ಸಮಾಜದ ಮಕ್ಕಳು ಪ್ರತಿಭಾವಂತರಾಗಬೇಕು. ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬಂದು ಉನ್ನತ ಹುದ್ದೆಗಳನ್ನು ಅವಲಂಬಿಸಬೇಕು. ಸಮುದಾಯದ ಪ್ರಗತಿಗೆ ಶ್ರಮಿಸುವಂತೆ ಸಲಹೆ ನೀಡಿದರು. ಈಗಾಗಲೇ ಹಾಸ್ಟೆಲ್ ಕಟ್ಟಡಕ್ಕೆ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ೧ ಕೋಟಿ ರು. ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗಂಗಾಮತಸ್ಥ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯಾಸಂಗಕ್ಕೆ ಅನುಕೂಲವಾಗುವಂತೆ ವಸತಿ ನಿಲಯ ಕಟ್ಟಡಕ್ಕೆ ಸಂಸದರ ನಿಧಿಯಿಂದ ಒಂದು ಕೋಟಿ ರು. ಹಣವನ್ನು ಬಿಡುಗಡೆಗೊಳಿಸುವುದಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಶ್ರೀನಿಜ ಶರಣ ಅಂಬಿಗರ ಚೌಡಯ್ಯ ಸೌಹಾರ್ದ ಸಹಕಾರಿ ಸಂಘ, ಮಂಡ್ಯ ತಾಲೂಕು ಮಹಿಳಾ ಗಂಗಾಮತಸ್ಥರ ಬೆಸ್ತರ ಸಂಘದ ಸಹಯೋಗದೊಂದಿಗೆ ನೂತನ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯಕ್ಕೆ ಚಾಲನೆ ಹಾಗೂ ಜಿಲ್ಲಾ ಮಟ್ಟದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಶ್ರೀಗಂಗಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಮಕ್ಕಳು ಪ್ರತಿಭಾವಂತರಾಗಬೇಕು. ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬಂದು ಉನ್ನತ ಹುದ್ದೆಗಳನ್ನು ಅವಲಂಬಿಸಬೇಕು. ಸಮುದಾಯದ ಪ್ರಗತಿಗೆ ಶ್ರಮಿಸುವಂತೆ ಸಲಹೆ ನೀಡಿದರು. ಈಗಾಗಲೇ ಹಾಸ್ಟೆಲ್ ಕಟ್ಟಡಕ್ಕೆ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ೧ ಕೋಟಿ ರು. ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ತಕ್ಷಣಕ್ಕೆ ೧೦ ಲಕ್ಷ ರು. ಹಣವನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ನೀಡಿರುವ ೨೦ ಲಕ್ಷ ರು. ಹಣವನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸುವಂತೆ ಸಂಘದವರಿಗೆ ತಿಳಿಸಿದರು.

ಆ ನಂತರದಲ್ಲಿ ಕುಮಾರಸ್ವಾಮಿ ಅವರು ಘೋಷಿಸಿರುವ ೧ ಕೋಟಿ ರು. ಹಣವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಸಕಲ ರೀತಿಯಲ್ಲೂ ಅನುಕೂಲಗಳನ್ನು ಕಲ್ಪಿಸಿಕೊಡಲಾಗುವುದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಸಮುದಾಯದವರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ನಿಮ್ಮ ಬಹುದಿನದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ನಾಯಕರರು ಮತ್ತು ನಾನು ಕಾರ್ಯೋನ್ಮುಖರಾಗಿರುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸಹಕಾರಿ ಸಂಘದ ಅಧ್ಯಕ್ಷ ಬಿ.ಲಿಂಗಯ್ಯ ವಹಿಸಿದ್ದರು.

ಜಿಲ್ಲಾ ಗಂಗಾಮತಸ್ಥರ ಬೆಸ್ತರ ಸಂಘದ ಅಧ್ಯಕ್ಷ ಎಸ್.ರಮೇಶ್, ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಎಸ್.ಉಮೇಶ್ ಹಾಡ್ಯ, ಕರ್ನಾಟಕ ಪ್ರದೇಶ ಹಿಂದುಳಿದ ವರ್ಗಗಳ ಮಹಾ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಬಿ.ಜಯರಾಮು, ಜಿಲ್ಲಾ ಗಂಗಾಮತಸ್ಥ ಕ್ಷೇಮಾಭಿವೃದ್ಧಿ ಸಂಘದ ಖಚಾಂಚಿ ಎಚ್.ಗಿರೀಶ್, ರಾಜ್ಯ ಮೀನುಗಾರ ಮಹಾಮಂಡಳಿ ನಿರ್ದೇಶಕರಾದ ಈರಯ್ಯ ಕನ್ನಲಿ , ಎಂ.ಎಲ್.ಲಿಂಗರಾಜಮ್ಮ, ರಾಧಾಮಣಿ ಇತರರಿದ್ದರು.