ಪ್ರಾಚೀನ ಕನ್ನಡ ಸಾಹಿತ್ಯದ ಪುನರ್ ಅಧ್ಯಯನ ಅಗತ್ಯ

| Published : Apr 22 2025, 01:53 AM IST

ಸಾರಾಂಶ

ಇಂದು ಮನುಷ್ಯನನ್ನು ಅಧಿಕಾರ ಮತ್ತು ಭೋಗಗಳು ಇನ್ನಿಲ್ಲದಂತೆ ಕಾಡುವ ಎರಡು ಶಕ್ತಿಗಳಾಗಿವೆ. ಸುಖದ ಬೆನ್ನು ಹತ್ತಿ ಹೋಗುತ್ತಿರುವುದು ವಸಾಹತುಶಾಹಿಯ ಬಳುವಳಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಧುನಿಕ ಕನ್ನಡ ಸಾಹಿತ್ಯವು ಪರಂಪರೆಯಿಂದ ತನ್ನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ. ಇಂದು ಅಧಿಕಾರದ ಹಂಬಲ ಭೋಗದ ಆಸಕ್ತಿ ಹೆಚ್ಚಿದೆ. ಹೀಗಾಗಿ, ಪ್ರಾಚೀನ ಕನ್ನಡ ಸಾಹಿತ್ಯದ ಪುನರ್ ಅಧ್ಯಯನ ಅಗತ್ಯ ಎಂದು ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.ನಗರದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಕನ್ನಡ ವಿಭಾಗವು ಕರ್ನಾಟಕ ರಾಜ್ಯ ಮುಕ್ತ ವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ''''''''ಪಂಪನ ಕಾವ್ಯಗಳು ಪುನರಾವಲೋಕನ'''''''' ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಇಂದು ಮನುಷ್ಯನನ್ನು ಅಧಿಕಾರ ಮತ್ತು ಭೋಗಗಳು ಇನ್ನಿಲ್ಲದಂತೆ ಕಾಡುವ ಎರಡು ಶಕ್ತಿಗಳಾಗಿವೆ. ಸುಖದ ಬೆನ್ನು ಹತ್ತಿ ಹೋಗುತ್ತಿರುವುದು ವಸಾಹತುಶಾಹಿಯ ಬಳುವಳಿಯಾಗಿದೆ. ಪಂಪನ ಕಾವ್ಯಗಳು ಹಾಗೂ ಹಳೆಗನ್ನಡ ಸಾಹಿತ್ಯವು ಸ್ವಾಯತ್ತ ಪ್ರಜ್ಞೆಯನ್ನು ಕಲಿಸುತ್ತದೆ, ಬದುಕನ್ನು ಪ್ರೀತಿಸುವ ಶಕ್ತಿಯನ್ನು ದಯಪಾಲಿಸುತ್ತದೆ. ಅಹಂಕಾರ ಮತ್ತು ಅಧೀನ ಭಾವವನ್ನು ರೂಢಿಸಿಕೊಳ್ಳದೆ ಉತ್ತಮ ಜೀವನ ಪ್ರೀತಿಯನ್ನು ಮೈಗೂಡಿಸಿಕೊಳ್ಳಬೇಕು. ಈ ಕಾರಣಕ್ಕಾಗಿ ಪಂಪನ ಕಾವ್ಯಗಳ ಪುನರ್ ಅಧ್ಯಯನ ತುರ್ತು ಅಗತ್ಯ ಎಂದು ಅವರು ಹೇಳಿದರು. ಪಂಪನ ಓದು ಪರಂಪರೆ ಅರ್ಥೈಸಿಕೊಂಡಂತೆಚಿಂತಕ ಡಾ.ಜಿ.ಪಿ. ಹರೀಶ್ ಮಾತನಾಡಿ, ಪಂಪನ ಕಾವ್ಯಗಳಲ್ಲಿ ಚರಿತ್ರೆಯಲ್ಲಿ ನೋಡುವ ಹೊಸ ಹೊಳಹುಗಳಿವೆ. ಪಂಪನ ಕಾಲಕ್ಕಿಂತ ಹಿಂದೆ ಕನ್ನಡ ಕವಿಗಳು ಇದ್ದರೂ ಅವನ ಕೃತಿಗಳ ರಚನೆಯಲ್ಲಿ ಪ್ರಾಕೃತ ಹಾಗೂ ಸಂಸ್ಕೃತಗಳ ಪ್ರಭಾವವಿದೆ. ಮಾನವೀಯ ನೆಲೆಯಲ್ಲಿ ಯೋಚಿಸುವ ಪಂಪ, ತನ್ನ ಕಾವ್ಯದಲ್ಲಿ ಯುದ್ಧದ ಕಾದಾಟದಲ್ಲಿ ಸಮಾಜವನ್ನು ಬಲಿ ಕೊಡಬಾರದು ಎನ್ನುವ ಜೀವನ ಪ್ರೀತಿಯನ್ನು ಅಭಿವ್ಯಕ್ತಿಸುತ್ತಾನೆ. ಪಂಪನನ್ನು ಓದುವುದೆಂದರೆ ಪರಂಪರೆಯನ್ನು ಅರ್ಥೈಸಿಕೊಂಡಂತೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ರಾಜ್ಯ ಮುಕ್ತ ವಿವಿ ಕನ್ನಡ ವಿಭಾಗದ ಮುಖ್ಯಸ್ಥೆ ಗೀತಾಂಜಲಿ ಇದ್ದರು. ವೈಷ್ಣವಿ ವೃಂದದವರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್ ಸ್ವಾಗತಿಸಿದರು. ಎನ್.ಎಂ. ಕೃಷ್ಣಪ್ಪ ವಂದಿಸಿದರು. ಹೊನ್ನಶೆಟ್ಟಿ ನಿರೂಪಿಸಿದರು.----ಕೋಟ್...ಕಾವ್ಯಗಳು ನಮ್ಮ ಸಂಸ್ಕೃತಿಯನ್ನು ಬೆಳೆಸುತ್ತವೆ. ನಮ್ಮ ಪ್ರಾಚೀನ ಕಾವ್ಯಗಳು ಅತ್ಯಂತ ಮೌಲಿಕವಾಗಿವೆ, ಆಧುನಿಕ ಕಾಲದಲ್ಲಿ ಪಂಪನ ಕಾವ್ಯಗಳನ್ನು ಅಧ್ಯಯನ ಮಾಡುವುದು ಮುಖ್ಯವಾಗಿದೆ. ಪರಂಪರೆಯನ್ನು ಉಳಿಸುವ ಬೆಳೆಸುವ ಕಾರ್ಯ ಇಂದಿನ ಓದುಗರ ಜವಾಬ್ದಾರಿಯಾಗಿದೆ.- ಪ್ರೊ. ಶರಣಪ್ಪ ವಿ. ಹಲಸೆ, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ