ಕನಕಗಿರಿ ಉತ್ಸವದಲ್ಲಿ ಒಂದೂವರೆ ಲಕ್ಷ ಜನರಿಂದ ಭೋಜನ

| Published : Mar 05 2024, 01:34 AM IST

ಸಾರಾಂಶ

ಉತ್ಸವದ ಕರ್ತವ್ಯಕ್ಕೆ ಆಗಮಿಸಿದ್ದ ಜಿಲ್ಲೆಯ ವಿವಿಧ ತಾಲೂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಊಟಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ದಿನಕ್ಕೆ ಅಡುಗೆಗೆ ೧ ಲಕ್ಷ ಲೀಟರ್ ನೀರು ಬಳಕೆಯಾಗಿದೆ.

ಕನಕಗಿರಿ: ಮಾ.೨, ೩ರಂದು ನಡೆದ ಕನಕಗಿರಿ ಉತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಭೋಜನದಲ್ಲಿ ೧.೫೦ ಲಕ್ಷ ಜನ ಊಟ ಸವಿದಿದ್ದಾರೆ.ಎರಡೂ ದಿನಗಳ ಕಾಲ ಬೆಳಗ್ಗೆ ಸಮಯದಲ್ಲಿ ೧೦ ಕ್ವಿಂಟಲ್ ಉಪ್ಪಿಟ್ಟು, ೧೫೦ ಕ್ವಿಂಟಲ್ ಅನ್ನ, ೧೦ ಕೊಪ್ಪರಕಿ ಸಾರು, ೩ ಕ್ವಿಂಟಲ್ ಬದನೆಕಾಯಿ ಪಲ್ಲೆ, ೩೫ ಕ್ವಿಂಟಲ್ ಹುಗ್ಗಿ-ಪಾಯಸ ಸಿದ್ಧಪಡಿಸಿ, ಉತ್ಸವಕ್ಕೆ ಬಂದ ಲಕ್ಷಾಂತರ ಜನ ದೇವರ ಪ್ರಸಾದದ ರೂಪದಲ್ಲಿ ಊಟ ಸ್ವೀಕರಿಸಿದ್ದು ವಿಶೇಷವಾಗಿತ್ತು. ಅಡುಗೆ ಪದಾರ್ಥ ಎಲ್ಲಿಯೂ ಚೆಲ್ಲದಂತೆ ನೋಡಿಕೊಳ್ಳಲಾಗಿತ್ತು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಪಾಳಿ ವ್ಯವಸ್ಥೆ ಮಾಡಲಾಗಿತ್ತು.ಉತ್ಸವದ ಕರ್ತವ್ಯಕ್ಕೆ ಆಗಮಿಸಿದ್ದ ಜಿಲ್ಲೆಯ ವಿವಿಧ ತಾಲೂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಊಟಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ದಿನಕ್ಕೆ ಅಡುಗೆಗೆ ೧ ಲಕ್ಷ ಲೀಟರ್ ನೀರು ಬಳಕೆಯಾಗಿದೆ. ಮಠ ಹಾಗೂ ದೇವಸ್ಥಾನದಲ್ಲಿ ನಡೆದ ಅನ್ನ ದಾಸೋಹದ ರೀತಿ ಕನಕಗಿರಿ ಉತ್ಸವದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರು ಕೂಡ ಸರದಿಯಲ್ಲಿ ಬಂದು ಊಟ ಮಾಡಿಕೊಂಡು ಹೋಗಿದ್ದಾರೆ. ಎಲ್ಲವೂ ಶಾಂತಿಯಿಂದ ನಡೆದಿದ್ದರಿಂದ ೨೦೨೪ರ ಉತ್ಸವ ಅಭೂತಪೂರ್ವ ಯಶಸ್ವಿಗೆ ಕಾರಣವಾಗಿದೆ.ಈ ಕುರಿತು ಊಟದ ಜವಾಬ್ದಾರಿ ವಹಿಸಿಕೊಂಡಿದ್ದ ಸುಳೇಕಲ್ ಗ್ರಾಮದ ಮುಖಂಡ ವಿರೂಪಾಕ್ಷಪ್ಪ ಮಾಲಿಪಾಟೀಲ್ ಕನ್ನಡಪ್ರಭದೊಂದಿಗೆ ಮಾತನಾಡಿ, ಎರಡು ದಿನಗಳ ಉತ್ಸವದಲ್ಲಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದಿದೆ. ಸುಳೇಕಲ್ ಗ್ರಾಮದ ೧೦೦ ಅಡುಗೆದಾರರು, ೩೦೦ ಬಾಣಸಿಗರು, ಅಡುಗೆ ಸಾಮಗ್ರಿಗಳ ಸ್ವಚ್ಛತೆ ೧೦೦ ಜನರನ್ನು ನಿಯೋಜಿಸಿಕೊಂಡಿದ್ದರಿಂದ ಎಲ್ಲಿಯೂ ಸಮಸ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ.