ಬಾಳೆ ಬೆ‍ಳೆ ಹಾನಿ ಪರಿಹಾರಕ್ಕೆ 186 ಲಕ್ಷ ರು.ಪ್ರಸ್ತಾವನೆ: ಚಾಮರಾಜನಗರ ತೋಟಗಾರಿಕೆ ಅಧಿಕಾರಿ

| Published : Jun 11 2024, 01:30 AM IST

ಬಾಳೆ ಬೆ‍ಳೆ ಹಾನಿ ಪರಿಹಾರಕ್ಕೆ 186 ಲಕ್ಷ ರು.ಪ್ರಸ್ತಾವನೆ: ಚಾಮರಾಜನಗರ ತೋಟಗಾರಿಕೆ ಅಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಬಾಳೆ ಬೆಳೆಗಾರರಿಗೆ 186 ಲಕ್ಷ ರು. ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದರು. ಚಾಮರಾಜಜನಗರದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ತೋಟಗಾರಿಕೆ ಅಧಿಕಾರಿ ಮಾಹಿತಿ । ಜಿಲ್ಲೆಯಲ್ಲಿ 1102 ಎಕರೆ ಬಾಳೆ ನಾಶವಾಗಿ ರೈತರಿಗೆ ಸಂಕಷ್ಟಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಬಾಳೆ ಬೆಳೆಗಾರರಿಗೆ 186 ಲಕ್ಷ ರು. ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌.ಸಿ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 823 ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದ್ದು, ಜಿಲ್ಲೆಯಲ್ಲಿ 1102 ಎಕರೆ ಪ್ರದೇಶದಲ್ಲಿ ಬಾಳೆ ನಾಶವಾಗಿದೆ. ನಿಯಮಾವಳಿ ಪ್ರಕಾರ 186 ಲಕ್ಷ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ರೈತರು ಬಿತ್ತನೆ ಮಾಡಲು ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ ನೀಡಿದರು.

ರೈತರಿಂದ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಬೇಡಿಕೆ ಇದ್ದು, ಬಿತ್ತನೆ ಬೀಜ, ಗೊಬ್ಬರವನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿರಬೇಕು, ಎಷ್ಟು ಗೊಬ್ಬರವನ್ನು ಶೇಖರಣೆ ಮಾಡಲಾಗಿದೆ ಎಂದು ಸಚಿವರು ಪ್ರಶ್ನಿಸಿದರು.

ಈಗಾಗಲೇ 1900 ಕ್ವಿಂಟಲ್ ಗೊಬ್ಬರ ರೈತರಿಗೆ ವಿತರಣೆಯಾಗಿದೆ. ಇನ್ನೂ 6 ಸಾವಿರ ಕ್ವಿಂಟಲ್‌ ಗೊಬ್ಬರ ಲಭ್ಯವಿದ್ದು, ಬೀತ್ತನೆ ಬೀಜಗಳು ಸಹ ವಿತರಣೆ ಮಾಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.

ಅಕ್ರಮವಾಗಿ ಯೂರಿಯಾ ಗೊಬ್ಬರ ತಮಿಳುನಾಡಿಗೆ ಸಾಗಣೆ ಮಾಡಲಾಗುತ್ತಿರುವ ಪ್ರಕರಣಗಳು ನಡೆದಿದ್ದು, ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಿ ತಮಿಳುನಾಡಿಗೆ ಸಾಗಣೆಯಾಗದಂತೆ ಮಾಡಬೇಕು. ಅಲ್ಲದೇ ಖಾಸಗಿ ಅಂಗಡಿಗಳ ಮೇಲೆ ನಿಗಾವಹಿಸಬೇಕು ಎಂದರು.

ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ ಜಿಲ್ಲೆಯಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಚಿವ ಕೆ. ವೆಂಕಟೇಶ್ ಹಾಗೂ ಎಚ್‌.ಸಿ. ಮಹದೇವಪ್ಪ ಸೂಚಿಸಿದರು.

ಜಿಲ್ಲೆಯ ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ಶಾಶ್ವತ ಕುಡಿಯುವ ನೀರು ಕಲ್ಪಿಸಲು ಕ್ರಮವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಕಡೆ ಟ್ಯಾಂಕ್ ಮೂಲಕ ಪೂರೈಕೆ ಮಾಡಬೇಕು. ನೀರಿನ ಸಮಸ್ಯೆ ಬಗೆಹರಿಯುವ ತನಕ ನೀರಿನ ಪೂರೈಕೆ ನಿಲ್ಲಿಸಬಾರದು ಎಂದರು.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿಯಲ್ಲಿ ನೀರು ಸೇವಿಸಿ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಟ್ಯಾಂಕ್, ಜಾಕ್‌ವೆಲ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಲು ಕ್ರಮವಹಿಸಬೇಕು ಎಂದರು.

ಇದಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ವಾರಕ್ಕೊಮ್ಮೆ ನೀರಿನ ಪರೀಕ್ಷೆ ಮಾಡಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಬಯಲು ಶೌಚಕ್ಕೆ ತೆರಳುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಈ ಸಂಬಂಧ ಅರಿವು ಮೂಡಿಸಿ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದರು.

ಬಿಆರ್‌ಟಿ ಅರಣ್ಯ ವ್ಯಾಪ್ತಿಯ 8 ಹಾಡಿಗಳಿಗೆ ಜಲ ಜೀವನ್ ಯೋಜನೆಯಡಿ ಕುಡಿಯುವ ನೀರು ಸಂಪರ್ಕ ಮಾಡಿಲ್ಲ. ಅರಣ್ಯ ಕಾಯ್ದೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್, ಈ ಸಂಬಂಧ ಹುಲಿ ಯೋಜನೆ ಅಧಿಕಾರಿಗಳಿಗೆ ಆಪೂವಲ್‌ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಅರಣ್ಯ ವ್ಯಾಪ್ತಿ ಅಂತ ಹೇಳಿ ಕಾಮಗಾರಿ ನಡೆಸಲು ಅವಕಾಶ ನೀಡಿಲ್ಲ ಆದ್ದರಿಂದ ಪಂಪ್‌ಹೌಸ್‌ನ ಪೊಕೇಷನ್ ಸ್ಥಳಾಂತರ ಮಾಡಿ ಕಾಮಗಾರಿ ನಡೆಸುವಂತೆ ತಿಳಿಸಿದರು. ಪಂಪ್‌ಹೌಸ್ ಲೊಕೇಷನ್ ಸ್ಥಳಾಂತರಿಸಿ ಕಾಮಗಾರಿ ನಡೆಸುವಂತೆ ಕೆ. ವೆಂಕಟೇಶ್ ಸೂಚಿಸಿದರು.

ಡಿಸಿಎಫ್ ವಿರುದ್ಧ ಪುಟ್ಟರಂಗಶೆಟ್ಟಿ ಗರಂ; ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಬೇಡಗುಳಿಯಲ್ಲಿ ಝರಿಯಲ್ಲಿ ಬರುವ ನೀರನ್ನು ಪೈಪ್‌ಲೈನ್ ಮೂಲಕ ಜನರಿಗೆ ಒದಗಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಬಿಡುತ್ತಿಲ್ಲ. ಹಿಂದಿನಿಂದಲೂ ಇಲ್ಲಿ ಝರಿಯ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಯಾಕೆ ತಡೆ ಹಿಡಿಯುತ್ತೀರ ಎಂದು ಸಿ. ಪುಟ್ಟರಂಗಶೆಟ್ಟಿ ಅವರು ಡಿಸಿಎಫ್ ದೀಪ್ ಜೆ.ಕಂಟ್ರಾಕ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕನ್ನೇರಿ ಕಾಲೋನಿ ಹಾಗೂ ಬೂತಾಣಿ ಪೋಡುಗಳಲ್ಲೂ ಕುಡಿಯುವ ನೀರಿನ ಕಾಮಗಾರಿಗೆ ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.

ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಕೊಡಿಮೋಳೆ ಕೆರೆಗೆ ನೀರು ಪೂರೈಕೆಯಾಗುತ್ತಿದ್ದು, ಅಲ್ಲಿಂದ ಮುಂದಿನ ಕೆರೆಗಳಿಗೆ ನೀರು ಸರಬರಾಜು ಮಾಡಲು ವಿಳಂಬ ಮಾಡಿದ್ದಾರೆ. ನೂರಾರು ಕೋಟಿ ರು. ಯೋಜನೆ ನಿಂತಿದೆ ರೈತರಿಗೆ ನೀಡಬೇಕಾದ ಪರಿಹಾರ ನೀಡಿ ಕಾಮಗಾರಿ ಮುಗಿಸಿ ಮುಖ್ಯಮಂತ್ರಿಗಳಿಂದ ಚಾಲನೆ ನೀಡಿಸಬೇಕಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟರು ಸಭೆಯಲ್ಲಿ ಚರ್ಚಿಸಿದರು. ಜಿಲ್ಲಾಧಿಕಾರಿ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮನಿ ಸಾಹು, ಡಿಸಿಎಫ್‌ ದೀಪ್ ಜೆ.ಕಂಟ್ರಾಕ್ಟರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.