One must bring together a mind unsettled by writing.

-ದಸರಾ ಕಾವ್ಯ ಸಂಭ್ರಮ

-ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಕರೆ । 35ಕ್ಕೂ ಹೆಚ್ಚು ಕವಿಗಳಿಂದ ಕವನ ವಾಚನ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕವಿ, ಲೇಖಕರು, ಬರಹಗಾರರು ಸಮಾಜದ ಸ್ವಾಸ್ಥ್ಯ ಕಾಪಾಡುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದು, ಬರವಣಿಗೆ ಮೂಲಕ ಕದಡಿರುವ ಮನಸ್ಸು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಲೇಖಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಸಲಹೆ‌ ನೀಡಿದರು.

ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಆಯೋಜಿಸಿದ್ದ ದಸರಾ ಕಾವ್ಯ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಮತ, ಧರ್ಮ, ಭಾಷೆ ಎಲ್ಲವನ್ನು ರಾಜಕೀಕರಣಗೊಳಿಸಿ ಬೇರ್ಪಟ್ಟಿರುವ ಪ್ರಸ್ತುತ ಕಾಲಘಟ್ಟದಲ್ಲಿ ಪರಸ್ಪರ ಮನಸ್ಸುಗಳನ್ನು ಜೋಡಿಸಲು ಹಣತೆ ಹೆಚ್ಚಬೇಕಾದ ಅಗತ್ಯವಿದೆ. ಜಾತಿ, ಮತ, ಧರ್ಮದ ನೆಪದಲ್ಲಿ ಸಣ್ಣ ಸಣ್ಣ ವಿಷಯಗಳಿಂದ ಮನಸ್ಸುಗಳು ಪ್ರಕ್ಷುಬ್ಧಗೊಂಡು ಛಿದ್ರವಾಗಿವೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಹಣತೆ ಹಚ್ಚುವ ಪದ್ಯದಲ್ಲಿ ಸ್ವಷ್ಟವಾಗಿ ಯುವಕರೇ ನೀವು ಬೆಂಕಿ ಆಗಬೇಡಿ, ಬೆಳಕಾಗಿ ಎಂದು ಹೇಳಿದ್ದಾರೆ.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಬಹುದೊಡ್ಡ ಜವಾಬ್ದಾರಿಯನ್ನು ಲೇಖಕರು, ಕವಿ, ಬರಹಗಾರರ ಹೊಂದಿದ್ದಾರೆ ಎಂದರು.

ಮಲೆನಾಡಿನ ಭಾಗವಾಗಿದ್ದ ದ.ರಾ.ಬೇಂದ್ರೆ ಜನಿಸಿದ ಧಾರವಾಡ, ಕುವೆಂಪು ಅವರ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ ದಟ್ಟ ಅರಣ್ಯದ ಪ್ರಭಾವದಿಂದ ಅವರು ಪ್ರಸಿದ್ಧ ಕವಿಗಳಾಗಿದ್ದಾರೆ ಎಂದು ನಾವು ಸರಳವಾಗಿ ಮಾತನಾಡುತ್ತೇವೆ.

ಆದರೆ, ಕಾಡು ಇದೆ ಎನ್ನುವ ಕಾರಣಕ್ಕೆ ಕುವೆಂಪು ಹಾಗೂ ದ.ರಾ. ಬೇಂದ್ರೆ ಕವಿಯಾಗಲಿಲ್ಲ. ಕುಪ್ಪಳ್ಳಿ ಹಾಗೂ ಧಾರವಾಡಕ್ಕಿಂತ ದಟ್ಟವಾದ ಕಾಡು ದಾಂಡೇಲಿಯಲ್ಲಿದ್ದು, ಅಲ್ಲಿ ಏಕೆ ಕನಿಷ್ಠ ಒಬ್ಬ ಕವಿ ಹುಟ್ಟಲಿಲ್ಲ ಎಂದು ದ.ರಾ.ಬೇಂದ್ರೆ ಹಿಂದೆಯೇ ಪ್ರಶ್ನಿಸಿದ್ದಾರೆ ಎಂದರು.

ಕಾಡಿರುವ ಕಾರಣಕ್ಕೆ ಕವಿತೆ ಹುಟ್ಟುವುದಿಲ್ಲ. ಕವಿತೆ ಬರೆಯಲು ಕಾಡು, ನಾಡು, ಹಸಿವು ಹಾಗೂ ಸಂತೃಪ್ತಿ ಪ್ರೇರಣೆ ಆಗುತ್ತದೆ. ಹಸಿವೆ ಇಲ್ಲದ ಸಮಾಜದಲ್ಲಿ, ಹಸಿವಿನ ತಲ್ಲಣದಲ್ಲಿ ಕವಿ ಹುಟ್ಟುತ್ತಾರೆ. ಎಷ್ಟು ಜನ ಕವಿಗಳು ಹಸಿವೆಯೇ ಒಳಗೆ ಹುಟ್ಟಿಲ್ಲ ಎಂದು ಪ್ರಶ್ನಿಸಿದ ಅವರು ಕವಿತೆ ಹುಟ್ಟುವುದು ಕಾಡಲ್ಲೂ ಅಲ್ಲ, ನಾಡಲ್ಲೂ ಅಲ್ಲ, ನಮ್ಮ ಅಂತರಂಗದೊಳಗೆ ಕವಿತೆ ಹುಟ್ಟುತ್ತದೆ. ಎಲ್ಲ ಕಡೆ ಕವಿ ಮನಸ್ಸು ಹುಟ್ಟುತ್ತದೆ. ಕವಿಯಾಗುವವರಿಗೆ ಒಳ್ಳೆಯ ಕವಿತೆಗಳ ಪರಿಚಯ ಆಗಬೇಕು. ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಸಿದ್ದಲಿಂಗಯ್ಯ ಸೇರಿದಂತೆ ಹಲವು ಕವಿಗಳ ಕವಿತೆ ಓದಬೇಕು ಎಂದು ಸಲಹೆ ನೀಡಿದರು.

ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಬಿ.ಪಾಪಯ್ಯ‌ ಮಾತನಾಡಿ, ಪದೇ ಪದೇ ತೋಚಿದ್ದನ್ನು ಗೀಚಿದಾಗ ನೀವು ಕವಿಯಾಗಲು ಸಾಧ್ಯತೆ ಇದೆ. ಮನಸ್ಸಿನ ಭಾವನೆಗಳನ್ನು ಕ್ರೋಡಿಕರಿಸಿದಾಗ ಕವಿಯಾಗಲು ಅವಕಾಶವಿದ್ದು ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ‌‌ ನೀಡಿದರು.

ಸಾಹಿತ್ಯ ಭವನ ನಿರ್ಮಾಣ:

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಯುವ ಕವಿ ಸಮುದಾಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಾ.ಕಸಾಪ ಹಲವು ವರ್ಷಗಳಿಂದ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸುತ್ತಿದೆ. ಕವಿಗಳಾಗಿ ಹಾಗೂ ಬರಹಗಾರರಾಗಿ ಹೊರಹೊಮ್ಮುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆ ನಡೆಸಲು ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕಾಗಿ ಅನುದಾನ ನೀಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಶಾಸಕ ವಿಜಯೇಂದ್ರ ಅವರಿಗೆ ವೈಯಕ್ತಿಕವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ ಎಂದರು.

ಕಾವ್ಯ ಸಂಭ್ರಮದಲ್ಲಿ 35ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ‌ನವೀನ್ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಶಿವರಂಜನಿ ಸುದರ್ಶನ್, ತಾ.ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ನರಸಿಂಹಸ್ವಾಮಿ, ಕಸಾಪ ಪದಾಧಿಕಾರಿ ಶಿವಲಿಂಗಪ್ಪ ಪಾರಿವಾಳ, ಡಾ.ಪ್ರಕಾಶ್, ಜಿಯಾವುಲ್ಲಾ, ತಿಪ್ಪೇಶ್ ಇದ್ದರು.

ಫೋಟೋ :18 ಕೆ.ಎಸ್.ಕೆ.ಪಿ 1)

ಶಿಕಾರಿಪುರ ಕಸಾಪ ವತಿಯಿಂದ ನಡೆದ ಕವಿಗೋಷ್ಠಿ ಕಾರ್ಯಕ್ರಮವನ್ನು ಕವಿ ಸಾಗರದ ಲೇಖಕ ಡಾ.ಸರ್ಫ್ರಾಜ್ ಚಂದ್ರಗುತ್ತಿ ಉದ್ಘಾಟಿಸಿದರು.