ಸಾರಾಂಶ
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಂಗನ ಕಾಯಿಲೆ ಪೀಡಿತ ಮಹಿಳೆಯೊಬ್ಬಳು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ/ಸಿದ್ದಾಪುರ
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಂಗನ ಕಾಯಿಲೆ ಪೀಡಿತ ಮಹಿಳೆಯೊಬ್ಬಳು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
ಈ ಮೂಲಕ ಉತ್ತರ ಕರ್ನಾಟಕದ ಸಿದ್ದಾಪುರ ತಾಲೂಕಿನಲ್ಲಿ ಮಂಗನಕಾಯಿಲೆಗೆ ಮತ್ತೊಬ್ಬರು ಬಲಿಯಾದಂತಾಗಿದೆ. ಕಳೆದೊಂದು ವಾರದಲ್ಲಿ ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಇಬ್ಬರು ಬಲಿಯಾದಂತಾಗಿದೆ.
ಸಿದ್ದಾಪುರ ತಾಲೂಕಿನ ಕೋರ್ಲಕೈ ಗ್ರಾಮದ ನಾಗಮ್ಮ ಸುಬ್ಬ ಮಡಿವಾಳ (57) ಮೃತರು. ಜ.28ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಂದರ್ಭದಲ್ಲಿ ನಾಗಮ್ಮ ಅವರಿಗೆ ಕೆಮ್ಮು ಮತ್ತು ಜ್ವರ ಇರುವುದು ತಿಳಿದುಬಂದಿತ್ತು.
ಆದರೂ ಅವರು ಕಫ ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ. ಜ.30ರಂದು ಮನೆ ಭೇಟಿ ಸಮಯದಲ್ಲಿ ಅವರಿಗೆ ಜ್ವರ ಇರುವ ಕಾರಣ ಸಮುದಾಯ ಆರೋಗ್ಯಾಧಿಕಾರಿಗಳು ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷೆ ನಡೆಸಿದ್ದರು.
ಫೆ.1ರಂದು ಕೆಎಫ್‍ಡಿ ಆರ್‌ಟಿಪಿಸಿಆರ್ ಪಾಸಿಟಿವ್ ಎಂದು ಶಿವಮೊಗ್ಗದಿಂದ ವರದಿ ಬಂದಿತ್ತು. ಫೆ.2ರಂದು ಅವರನ್ನು ಸಿದ್ದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚೇತರಿಕೆಯಾಗದ ಕಾರಣ ಫೆ.3ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲೂ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಫೆ.4ರಂದು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫೆ.5ರಂದು ರಕ್ತ ಮರುಪರೀಕ್ಷೆ ಮಾಡಲಾಗಿತ್ತು.
ಫೆ.6ರಂದು ಕೆಎಫ್‍ಡಿ ಪಾಸಿಟಿವ್ ವರದಿ ಬಂದಿತ್ತು. ಇದಾದ ಬಳಿಕ ಫೆ.24ರಂದು ವೈದ್ಯರ ಸಲಹೆ ವಿರುದ್ಧವಾಗಿ ಕೆಎಂಸಿ ಆಸ್ಪತ್ರೆಯಿಂದ ಮಧ್ಯಾಹ್ನ 3.30ಕ್ಕೆ ನಾಗಮ್ಮ ಬಿಡುಗಡೆ ಹೊಂದಿದ್ದರು.
ಆರೋಗ್ಯ ಇಲಾಖೆಯವರು ಮತ್ತೆ ನಾಗಮ್ಮ ಮನವೊಲಿಸಿ ಫೆ.24ರಂದು ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಿದ್ದರು. ಸಿದ್ದಾಪುರ ತಾಲೂಕಿನಲ್ಲಿ ಈವರೆಗೆ 43 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.