ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ವ್ಯಕ್ತಿ ಬೆಳೆಯಲು ಶಕ್ತಿ, ಶ್ರದ್ಧೆಯಿದ್ದರೆ ಹೇಗಾದರೂ ಬೆಳೆಯುತ್ತಾರೆ ಎನ್ನುವುದಕ್ಕೆ ತರಳಬಾಳು ಪರಂಪರೆ ಮರುಳಸಿದ್ದರೆ ನಿದರ್ಶನ ಎಂದು ಸಾಣೇಹಳ್ಳಿ ಮಠದ ಪಂಡಿತಾರಾದ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಸಾಣೇಹಳ್ಳಿ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಆಯೋಜಿಸಿದ್ದ ತರಳಬಾಳು ಗುರುಪರಂಪರೆ ಕುರಿತ ದಂದಣ ದತ್ತಣ ಗೋಷ್ಠಿ ಸಾನ್ನಿಧ್ಯವಹಿಸಿ ಮಾತನಾಡಿ, ಮರುಳಸಿದ್ಧರು ಹಂಚಿ ಉಣ್ಣುವ ಪರಂಪರೆ ಪ್ರಾರಂಭಿಸಿ ಜಾತ್ಯತೀತ ಮನೋಭಾವ ಬೆಳೆಸುವ ಕೆಲಸ ಮಾಡಿದರು. ಮಾರಿಜಾತ್ರೆಯಲ್ಲಿ ಪ್ರಾಣಿ ಬಲಿಕೊಡುವುದನ್ನು ಗಮನಿಸಿದ ಮರುಳಸಿದ್ದರು ಇದು ಪೂಜಾರಿ ಪುರೋಹಿತರ ಕುತಂತ್ರ ಎಂದು ತಿಳಿದು, ತನ್ನ ಮಕ್ಕಳನ್ನು ಬಯಸುವುದು ಇನ್ನೆಂಥ ದೇವರೆಂದು ಪ್ರಶ್ನಿಸಿ ಪ್ರತಿಭಟನೆ ಮಾಡಿ, ಪ್ರಾಣಿಬಲಿಕೊಡುವುದಾದರೆ ಮೊದಲು ನನ್ನನ್ನೇ ಬಲಿ ಕೊಡು ಎಂದು ವಿರೋಧ ಮಾಡಿದರು ಎಂದರು.
ಒಂದು ಮಠದ ಪರಂಪರೆ ಸ್ವಾಮೀಜಿಗಳಿಂದ ಮಾತ್ರ ಬೆಳೆಸಲು ಸಾಧ್ಯವಿಲ್ಲ, ಶಿಷ್ಯರು ಸ್ವಾಮೀಜಿಗಳನ್ನು ಜಾಗೃತಗೊಳಿಸಬೇಕು. ಸ್ವಾಮೀಜಿಗಳು ಶಿಷ್ಯರನ್ನು ಜಾಗೃತಗೊಳಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯ. ಮಕ್ಕಳು ಓದಿದರೆ, ನೃತ್ಯ ಮಾಡಿದರೆ, ಹಾಡಿದರೆ ಸಾಲದು. ಇವುಗಳ ಜೊತೆಯಲ್ಲಿ ನಿಮ್ಮ ನಡವಳಿಕೆ ಬದಲಾಗಬೇಕು. ಸುಳ್ಳು, ಕಳ್ಳತನ, ಜಗಳ, ಮತ್ತೊಬ್ಬರಿಗೆ ತೊಂದರೆ ಕೊಡದೇ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಂಡು ಹೋದರೆ ಈ ಪೀಠದ ಪರಂಪರೆ ವಾರಸುದಾರರಾಗಲಿಕ್ಕೆ ಅರ್ಹರಾಗುತ್ತೀರಿ ಎಂದರು.ಆಸಕ್ತಿ ತನ್ನಷ್ಟಕ್ಕೇ ತಾನೇ ಮೂಡುವುದಿಲ್ಲ ಒಂದಿಷ್ಟು ದಿಗ್ಭಂಧನ ಹಾಕಬೇಕಾಗುತ್ತದೆ. ಯಾಕೆಂದರೆ ಈ ದೇಶದಲ್ಲಿ ಇನ್ನೂ ಸ್ವಾತಂತ್ರ್ಯದ ಅರ್ಥ ಸರಿಯಾಗಿ ಬಳಕೆ ಮಾಡಿಕೊಂಡಂಥವರು ತುಂಬಾ ವಿರಳ. ಆಗ ಸ್ವಾತಂತ್ರ್ಯದ ಜೊತೆಗೆ ಸರ್ವಾಧಿಕಾರ ಮಾಡುವಂಥ ಸಂದರ್ಭ ಬರಬೇಕಾಗುತ್ತದೆ. ಹಾಗಾಗಿ ಅಧ್ಯಾಪಕರಿಗೆ ಹೇಳುವಂಥದ್ದು ಈ ವರ್ಷ ನಾಟಕೋತ್ಸವಕ್ಕೆ ಆಸಕ್ತ ಅಧ್ಯಾಪಕರು, ವಿದ್ಯಾರ್ಥಿಗಳೂ ಸೇರಿ ಶರಣರ ನಾಟಕ ಅಭಿನಯಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಅಧ್ಯಾಪಕ ಅಣ್ಣಿಗೆರೆ ಕೆ.ವಿರೂಪಾಕ್ಷಪ್ಪ ಮಾತನಾಡಿ, ಮಠಗಳು ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿವೆ. ತರಳಬಾಳು ಮಠ ಒಂದು ಕಾಲದಲ್ಲಿ ದುಗ್ಗಾಣಿ ಮಠ ಅಂತ ಕರೆಸಿಕೊಂಡಿತ್ತು. ಆದರೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಖಾಮಠ ಬೆಳೆಸಿದ ಕೀರ್ತಿ ಪಂಡಿತಾರಾಧ್ಯ ಶ್ರೀಗಳಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ತರಳಬಾಳು ಗುರುಪರಂಪರೆ ವಿಷಯ ಕುರಿತು ತೋರಣ ಜಿ.ಎ, ಜ್ಞಾನೇಶ್, ಲಾವಣ್ಯ ಮಾತನಾಡಿದರು. ಶಾಲಾಮಕ್ಕಳು ವಚನಗೀತೆ ಹಾಡಿದರು. ತೀರ್ಥರಾಜ್ ಎನ್.ಎಸ್. ಸ್ವಾಗತಿಸಿ, ಸಚಿನ್.ಡಿ ನಿರೂಪಿಸಿದರು. ಶಾಲಾ ಮಕ್ಕಳು ಶಿವಕುಮಾರ ಶ್ರೀಗಳವರನ್ನು ಕುರಿತಂತೆ ರಚಿಸಿದ ಸಿರಿಗೆರೆ ಶ್ರೀಮಂತ ತರಳಬಾಳು ಧೀಮಂತ ಎನ್ನುವ ಗೀತೆಗೆ ಆಕರ್ಷಕ ನೃತ್ಯ ಮಾಡಿದರು. ಸಭೆಯಲ್ಲಿ ಶಾಲಾಮಕ್ಕಳು, ಶಿಕ್ಷಕರು, ನೌಕರರು, ಗ್ರಾಮಸ್ಥರು, ಪೋಷಕರು ಭಾಗವಹಿಸಿದ್ದರು.