ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಇಲಾಖೆ, ಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರಿನ ವಿಎಸ್.ಟಿಟಿಲ್ಲರ್ಸ್‌ಮತ್ತು ಟ್ರಾಕ್ಟರ್ಸ್‌ಮತ್ತು ಎಸ್.ಎಲ್.ಎನ್. ಅಗ್ರಿಟೆಕ್ ಸಂಯುಕ್ತಾಶ್ರಯದಲ್ಲಿ ಕೃಷಿ ಯಂತ್ರೋಪಕರಣಗಳ ದೈನಂದಿನ ನಿರ್ವಹಣೆ ಹಾಗೂ ಕಿರು ದುರಸ್ತಿ ಕುರಿತು ಒಂದು ದಿನದ ತರಬೇತಿಯನ್ನು ಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಎಚ್. ರವಿ ಮಾತನಾಡಿ, ರೈತರು ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳನ್ನು ಖರೀದಿಸುವ ಮುನ್ನಾ ತಮ್ಮ ಜಮೀನಿನ ಅವಶ್ಯಕತೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು. ಯಂತ್ರವನ್ನು ಖರೀದಿಸುವ ಮುನ್ನ ಪೂರ್ಣ ಪ್ರಮಾಣದ ಬಳಕೆ ಹಾಗೂ ನಿರ್ವಹಣೆ ಕುರಿತು ಕಂಪನಿ ಅವರಿಂದ ಮಾಹಿತಿ ಪಡೆಯಬೇಕೆಂದು ತಿಳಿಸಿದರು.
ನಿರ್ವಹಣೆಯ ತಿಳುವಳಿಕೆ ಇಲ್ಲದೆ ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಗಳನ್ನು ಉಪಯೋಗಿಸಿದ ರೈತರು ಅಗತ್ಯಕ್ಕಿಂತ ಹೆಚ್ಚು ವ್ಯಯಮಾಡುವುದನ್ನು ನೋಡಿದ್ದೇವೆ. ಆದ ಕಾರಣ ರೈತರ ತಿಳುವಳಿಕೆಗಾಗಿ ಜಿಲ್ಲೆಯ ಎಲ್ಲ ಭಾಗದಲ್ಲಿ ಈ ರೀತಿಯ ಕಿರು ದರುಸ್ತಿ ತರಬೇತಿ ಹಮ್ಮಿಕೊಳ್ಳಲು ಯೋಜಿಸಿದೆ ಎಂದು ಅವರು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ಡಾ.ಎಂ. ಮಹಂತೇಶಪ್ಪ ಮಾತನಾಡಿ, ರೈತರ ಉಪಯೋಗಕ್ಕಾಗಿ ಉಚಿತವಾಗಿ ಕೃಷಿ ಯಂತ್ರೋಪಕರಣ ದೈನಂದಿನ ನಿರ್ವಹಣೆ ಹಾಗೂ ಕಿರು ದುರಸ್ತಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಲು ಕರೆ ನೀಡಿದರು.
ಬೆಂಗಳೂರಿನ ವಿಎಸ್.ಟಿ ಟಿಲ್ಲರ್ಸ್ ಮತ್ತು ಟ್ರಾಕ್ಟರ್ಸ್ ನಡಿ ವಿಜಿನಲ್ ವ್ಯವಸ್ಥಾಪಕ ಡಾ.ಕೆ. ಅಭಿಜಿತ್, ಬೆಂಗಳೂರಿನ ಐಸಿಎಆರ್-ಅಟಾರಿಯ ಪ್ರಧಾನ ವಿಜ್ಞಾನಿ ಡಾ.ಎಂ.ಜೆ. ಚಂದ್ರಗೌಡ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನಕೇಂದ್ರ ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ರೈತರು ನವೀನ ತಂತ್ರಜ್ಞಾನಗಳನ್ನು ಪರಿಚಯ ಮಾಡಿಕೊಂಡು ಮುಂದುವರೆಯಬೇಕೆಂದು ತಿಳಿಸಿದರು.
ನಂಜನಗೂಡಿನ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಡಾ. ದೊರೈರಾಜು ಕೃಷಿ ಇಲಾಖೆಯಲ್ಲಿ ಸಿಗುವ ವಿವಿಧ ಸಹಾಯಧನದ ಮಾಹಿತಿಯನ್ನುರೈತರಿಗೆ ನೀಡಿದರು.ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯ ಡಾ. ಗೌರವ್ವ ಅಗಸಿಬಾಗಿಲ ಭಾಗವಹಿಸಿ ಸಂವಿಧಾನ ದಿನಾಚರಣೆ ಅಂಗವಾಗಿ ಸಮೂಹಿಕವಾಗಿ ಸಂವಿಧಾನ ಪೀಠಿಕೆಯ ಪಠಣ ಭೋದಿಸಿದರು.
ಕೆ.ಆರ್. ರವೀಂದ್ರ ಸ್ವಾಗತಿಸಿದರು, ಡಾ. ವೈ.ಪಿ. ಪ್ರಸಾದ್ ನಿರೂಪಿಸಿದರು. ಗಂಗಪ್ಪ ಹಿಪ್ಪರಗಿ ವಂದಿಸಿದರು.ಕೃಷಿ ತಂತ್ರಜ್ಞರ ಪದಾಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿವರ್ಗ ಹಾಗೂ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.