ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಶಾಲಾ, ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಲಭ್ಯವಾಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಆ ಮೂಲಕ ಜೀವನದಲ್ಲಿ ಉನ್ನತ ಹಂತಕ್ಕೆ ಏರಬೇಕು ಎಂದು ಪ್ರಗತಿಪರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ. ವಿ. ಬಸವರಾಜ್ ಹೇಳಿದರು. ಗುಬ್ಬಿ ತಾಲೂಕಿನ ಸಿ ಎಸ್ ಹೋಬಳಿ ಮಾವಿನಹಳ್ಳಿಯ ಪ್ರಗತಿಪರ ವಿದ್ಯಾವರ್ಧಕ ಶಾಲಾ ಕಾಲೇಜಿನಲ್ಲಿ ಉಧ್ಯಮಿ ಹಾಗೂ ಮುಖಂಡ ಕೆಬಿ ಬೋರೆಗೌಡರು ಮಕ್ಕಳಿಗೆ ನೀಡುತ್ತಿರುವ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಹಿಂದೆ ನಮ್ಮ ಹಿರಿಯರು ಹಳ್ಳಿ ಮಕ್ಕಳು ಪಟ್ಟಣಗಳಿಗೆ ಹೋಗಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಿಲ್ಲದ ಕಾಲಘಟ್ಟದಲ್ಲಿ ನಮ್ಮ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದರಿಂದ ಎಷ್ಟೋ ಜನ ಹಳ್ಳಿ ಮಕ್ಕಳು ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಮಾನಗಳಿಗೆ ಏರಿದ್ದಾರೆ. ಇಂತಹ ಸಂಸ್ಥೆಗಳು ಬೆಳೆಯಲು ಅನೇಕ ಮಹನೀಯರು ಕಾರಣಕರ್ತರಾಗಿದ್ದಾರೆ. ಈಗಿನ ಸಂದರ್ಭದಲ್ಲಿಯೂ ಸಹ ಬೋರೆಗೌಡರಂತಹ ಹಿರಿಯರು ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನಿಡುವ ಮೂಲಕ ಅವರ ಬೆಳವಣಿಗೆಗೆ ಪಾತ್ರರಾಗುತ್ತಿದ್ದಾರೆ. ಅವರ ಸಹಕಾರವನ್ನು ಮಕ್ಕಳು ಎಂದೂ ಮರೆಯಬಾರದು ಎಂದರು.ಕೆ. ಬಿ. ಬೋರೇಗೌಡ ಮಾತನಾಡಿ, ಮಕ್ಕಳು ಚೆನ್ನಾಗಿ ಓದಿ ಮುಂದೆ ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕು. ಇದಕ್ಕೆ ಛಲ ಇರಬೇಕು. ಓದಿನ, ಜ್ಞಾನದ ಹಸಿವು ಇರಬೇಕು. ಇದು ಶಿಕ್ಷಣದಲ್ಲಿ ಮತ್ತು ಜೀವನದಲ್ಲಿ ಸಾಧನೆ ಮಾಡಲು ಪ್ರೇರೇಪಣೆಯಾಗುತ್ತದೆ. ನಾನು ಓದುತ್ತಿದ್ದಾಗ ನನಗೆ ನನ್ನ ಶಿಕ್ಷಕರು ಸಹಾಯ ಮಾಡಿ, ಜೀವನದಲ್ಲಿ ಉತ್ತಮ ಮಾರ್ಗ ಹಾಕಿಕೊಟ್ಟಿದ್ದರಿಂದಲೇ ನಾನು ಸಮಾಜದಲ್ಲಿ ಈ ಹಂತಕ್ಕೆ ಏರಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ಮಟ್ಟಕ್ಕೇರಿದರು, ಶಿಕ್ಷಕರನ್ನು ಮತ್ತು ತಂದೆ ತಾಯಿಯನ್ನು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು. ನಿವೃತ್ತ ಶಿಕ್ಷಕ ವೀರಣ್ಣ ಮಾತನಾಡಿ, ಬೋರೆಗೌಡರಂತಹ ಕೊಡುಗೈ ದಾನಿಗಳು ಹೆಚ್ಚಾಗಬೇಕು. ಹೀಗಾದರೆ ಬಡವರು ಯಾವುದೇ ಕೊರತೆಗಳನ್ನು ನೀಗಿಸಿಕೊಳ್ಳಲು ಸಹಕಾರವಾಗುತ್ತದೆ. ಮಕ್ಕಳು ಇಂತವರ ಸಹಕಾರ ಪಡೆದು ಕಲಿಕೆಯಲ್ಲಿ ಮುಂದುವರಿಯಬೇಕು. ಈಗಿನ ಮಕ್ಕಳು ಯಾವುದೇ ಭಾಷೆಯನ್ನು ಸ್ವಚ್ಛವಾಗಿ ಕಲಿಯಬೇಕು. ಭಾಷೆಯನ್ನು ಕಲಿಯುವುದರಿಂದ ವಿಫುಲ ಅವಕಾಶಗಳು ಮಕ್ಕಳಿಗೆ ದೊರೆಯುತ್ತವೆ ಎಂದರು.ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪ್ರಗತಿಪರ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುನಾಥ, ಉಪನ್ಯಾಸಕರುಗಳಾದ ಕೃಷ್ಣಪ್ಪ, ಶಂಕರಪ್ಪ, ಡಾ. ಪವನಗಂಗಾಧರ, ಹಾಗೂ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಜಿ ವೆಂಕಟೇಶ್, ಸಹಶಿಕ್ಷಕರುಗಳಾದ ಬೆಟ್ಟಸ್ವಾಮಯ್ಯ, ಚಂದ್ರಯ್ಯ, ಅಂದಾನಯ್ಯ, ವಿಶ್ವನಾಥ್, ಶಿಕ್ಷಕಿಯರಾದ ಭಾರತಿ, ಸುವರ್ಣ ಮತ್ತು ರಾಜೇಶ್ವರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಮಾರುತೇಶ್ ನಿರೂಪಿಸಿದರು.