ಸಾರಾಂಶ
- ಪಾಲಿಕೆ ಆವರಣದಲ್ಲಿ ತಹಸೀಲ್ದಾರ್, ಆಯುಕ್ತರಿಗೆ ತೀವ್ರ ತರಾಟೆ । ಅಮಾನತು, ಶಿಸ್ತುಕ್ರಮ ಬೆದರಿಕೆಗಳಿಗೆ ಅಸಮಾಧಾನ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಾತಿ ಜನಗಣತಿ ಮಾಡಿ ಮುಗಿಸಿ ಬಂದಿದ್ದರೂ, ಪಡಿತರ ಚೀಟಿಯಲ್ಲಿ ಇಲ್ಲದ ಹಾಗೂ ಆಧಾರ್ ಕಾರ್ಡ್ ಕೊಡಲಿಚ್ಛಿಸದ ಕುಟುಂಬ ಸದಸ್ಯರನ್ನು ಹೊಸದಾಗಿ ಯುಎಚ್ ಐಡಿ ಕ್ರಿಯೇಟ್ ಮಾಡಿಕೊಂಡು, ಗಣತಿ ಮಾಡಬೇಕೆಂಬ ಮೇಲಾಧಿಕಾರಿಗಳ ಸೂಚನೆಗೆ ರೋಸಿಹೋದ ಸೂಪರ್ ವೈಸರ್‌ಗಳು, ಗಣತಿದಾರರು ತಹಸೀಲ್ದಾರ್ ಅಶ್ವತ್ಥ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮುತ್ತಿಗೆ ಹಾಕಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಪಾಲಿಕೆ ಆವರಣದಲ್ಲಿ ಗುರುವಾರ ನಡೆಯಿತು.ಗಣತಿ ಐಚ್ಛಿಕವಲ್ಲ ಎಂಬುದಾಗಿ ಹೈಕೋರ್ಟ್ ಆದೇಶಿಸಿದೆ. ಕುಟುಂಬದವರು ಎಷ್ಟು ಜನರ ಆಧಾರ್ ಕಾರ್ಡ್, ಪಡಿತರ ಚೀಟಿದಾರರ ಮಾಹಿತಿ ನೀಡಿದ್ದಾರೋ ಅಷ್ಟೂ ಜನರ ಗಣತಿ ಮಾಡಿದ್ದೇವೆ. ಇದೀಗ ಮಾಹಿತಿ ಕೊಡುವುದಿಲ್ಲವೆಂದು ನಿರಾಕರಿಸಿದ್ದವರನ್ನು ಗಣತಿ ಮಾಡುವಂತೆ, ಮುಂಚೆ ತರಬೇತಿ ವೇಳೆಯಲ್ಲಿ 6 ವರ್ಷದೊಳಗಿನ ಮಕ್ಕಳ ಗಣತಿ ಬೇಡವೆಂದಿದ್ದು, ಈಗ ಆ ಮಕ್ಕಳನ್ನು ಗಣತಿ ಮಾಡಬೇಕೆಂಬ ಆಯೋಗದ ಸೂಚನೆ ವಿರುದ್ಧ ಗಣತಿದಾರರು ರೋಸಿ ಹೋಗಿದ್ದಾರೆ.
ಸಮೀಕ್ಷೆ ಕಾರ್ಯ ಆರಂಭ ಆದಾಗಿನಿಂದ ಈವರೆಗೂ ಬರೀ ಗೊಂದಲದ ಗೂಡಾಗಿದೆ. ಮನೆ ಮನೆಗೆ ಹೋಗಿ ಗಣತಿ ಮಾಡುವ ನಮಗೆ ಸಮಸ್ಯೆ ಏನೆಂಬ ಅರಿವು ಇದೆ. ನೀವು ಇಲ್ಲಿ ಕುಳಿತುಕೊಂಡು ಮೇಲಿಂದ ಮೇಲೆ ಒತ್ತಡ ಹೇರುವುದು, ಟಾರ್ಗೆಟ್ ನೀಡುವುದು, ಸರ್ವರ್ ಸಮಸ್ಯೆ ಇದ್ದರೂ ನಿತ್ಯ ಟಾರ್ಗೆಟ್ ನಿಗದಿಪಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಗಣತಿಗೆ ಮುಂಚೆ ಗಣತಿ ಮಾಹಿತಿ ನೀಡುವುದು, ನಿರಾಕರಿಸುವುದು ಐಚ್ಛಿಕ ಅಂದವರು ಈಗ ಮತ್ತೆ ಕಡ್ಡಾಯ ಮಾಡಬೇಕೆಂಬುದಾಗಿ ಸೂಚನೆ ನೀಡುತ್ತಿದ್ದೀರಿ ಎಂದು ಬೇಸರಗೊಂಡರು.ಪ್ರತಿ 5 ನಿಮಿಷಕ್ಕೊಂದು ನಿರ್ದೇಶನ ನೀಡುತ್ತಿದ್ದೀರಿ. ಇಲ್ಲಿ ಕುಳಿತು ಮಾತನಾಡುವುದಲ್ಲ. ಏನಾದರೂ ಪ್ರಶ್ನಿಸಿದರೆ ಅಮಾನತು, ಶಿಸ್ತುಕ್ರಮವೆಂದು ಬೆದರಿಕೆ ಹಾಕುತ್ತೀರಿ. ಹಗಲಲ್ಲಿ ಒಂದು ಸೂಚನೆ, ಸಂಜೆ ಒಂದು ಸೂಚನೆ, ರಾತ್ರಿ ಮತ್ತೊಂದು ಸೂಚನೆ, ಮಧ್ಯರಾತ್ರಿ ಇನ್ನೊಂದು ರೀತಿ ಸೂಚನೆ ನೀಡುತ್ತಿದ್ದೀರಿ. ನೀವೆಲ್ಲಾ ಹೇರುತ್ತಿರುವ ಒತ್ತಡಕ್ಕೆ ಗಣತಿಯಲ್ಲಿ ತೊಡಗಿದ್ದ ಓರ್ವ ಶಿಕ್ಷಕನಿಗೆ ಹೃದಯಾಘಾತವಾಗಿದೆ. ಬೇರೆ ಜಿಲ್ಲೆಗಳಲ್ಲಿ ಗಣತಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ವಯಸ್ಕರು, ಮಧ್ಯ ವಯಸ್ಕರು ಪುರುಷ-ಮಹಿಳೆಯರೆನ್ನದೇ ಶುಗರ್, ಬಿ.ಪಿ. ಹೀಗೆ ನಾನಾ ರೀತಿ ಆರೋಗ್ಯದಲ್ಲಿ ವ್ಯತ್ಯಯವಾಗಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ನೀವು ಸಮೀಕ್ಷೆಗೆ ನೀಡಿರುವ ಮನೆಗಳ ವಿಳಾಸ, ಲೊಕೇಷನ್, ಆರ್‌ಆರ್ ನಂಬರ್‌ಗಳೂ ಗೊಂದಲದಿಂದ ಕೂಡಿದೆ. ಬೆಸ್ಕಾಂ ಸ್ಟಿಕ್ಕರ್‌ಗಳು ಸಮರ್ಪಕವಾಗಿಲ್ಲ. ದೇವಸ್ಥಾನ, ಮಸೀದಿ, ಅಂಗಡಿ- ಮುಂಗಟ್ಟಿಗೂ ಬೆಸ್ಕಾಂ ಸ್ಟಿಕ್ಕರ್ ನೀಡಿದ್ದು, ಅಂತಹ ಕಡೆ ಹೇಗೆ, ಏನು ಸಮೀಕ್ಷೆ ಮಾಡಬೇಕು? ಬೆಸ್ಕಾಂ ನೀಡಿದ ಸ್ಟಿಕ್ಕರ್‌ಗಳಿಂದ ಯಾವುದೇ ಉಪಯೋಗವಾಗುತ್ತಿಲ್ಲ. ಸಮೀಕ್ಷೆಗಾಗಿ ವಿಳಾಸ ಹುಡುಕಿಕೊಂಡು ಅಲೆಯುವಂತಾಗಿದೆ. ಜನರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಮನೆಗಳ ವಿಳಾಸ ಕ್ರಮಬದ್ಧವಾಗಿಲ್ಲ ಎಂದು ಗಣತಿದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಒಂದೊಂದು ಮನೆ ಸಮೀಕ್ಷೆಗೂ 1 ಗಂಟೆ/ ಒಂದೂವರೆ ಗಂಟೆ ಬೇಕಾಗುತ್ತಿದೆ. ಮನೆಗಳಿಗೆ ಅಲೆದರೂ ಜನ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಹಳೇ ಏರಿಯಾಗಳು ಬಾಕಿ ಇದ್ದರೂ ಹೊಸ ಏರಿಯಾಗಳ ಸಮೀಕ್ಷೆಗೆ ನೀಡಿದ್ದಾರೆ. ಬೆಸ್ಕಾಂ ಅಧಿಕಾರಿ, ಸಿಬ್ಬಂದಿಗೆ ಕೇಳಿದರೆ ಸ್ಪಂದಿಸುತ್ತಿಲ್ಲ. ಮನೆ ವಿಳಾಸಗಳಲ್ಲಿ ತುಂಬಾ ಗೊಂದಲವಾಗಿದೆ. ಈ ನಡುವೆ ತಹಸೀಲ್ದಾರರು ಶಿಸ್ತುಕ್ರಮ ಕೈಗೊಳ್ಳುವುದಾಗಿ ಬೆದರಿಸುತ್ತಿದ್ದಾರೆ. ಗಣತಿ ಪ್ರಾರಂಭದಿಂದಲೂ ಗೊಂದಲದಿಂದ ಕೂಡಿದೆ ಎಂದು ಗಣತಿದಾರರು, ಸೂಪರ್ ವೈಸರ್‌ಗಳು ತಹಸೀಲ್ದಾರ್ ವಿರುದ್ಧ ಹರಿಹಾಯ್ದರು.
- - -(ಬಾಕ್ಸ್) * ಕೆಲ ಅಂಗನವಾಡಿ, ಖಾಲಿ ಮನೆಗೂ ಸ್ಟಿಕ್ಕರಿಂದಾಗಿ ಗೊಂದಲ: ತಹಸೀಲ್ದಾರ್ ತಹಸೀಲ್ದಾರ್ ಎಂ.ಬಿ.ಅಶ್ವತ್ಥ್ ಗಣತಿದಾರರ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿ, ಈವರೆಗೂ ಸಮೀಕ್ಷಾ ಕಾರ್ಯ ಚೆನ್ನಾಗಿ ನಡೆದಿದೆ. ಶೇ.90ರಷ್ಟು ಮನೆಗಳ ಸಮೀಕ್ಷೆ ಮುಗಿದಿದ್ದು, ಇನ್ನುಳಿದ ಮನೆಗಳನ್ನು ಹುಡುಕಲಾಗುತ್ತಿದೆ. ನಗರ ಪ್ರದೇಶದಲ್ಲಿ ಮನೆ ಹುಡುಕುವುದು ಕಷ್ಟವಾಗಿದೆ. ಬೆಸ್ಕಾಂ ಸಾಕಷ್ಟು ಸಹಕಾರ ಕೊಟ್ಟಿದ್ದು, ಮತ್ತೊಮ್ಮೆ ಸಭೆ ಕರೆದು ಇನ್ನಷ್ಟು ಸಹಕಾರಕ್ಕೆ ಮನವಿ ಮಾಡಲಾಗುವುದು. ಬೆಸ್ಕಾಂನಿಂದ ಕೆಲ ಅಂಗನವಾಡಿ ಕೇಂದ್ರ, ಖಾಲಿ ಮನೆಗೂ ಸ್ಟಿಕ್ಕರ್ ಕೊಟ್ಟಿರುವುದರಿಂದ ಗೊಂದಲವಾಗಿದೆ. ಅಂತಹವನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದರು.
- - - -9ಕೆಡಿವಿಜಿ10, 11, 12.ಜೆಪಿಜಿ:ಜಾತಿ ಜನಗಣತಿ ಸಿಬ್ಬಂದಿಗೆ ದಿನಕ್ಕೊಂದು, ಗಂಟೆಗೊಂದು ಸೂಚನೆ ನೀಡಿಕೆ ವಿರುದ್ಧ ದಾವಣಗೆರೆ ಪಾಲಿಕೆಯಲ್ಲಿ ಸೂಪರ್ ವೈಸರ್‌ಗಳು, ಗಣತಿದಾರರು ತಹಸೀಲ್ದಾರ್, ಆಯುಕ್ತರಿಗೆ ಮುತ್ತಿಗೆ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.