ಯೋಗಾಭ್ಯಾಸದಿಂದ ವಿಶಿಷ್ಟ ಚೈತನ್ಯ ಅನುಭವಿಸಬಹುದು

| Published : Jun 22 2024, 12:45 AM IST

ಸಾರಾಂಶ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯೋಗ ಗುರು ಶ್ರೀ ಜಡೆ ಸಂಸ್ಥಾನ ಮಠದ ಡಾ.ಮನಿಪ್ರ ಮಹಾಂತ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಯೋಗ ಹೊಂದಿದೆ. ನಿತ್ಯ ಯೋಗಾಭ್ಯಾಸದಿಂದ ಪ್ರತಿಯೊಬ್ಬರೂ ವಿಶಿಷ್ಟವಾದ ಚೈತನ್ಯವನ್ನು ಅನುಭವಿಸಬಹುದಾಗಿದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮನಿಪ್ರ ಮಹಾಂತ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ 10 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಯೋಗವು ಮನಸ್ಸನ್ನು ಸಂಪೂರ್ಣವಾಗಿ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಯೋಗ ಅನಗತ್ಯ ಉದ್ವೇಗಗಳನ್ನು ಹೋಗಲಾಡಿಸಿ ಶಾಂತ ಮನಸ್ಥಿತಿಯಿಂದ ದೈನಿಂದಿನ ಕೆಲಸ ಕಾರ್ಯ ನಿರ್ವಹಿಸಲು ಸಹಕಾರ ಮಾಡುತ್ತದೆ. ಮಾನವ ಜೀವಿಯು ತನ್ನ ಕರ್ತವ್ಯಗಳನ್ನು ಪರಿಪಾಲಿಸಲು ಮತ್ತು ಧಾರ್ಮಿಕ ಜೀವನ ನಡೆಸಲು ಈ ದೇಹವು ಅತ್ಯಗತ್ಯವಾದ ವಾಹನವಾಗಿದೆ. ಹಾಗಾಗಿ ಆತ್ಮದೊಂದಿಗೆ ಮನಸ್ಸನ್ನು ಐಕ್ಯಗೊಳಿಸಲು ದೇಹವನ್ನು ಆರೋಗ್ಯಪೂರ್ಣವಾಗಿ ಇರಿಸಬೇಕು.

ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ದೇಹವನ್ನು ಐದು ಕೋಶಗಳಿರುವ ಮೂರು ಸ್ತರಗಳಾಗಿ ವಿಂಗಡಿಸಿದ್ದು ಅಂತರಾತ್ಮ, ಮನಸ್ಸು ದೇಹ ಎಂಬ ಮೂರು ಸ್ತರದಲ್ಲಿ ವಿಭಾಗಿಸಿದ್ದಾರೆ. ದೇಹವು ಜಡವಾದುದು. ಮನಸ್ಸು ಮಾತ್ರ ಬಹು ತೀಕ್ಷ್ಣ ಹಾಗೂ ಕ್ರಿಯಾಶೀಲವಾದುದು. ಆತ್ಮ ದೀಪದ ರೀತಿ ಪ್ರಕಾಶಮಾನವಾಗಿದ್ದು ನಿತ್ಯ ಯೋಗದ ಅಭ್ಯಾಸದಿಂದ ದೇಹದ ಜಡತ್ವವು ನಿವಾರಣೆಯಾಗಿ ಸೂಕ್ಷ್ಮ ಹಾಗೂ ಕ್ರಿಯಾಶೀಲವಾದ ಮನಸ್ಸಿನ ಜತೆ ಸ್ಪಂದಿಸಲು ಸಿದ್ಧಗೊಳ್ಳುತ್ತದೆ. ಆನಂತರ ದೇಹ ಮನಸ್ಸುಗಳೆರಡೂ ಸ್ವಯಂಪ್ರಕಾಶವಾದ ಆತ್ಮದೊಂದಿಗೆ ವಿಹರಿಸಲು ಸಿದ್ದವಾಗುತ್ತವೆ ಎಂದು ತಿಳಿಸಿದರು.

ದೇಹದ ತ್ವಚೆ ಹಾಗೂ ಆತ್ಮ ಪರಸ್ಪರ ಹಾಸುಹೊಕ್ಕಾಗಿದ್ದು, ಯೋಗವು ದೇಹದೊಂದಿಗೆ ಕಾರ್ಯ ನಿರ್ವಹಿಸುವ ಜತೆಗೆ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಬೌದ್ಧಿಕತೆಯನ್ನು ಅಭಿವೃದ್ಧಿಗೊಳಿಸುತ್ತದೆ. ದೇಹವನ್ನು ಮನಸ್ಸು ಮತ್ತು ಆತ್ಮದ ಜತೆ ಯೋಗ ಬೆಸೆಯುತ್ತದೆ. ಜೀವನದ ಅಂತಿಮ ಗುರಿಯಾದ ಆತ್ಮ ಸಾಕ್ಷಾತ್ಕಾರವನ್ನು ಸಿದ್ಧಿಸಿಕೊಳ್ಳಲು ಯೋಗ ನೆರವಾಗುತ್ತದೆ ಎಂದು ಯೋಗ ಮತ್ತು ಪ್ರಾಣಾಯಾಮದ ಪ್ರಾತ್ಯಕ್ಷಿಕೆಯೊಂದಿಗೆ ಅವರು ಯೋಗದ ಮಹತ್ವ ತಿಳಿಸಿದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ಸಂಸ್ಥೆಯ ಆಡಳಿತ ಪ್ರತಿನಿಧಿ ಡಾ.ಜಿ.ಎಸ್.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೂ.21 ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಲು ದೇಶ-ವಿದೇಶಗಳ ಸಮುದಾಯಗಳಲ್ಲಿ ಯೋಗದ ಕುರಿತಾದ ಭರವಸೆ ಮತ್ತು ವಿಶ್ವಾಸಗಳು ಹೆಚ್ಚುತ್ತಿರುವುದೇ ಕಾರಣ ಎಂದರು. ಯೋಗವು ಶರೀರ,ಮನಸ್ಸು ಮತ್ತು ಆತ್ಮದ ಕನ್ನಡಿಯಾಗಿದ್ದು ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ ಎಂದರು.

ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಸಂಸ್ಥೆ ಅಧ್ಯಕ್ಷ ಎಂ.ಬಿ ಶಿವಕುಮಾರ್, ಅಂಗ ಸಂಸ್ಥೆಗಳ ಮುಖ್ಯಸ್ಥ ಕುಬೇರಪ್ಪ, ಡಾ.ವೀರೇಂದ್ರಗೌಡ, ರವೀಂದ್ರ, ಶರ್ವಾಣಿ, ವಿಶ್ವನಾಥ, ವಿದ್ಯಾಶಂಕರ್, ಪ್ರಶಾಂತ ಕುಬುಸದ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೌರಿ ತಂಡದವರು ಪ್ರಾರ್ಥಿಸಿ, ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯ ವಿಶ್ವನಾಥ ಸ್ವಾಗತಿಸಿ, ಶಿಕ್ಷಕಿ ರೇಖಾ ನಿರೂಪಿಸಿ, ವಿಕ್ಟೋರಿಯಾ ವಂದಿಸಿದರು.