ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶ್ರೀರಂಗಪಟ್ಟಣಕ್ಕೆ ಹೋಗಿ ಕಾರ್ಯ ಕಲಾಪ ನಡೆಸಲು ವಕೀಲರು ಮತ್ತು ಕಕ್ಷಿದಾರರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ವಕೀಲರು ಹಲವು ಬಾರಿ ಪ್ರಯತ್ನ ಪಟ್ಟು ಜಿಲ್ಲಾ ನ್ಯಾಯಾಲಯಕ್ಕೆ ಶ್ರಮಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜಿಲ್ಲೆಯ ಮೂರನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಅಸೀನ ಶ್ರೀರಂಗಪಟ್ಟಣ) ವಾರದಲ್ಲಿ ಒಂದು ದಿನ ಕೆ.ಆರ್.ಪೇಟೆ ನ್ಯಾಯಾಲಯದಲ್ಲಿ ಪ್ರಾರಂಭವಾಗಲಿದೆ ಎಂದು ಮಂಡ್ಯ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ.ಸುನಿಲ್ದತ್ ಯಾದವ್ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಏರ್ಪಡಿಸಿದ ವಕೀಲರು ಮತ್ತು ನ್ಯಾಯಾಧೀಶರ ನಡುವೆ ಸಂವಾದದಲ್ಲಿ ಮಾತನಾಡಿ, ಜಿಲ್ಲಾ ನ್ಯಾಯಾಲಯಕ್ಕಾಗಿ ಶ್ರೀರಂಗಪಟ್ಟಣಕ್ಕೆ ಕಕ್ಷಿದಾರರು ಮತ್ತು ವಕೀಲರು ಹೋಗಿ ಬರಲು ತುಂಬಾ ತೊಂದರೆ ಆಗುತ್ತಿತ್ತು. ಇದನ್ನು ವಕೀಲರ ಸಂಘದ ಸದಸ್ಯರು ಹಲವ ವರ್ಷಗಳಿಂದ ಜಿಲ್ಲಾ ನ್ಯಾಯಾಲಯ ಪಟ್ಟಣದಲ್ಲಿ ಪ್ರಾರಂಭಿಸುವಂತೆ ಪ್ರಯತ್ನಿಸಿದ್ದರು ಎಂದರು.
ವಸ್ತು ಸ್ಥಿತಿಯನ್ನು ತಿಳಿಸಿದ್ದರಿಂದ ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ ವಾರದಲ್ಲಿ ಒಂದು ದಿನ ಜಿಲ್ಲಾ ನ್ಯಾಯಾಲಯ ಕಾರ್ಯನಿರ್ವಹಿಸಲು ಮಂಜೂರಾತಿ ನೀಡಿದ್ದು, ಇದನ್ನು ವಕೀಲರು ಮುನ್ನಡೆಸಿಕೊಂಡು ಹೋಗಲು ಶ್ರಮಿಸಬೇಕು ಎಂದರು.ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಶಿವಮೂರ್ತಿ ಮಾತನಾಡಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶ್ರೀರಂಗಪಟ್ಟಣಕ್ಕೆ ಹೋಗಿ ಕಾರ್ಯ ಕಲಾಪ ನಡೆಸಲು ವಕೀಲರು ಮತ್ತು ಕಕ್ಷಿದಾರರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ವಕೀಲರು ಹಲವು ಬಾರಿ ಪ್ರಯತ್ನ ಪಟ್ಟು ಜಿಲ್ಲಾ ನ್ಯಾಯಾಲಯಕ್ಕೆ ಶ್ರಮಿಸಿದ್ದಾರೆ ಎಂದರು.
ತಾಲೂಕಿನಲ್ಲಿ ವಾರದಲ್ಲಿ ಒಂದು ದಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಡೆಸಲು ಅನುಮೋದನೆ ನೀಡಿರುವುದು ಕಾರ್ಯಕಲಾಪಕ್ಕೆ ಅನುಕೂಲಕರವಾಗಿದೆ. ವಕೀಲರು ಇದನ್ನು ಮುನ್ನಡೆಸಿಕೊಂಡು ಶಾಶ್ವತವಾಗಿ ನ್ಯಾಯಾಲಯವು ಕಾರ್ಯನಿರ್ವಹಿಸಬೇಕು. ವಸ್ತ್ರ ಸಂಹಿತೆಯನ್ನು ಅಳವಡಿಸಿಕೊಂಡು ಶಿಸ್ತು ಬದ್ಧ ವಕೀಲ ವೃತ್ತಿಯನ್ನು ಮುನ್ನಡೆಸುವಂತೆ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ ಮಾತನಾಡಿ, ತಾಲೂಕಿಗೆ ಸಂಬಂಧಪಟ್ಟ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣವು ನಡೆಸಲು ಶ್ರೀರಂಗಪಟ್ಟಣಕ್ಕೆ ತೆರಳಬೇಕಾದ ಅನಿವಾರ್ಯತೆ ಇತ್ತು. ಇನ್ನು ಮುಂದೆ ಪಟ್ಟಣದ ನ್ಯಾಯಾಲಯದಲ್ಲೇ ನಡೆಯುವುದರಿಂದ ಕಕ್ಷಿದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಕೀಲರ ಮತ್ತು ನ್ಯಾಯಾಧೀಶರ ನಡುವೆ ಸಂವಾದ ನಡೆದು ವಕೀಲರ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರದ ಮಾರ್ಗಗಳನ್ನು ಸಂವಾದದಲ್ಲಿ ತಿಳಿಸಿದರು. ಕಾರ್ಯಕ್ರಮಕ್ಕೆ ಮುನ್ನ ನ್ಯಾಯಾಲಯಕ್ಕೆ ಭೇಟಿ ನೀಡಿದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸುನಿಲ್ ದತ್ ಯಾದವ್ ಅವರು ನ್ಯಾಯಾಧೀಶರಾದ ಸುಧೀರ್, ದೇವರಾಜು, ಡಾ. ಚಂದಿನಿ, ಸುಷ್ಮ, ಪಾರ್ವತಿ, ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕಿ ನಂದಿನಿ ಮತ್ತು ಸಿಬ್ಬಂದಿಯೊಡನೆ ಚರ್ಚಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ತು ಸದಸ್ಯ ಮಹದೇವ್ ಪ್ರಸಾದ್, ಸಂಘದ ಉಪಾಧ್ಯಕ್ಷ ಪುರುಷೋತ್ತಮ್, ಖಜಾಂಚಿ ಪ್ರಸನ್ನ ಕುಮಾರ್, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ನಿರ್ದೇಶಕರಾದ ಶಿವಕುಮಾರ್, ಬಿಜೆ ಪ್ರವೀಣ್ , ಗಿರಿಜಾ ಪ್ರತಾಪ್, ಅವಿನಾಶ್, ಜನಾರ್ಧನ್, ತಾಲೂಕಿನ ವಕೀಲರು ಭಾಗವಹಿಸಿದ್ದರು.