಇತರ ಮೂಲಸೌಲಭ್ಯ ಕಲ್ಪಿಸಿದೆ.ಪ್ರಸಾದ ವ್ಯವಸ್ಥೆ: ಅಂಜನಾದ್ರಿಗೆ ಬರುವ ಭಕ್ತರಿಗೆ ಡಿ. 2 ಮತ್ತು 3ರಂದು ಪ್ರಸಾದ ವಿತರಣೆಗೆ ಸಿದ್ಧತೆ ನಡೆದಿದೆ. ಡಿ. 2ರಂದು ರಾತ್ರಿಯಿಂದ ಪಲಾವ್ ಮತ್ತು ಮೊಸರು ಪಚಡಿ ನೀಡಲಾಗುತ್ತದೆ. ರಾತ್ರಿ 12 ಗಂಟೆಯಿಂದ ಕೇಸರಿಬಾತ್, ಅನ್ನ, ಸಾರು, ಟೊಮ್ಯಾಟೋ ಚಟ್ನಿ, ಹುಗ್ಗಿ ವ್ಯವಸ್ಥೆ ಕಲ್ಪಿಸಿದೆ.
ದೇವರ ದರ್ಶನದ ಆನಂತರ ಕೌಂಟರ್‌ಗಳಲ್ಲಿ ಲಾಡು, ಆಂಜನೇಯಸ್ವಾಮಿ ಭಾವಚಿತ್ರ, ತೀರ್ಥ, ಅಂಜನ, ಕುಂಕಮ ಮತ್ತು ದಾರಗಳು ನೀಡಲು ನಿರ್ಧರಿಸಿದ್ದು, ಇದಕ್ಕೆ 100 ಮತ್ತು ₹60 ಶುಲ್ಕ ನಿಗದಿಪಡಿಸಲಾಗಿದೆ.ಸಂಕೀರ್ತನ ಯಾತ್ರೆ: ಹನುಮದ್ ವ್ರತಾಚರಣೆ ಮತ್ತು ಹನುಮಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಹನುಮಮಾಲಾಧಾರಿಗಳು ಗಂಗಾವತಿ ನಗರದಲ್ಲಿ ಸಂಕೀರ್ತನ ಯಾತ್ರೆ ಕೈಗೊಂಡಿದ್ದಾರೆ. ಡಿ. 3ರಂದು ಬೆಳಗ್ಗೆ 8 ಗಂಟೆಗೆ ನಗರದ ಎಪಿಎಂಸಿಯಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೂ ಮೆರವಣಿಗೆ ನಡೆಯಲಿದೆ. ಈ ಯಾತ್ರೆಯಲ್ಲಿ ಸುಮಾರು ಎರಡೂವರೆ ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
3 ಸಾವಿರ ಪೊಲೀಸರ ನಿಯೋಜನೆ: ಅಂಜನಾದ್ರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಹನುಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಗಂಗಾವತಿಯಲ್ಲಿ ನಡೆಯುವ ಸಂಕೀರ್ತನ ಯಾತ್ರೆ ಮತ್ತು ಅಂಜನಾದ್ರಿ ಹನುಮಾಲೆ ವಿಸರ್ಜನೆಗೆ 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಇಲಾಖೆ ನಿಗಾ ವಹಿಸಿದ್ದು, ವಿಡಿಯೋ, ಸಿಸಿ ಕ್ಯಾಮೆರಾಗಳನ್ನು ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸಲಾಗಿದೆ.ಅಂಜನಾದ್ರಿಯಯಲ್ಲಿ ಎರಡು ದಿನಗಳ ಕಾಲ ನಡೆಯುವ ಹನುಮಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಪ್ಲಾಸ್ಟಿಕ್ ಬಳಸದಂತೆ ಚೆಕ್‌ಪೋಸ್ಟ್‌ಗಳಲ್ಲಿ ಬ್ಯಾನರ್ ಅಳವಡಿಸಿ ಜಾಗೃತಿ ಮೂಡಿಸಲಾಗಿದೆ. ದೇಗುಲದಲ್ಲಿ ಹೋಮ-ಹವನಗಳ ಸಿದ್ಧತೆ ಮತ್ತು ಬೆಟ್ಟದ ಕೆಳಗೆ ಪಾರ್ಕಿಂಗ್ ವ್ಯವಸ್ಥೆ ಜಿಲ್ಲಾಡಳಿತ ಕೈಗೊಂಡಿದೆ ಎಂದು ಕೊಪ್ಪಳ ಆಯುಕ್ತ ಮಹೇಶ ಮಾಲಗಿತ್ತಿ ಹೇಳಿದರು.