ಮಂಗನ ದಾಳಿಗೆ ಒಬ್ಬ ಬಲಿ, ಮತ್ತೊಬ್ಬ ಗಾಯಾಳು

| Published : Nov 14 2023, 01:15 AM IST / Updated: Nov 14 2023, 01:16 AM IST

ಸಾರಾಂಶ

ಅರಕೆರೆಯಲ್ಲಿ ತಡರಾತ್ರಿ ಮೂತ್ರ ವಿಸರ್ಜನೆಗೆ ಹೊರ ಬಂದವರ ಮೇಲೆ ದಾಳಿ

* ಅರಕೆರೆಯಲ್ಲಿ ತಡರಾತ್ರಿ ಮೂತ್ರ ವಿಸರ್ಜನೆಗೆ ಹೊರ ಬಂದವರ ಮೇಲೆ ದಾಳಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯರಾತ್ರಿ ಮೂತ್ರ ವಿಸರ್ಜನೆಗೆಂದು ಹೊರ ಬಂದ ವೇಳೆ ಕಾಡು ಮಂಗವೊಂದು ಏಕಾಏಕಿ ದಾಳಿ ನಡೆಸಿ, ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದರಿಂದ ಹೊನ್ನಾಳಿ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಗುತ್ಯಪ್ಪ ಮೃತಪಟ್ಟ ಘಟನೆ ವರದಿಯಾಗಿದೆ.

ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ನಿವಾಸಿ ಗುತ್ಯಪ್ಪ ಎಕೆ ಕಾಲನಿಯಲ್ಲಿ ಭಾನುವಾರ ತಡರಾತ್ರಿ ಸುಮಾರು 1 ಗಂಟೆ ವೇಳೆ ಗುತ್ಯಪ್ಪ ಮೂತ್ರ ವಿಸರ್ಜನೆಗೆಂದು ಹೊರ ಬಂದಾಗ ಕಾಡು ಮಂಗದ ದಾಳಿಗೊಳಗಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಯಿತು. ತಕ್ಷಣವೇ ಮನೆಯವರು, ಗ್ರಾಮಸ್ಥರು ತಕ್ಷಣವೇ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಗುತ್ಯಪ್ಪ ಮೃತಪಟ್ಟರು.

ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಗುತ್ಯಪ್ಪನ ಬಲಿ ಪಡೆದರೆ, ಅದೇ ಅರಕೆರೆ ಗ್ರಾಮದ ಪ್ರಭು(35 ವರ್ಷ) ಎಂಬವರ ಮೇಲೆಯೂ ದಾಳಿ ಮಾಡಿ, ಗಾಯಗೊಳಿಸಿದೆ. ತಕ್ಷಣ ಮನೆಯವರು, ನೆರೆಹೊರೆಯವರು ಗಾಯಾಳು ಪ್ರಭುವಿನ ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದಾರೆ. ದಾಳಿ ನಂತರ ಇಡೀ ಗ್ರಾಮಸ್ಥರು ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಿದ್ದು ಕಾಡು ಮಂಗ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ವಿಷಯ ತಿಳಿದ ಅರಣ್ಯಇಲಾಖೆ ಅಧಿಕಾರಿಗಳು, ಸಿಬ್ಬಂದಿ ಅರಕೆರೆ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪಂಜರವನ್ನು ಇಟ್ಟಾದರೂ ಮಂಗ ಸೆರೆ ಹಿಡಿಯಿರಿ. ಮತ್ತೆ ಯಾರ ಮೇಲಾದರೂ ಮಂಗ ದಾಳಿ ಮಾಡುವ ಮುನ್ನ ಅದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಮೃತ ಗುತ್ಯಪ್ಪ ಪತ್ನಿ, ಪುತ್ರ, ಪುತ್ರಿ ಅಪಾರ ಬಂಧು ಮಿತ್ರರ ಅಗಲಿದ್ದಾರೆ. ಮೃತರ ಸಹೋದರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್‌.ನಾಗಪ್ಪ ಸೇರಿ ಕಾಂಗ್ರೆಸ್‌ ಮುಖಂಡರಾದ ಎಚ್‌.ಎ.ಉಮಾಪತಿ, ಆರಕೆರೆ ಮಧುಗೌಡ, ಎಚ್‌.ಎ. ಗದ್ದಿಗೇಶ್‌ ಸೇರಿ ಹಲವು ಮುಖಂಡರು ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸೋಮವಾರ ಮಧ್ಯಾಹ್ನ ಮೃತ ಗುತ್ಯಪ್ಪ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

-----------

ಆಸ್ಪತ್ರೆಗೆ ಶಾಸಕ ಶಾಂತನಗೌಡ ಭೇಟಿ

* ಮಂಗ ಸೆರೆ ಹಿಡಿಯಲು ಮಾಜಿ ಸಚಿವ ರೇಣುಕಾಚಾರ್ಯ ಆಗ್ರಹ

ಮಂಗನ ದಾಳಿಗೆ ತುತ್ತಾಗಿ ತೀವ್ರ ಗಾಯಗೊಂಡ ಅರಕೆರೆ ಗ್ರಾಮದ ಪ್ರಭು ಆರೋಗ್ಯವನ್ನು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಿ.ಜಿ.ಶಾಂತನಗೌಡ ವಿಚಾರಿಸಿ ಧೈರ್ಯ ತುಂಬಿದರು. ಅಲ್ಲದೇ, ಅರಣ್ಯ ಇಲಾಖೆಯವರು ಆದಷ್ಟು ಬೇಗನೆ ಮಂಗವನ್ನು ಸೆರೆ ಹಿಡಿದು, ಗ್ರಾಮಸ್ಥರ ಹಿತ ಕಾಯುವಂತೆ ಸೂಚಿಸಿದ್ದಾರೆ.

ಅರಕೆರೆ ಗ್ರಾಮದಲ್ಲಿ ಮೃತ ಗುತ್ಯಪ್ಪ ನಿವಾಸಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಾಸಕ ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಇತರರು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದಷ್ಟು ಬೇಗನೆ ಕಾಡು ಮಂಗ ಹಿಡಿದು, ಜನರಿಗೆ ರಕ್ಷಣೆ ನೀಡುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಅರಕೆರೆ ಭಾಗದಲ್ಲಿ ಆಗಾಗ ಚಿರತೆ, ಕರಡಿಗಳು, ಮಂಗಗಳು, ಇತರೆ ಕಾಡು ಪ್ರಾಣಿಗಳ ಸಂಚಾರ ಹೆಚ್ಚುತ್ತಿದೆ. ಆದರೂ, ಕೆಲ ಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಜನರ ಜೀವಕ್ಕೆ ಕುತ್ತು ತರುವ ಯಾವುದೇ ಪ್ರಾಣಿಗಳಿದ್ದರೂ ಅವುಗಳ ಸೆರೆ ಹಿಡಿಯಬೇಕು. ಆದರೆ, ಮಂಗವೊಂದು ಮನುಷ್ಯರ ಮೇಲೆ ಹೀಗೆ ದಾಳಿ ಮಾಡಿ, ಒಬ್ಬರ ಸಾವಿಗೆ ಕಾರಣವಾಗಿದ್ದು, ಮತ್ತೊಬ್ಬರ ಮೇಲೆ ತೀವ್ರ ದಾಳಿ ಮಾಡಿದ ಹಿನ್ನೆಲೆಯಲ್ಲಿ ಆದಷ್ಟು ಬೇಗನೆ ಕಾಡು ಮಂಗ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಆಗ್ರಹಿಸಿದರು.

................................

ಮೃತ ಗುತ್ಯಪ್ಪ ಕುಟುಂಬಕ್ಕೆ ₹15 ಲಕ್ಷ ಪರಿಹಾರ

* ಗುತ್ಯಪ್ಪ ಪತ್ನಿಗೆ 5 ವರ್ಷ ಪ್ರತಿ ತಿಂಗಳು ₹4 ಸಾವಿರ: ಶಾಂತನಗೌಡ

ದಾವಣಗೆರೆ: ಕಾಡು ಮಂಗನ ದಾಳಿಯಿಂದ ಮೃತಪಟ್ಟ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಗುತ್ಯಪ್ಪ ಕುಟುಂಬಕ್ಕೆ 15 ಲಕ್ಷ ರು. ಪರಿಹಾರ ಕೊಡಿಸುವುದಾಗಿ ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.

ಹೊನ್ನಾಳಿ ತಾ. ಅರಕೆರೆ ಗ್ರಾಮದಲ್ಲಿ ಮೃತ ಗುತ್ಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿ

ಅರಣ್ಯ ಇಲಾಖೆ ಅಧಿಕಾರಿ ಹೀರಾಲಾಲ್ ಜೊತೆಗೆ ತಾವು ಚರ್ಚಿಸಿದ್ದು, ಮೃತರ ಕುಟುಂಬಕ್ಕೆ 15 ಲಕ್ಷ ರು. ಪರಿಹಾರ ಹಾಗೂ 5 ವರ್ಷ ಕಾಲ ಮೃತರ ಪತ್ನಿಗೆ ಪ್ರತಿ ತಿಂಗಳು 4 ಸಾವಿರ ರು. ಒದಗಿಸುವ ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ, ಡಿಎಫ್‌ಒ ಶಶಿಧರ್‌, ಎಸಿಎಫ್‌ ಭಾಗ್ಯಲಕ್ಷ್ಮಿ, ಹೊನ್ನಾಳಿ ಆರ್‌ಎಫ್‌ಓ ಕಿಶೋರ್‌, ದಾವಣಗೆರೆ ಆರ್‌ಎಫ್‌ಓ ಮಂಜುನಾಥ ಇತರರಿದ್ದರು. ಅರಕೆರೆ ಗ್ರಾಮದಲ್ಲಿ ಇಂತಹ ಅವಘಡ ಇದೇ ಮೊದಲು. ಕಾಡು ಮಂಗ ಹೀಗೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮಂಗ ಸೆರೆ ಕಾರ್ಯಾಚರಣೆ ಶುರುವಾಗಿದೆ. ಗುತ್ಯಪ್ಪ ಬಲಿ ಪಡೆದ ಮಂಗ ಅದೇ ಗ್ರಾಮದ ಪ್ರಭು ಮೇಲೂ ದಾಳಿ ಮಾಡಿದ್ದು, ಗಾಯಾಳು ಪ್ರಭು ಆರೋಗ್ಯ ವಿಚಾರಿಸಿದ್ದು, ಇಲಾಖೆಯಿಂದ ಚಿಕಿತ್ಸಾ ವೆಚ್ಚ ಭರಿಸಲಾಗುವುದು.

ಡಿ.ಜಿ.ಶಾಂತನಗೌಡ, ಶಾಸಕ

ಶಾಸಕ ಡಿ.ಜಿ.ಶಾಂತನಗೌಡರ ಸೂಚನೆಯಂತೆ, ಸರ್ಕಾರದ ನಿಯಮಾನುಸಾರ ಮೃತರ ಕುಟುಂಬಕ್ಕೆ ಪರಿಹಾರ, ಗಾಯಾಳುವಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು.

ಹೀರಾಲಾಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
......................