ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ ನೀರು

| Published : Oct 23 2024, 12:33 AM IST

ಸಾರಾಂಶ

ಮಂಗಳವಾರ ತುಂಗಭದ್ರಾ ಜಲಾಶಯದ 33 ಗೇಟುಗಳ ಪೈಕಿ 23 ಗೇಟ್‌ಗಳಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಇದರಿಂದ ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ.

ನದಿ ಪಾತ್ರದಲ್ಲಿ ಪ್ರವಾಹದ ಭೀತಿ

ಕನ್ನಡ ಪ್ರಭ ವಾರ್ತೆ ಮುನಿರಾಬಾದ

ಮಂಗಳವಾರ ತುಂಗಭದ್ರಾ ಜಲಾಶಯದ 33 ಗೇಟುಗಳ ಪೈಕಿ 23 ಗೇಟ್‌ಗಳಿಂದ ನದಿಗೆ ಒಂದು ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಇದರಿಂದ ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಜಲಾಶಯಕ್ಕೆ 1.1 ಲಕ್ಷ ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದಾಗ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಜಲಾಶಯದ 23 ಗೇಟ್‌ಗಳನ್ನು 3 ಅಡಿ ಎತ್ತರಕ್ಕೆ ಎತ್ತಿ ನದಿಗೆ 1 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿದ್ದಾರೆ.

ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 10ರಿಂದ 20 ಸಾವಿರ ಕ್ಯುಸೆಕ್ ಇರುತ್ತಿತ್ತು. ಅದರೆ ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ 1.1 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿರುತ್ತದೆ. ಇಂತಹ ಪ್ರಕರಣಗಳು ಜಲಾಶಯದ ಇತಿಹಾಸದಲ್ಲಿ ತುಂಬಾ ವಿರಳ ಎನ್ನಲಾಗಿದೆ.ನದಿ ಪಾತ್ರದಲ್ಲಿ ಪ್ರವಾಹ:

ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿರುವ ಹಿನ್ನೆಲೆ ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಇಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಮಂಗಳವಾರ ಬಂದ ಭಕ್ತಾಧಿಗಳಿಗೆ ನದಿಯಲ್ಲಿ ಸ್ನಾನ ಮಾಡದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿತ್ತು.

ಆನೆಗೊಂದಿ ಸಮೀಪದ ನವವೃಂದಾವನಕ್ಕೆ ಸಂಚಾರ ಕಡಿದುಹೋಗಿದೆ. ಹಂಪಿಯ ಸ್ಮಾರಕಗಳಾದ ಪುರಂದರದಾಸರ ಮಂಟಪ ಹಾಗೂ ಇತರ ಸ್ಮಾರಕಗಳು ಜಲಾವೃತಗೊಂಡಿವೆ.

ಈ ಸ್ಥಿತಿಯು ಇನ್ನೆರಡು ದಿನಗಳವರೆಗೂ ಮುಂದುವರೆಯಲಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.ಗಂಗಾವತಿ- ಕಂಪ್ಲಿ ಸೇತುವೆ ಮೇಲೆ ನೀರು, ಸಂಚಾರ ರದ್ದು:

ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಗಂಗಾವತಿ- ಕಂಪ್ಲಿ ತುಂಗಭದ್ರಾ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ಕಾರಣಕ್ಕಾಗಿ ಸೇತುವೆ ಮೇಲೆ ವಾಹನಗಳ ಸಂಚಾರ ರದ್ದುಪಡಿಸಲಾಗಿದೆ.ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ಒಳ ಹರಿವು ಇದ್ದಿದ್ದರಿಂದ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ವಾಹನಗಳ ಸಂಚಾರವನ್ನು ಕಂಪ್ಲಿ ಸೇತುವೆ ಮೇಲೆ ರದ್ದುಪಡಿಸಿ ಕಡೇಬಾಗಿಲು ಬುಕ್ಕಸಾಗರದ ಮೇಲೆ ಬಳ್ಳಾರಿ, ಹೊಸಪೇಟೆ, ದಾವಣಗೆರೆಗೆ ಹೋಗುವುದಕ್ಕೆ ಅನುಮತಿ ನೀಡಿದೆ.ನದಿಗೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಆನೆಗೊಂದಿಯ ನವವೃಂದಾವನ ಗಡ್ಡೆ, ಕೃಷ್ಣದೇವರಾಯ ಸಮಾಧಿ, ಹನುಮನಹಳ್ಳಿ, ಪಂಪಾಸರೋವರ ಸಮೀಪದ ಪ್ರದೇಶಗಳ ಜನತೆಗೆ ಕಟ್ಟೆಚ್ಚರ ನೀಡಲಾಗಿದೆ. ಅಲ್ಲದೇ ಯಾವುದೇ ರೀತಿಯ ತೆಪ್ಪಗಳನ್ನು ಹಾಕ ಬಾರದೆಂದು ತಾಲೂಕ ಆಡಳಿತ ಸೂಚಿಸಿದೆ.

ಗಂಗಾವತಿ- ಕಂಪ್ಲಿ ಸೇತುವೆ ಬಳಿ ಪೊಲೀಸರು ನಿಗಾ ವಹಿಸಿದ್ದು, ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ.