ಸಾರಾಂಶ
ಹಳೇ ಹುಬ್ಬಳ್ಳಿಯ ಜಂಗ್ಲಿಪೇಟೆಯ ವಡ್ಡರ ಓಣಿಯ ನಿವಾಸಿಗಳಾದ ಹನುಮಂತ ಮಂಜಲಕರ, ಶಿವಾಜಿ ಮಣ್ಣವಡ್ಡರ ಹಾಗೂ ಗಣೇಶ ಬೆಡಸೂರ ಮೂವರು ಸ್ನೇಹಿತರು ಕೂಡಿ ಕಳೆದ ಸೆ. 22ರಂದು ತಿರುಪತಿಯ ದರ್ಶನಕ್ಕೆ ಹೋಗಿದ್ದರು. ಆದರೆ, ಮರಳಿ ಹುಬ್ಬಳ್ಳಿಗೆ ಬಂದಿದ್ದು ಶಿವಾಜಿ ಮತ್ತು ಗಣೇಶ ಮಾತ್ರ.
ಹುಬ್ಬಳ್ಳಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಮೂವರು ಸ್ನೇಹಿತರಲ್ಲಿ ಒಬ್ಬ ನಾಪತ್ತೆಯಾದರೆ, ಮತ್ತೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಈ ಪ್ರಕರಣ ಇಲ್ಲಿನ ಕಸಬಾಪೇಟೆ ಠಾಣೆಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಹಳೇ ಹುಬ್ಬಳ್ಳಿಯ ಜಂಗ್ಲಿಪೇಟೆಯ ವಡ್ಡರ ಓಣಿಯ ನಿವಾಸಿಗಳಾದ ಹನುಮಂತ ಮಂಜಲಕರ, ಶಿವಾಜಿ ಮಣ್ಣವಡ್ಡರ ಹಾಗೂ ಗಣೇಶ ಬೆಡಸೂರ ಮೂವರು ಸ್ನೇಹಿತರು ಕೂಡಿ ಕಳೆದ ಸೆ. 22ರಂದು ತಿರುಪತಿಯ ದರ್ಶನಕ್ಕೆ ಹೋಗಿದ್ದರು. ಆದರೆ, ಮರಳಿ ಹುಬ್ಬಳ್ಳಿಗೆ ಬಂದಿದ್ದು ಶಿವಾಜಿ ಮತ್ತು ಗಣೇಶ ಮಾತ್ರ. ಇವರ ಜತೆಗೆ ತೆರಳಿದ್ದ ಹನುಮಂತ ಮರಳಿ ಬಂದಿಲ್ಲ. ಈ ಬಗ್ಗೆ ಕೇಳಿದರೆ ಹನುಮಂತನಿಗೆ ತಿರುಪತಿಯಲ್ಲಿ ಮೂರ್ಛೆ ಬಂದಿತ್ತು. ಆತನನ್ನು ಟಿಟಿಡಿ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾವು ಮೊದಲಿಗೆ ದೇವರ ದರ್ಶನ ಪಡೆದು ಬಳಿಕ ಆಸ್ಪತ್ರೆಗೆ ಹೋದೆವು. ಆದರೆ, ಅಲ್ಲಿ ಹನುಮಂತ ಇರಲಿಲ್ಲ. ಎಲ್ಲ ಕಡೆ ಹುಡುಕಿದರೂ ಸಿಗಲಿಲ್ಲ. ಹೀಗಾಗಿ, ಮರಳಿ ಹುಬ್ಬಳ್ಳಿಗೆ ಬಂದಿದ್ದೇವೆ ಎಂದು ಶಿವಾಜಿ ಮತ್ತು ಗಣೇಶ ಹೇಳಿದ್ದಾರೆ.ಇದರಿಂದ ತೀವ್ರ ಆತಂಕಗೊಂಡ ಹನುಮಂತನ ಕುಟುಂಬಸ್ಥರು, ಇಬ್ಬರಿಗೂ ಬೈದು ಬುದ್ಧಿವಾದ ಹೇಳಿ ಎಲ್ಲರೂ ಸೇರಿ ಮರಳಿ ತಿರುಪತಿಗೆ ಹೋಗಿ ಹನುಮಂತನನ್ನು ಹುಡುಕಿಕೊಂಡು ಬರಲು ನಿರ್ಧರಿಸಿ ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಇದಾದ ಕೆಲ ಗಂಟೆಗಳಲ್ಲಿ ಶಿವಾಜಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದರಿಂದ ಮತ್ತಷ್ಟು ಗಾಬರಿಯಾದ ಹನುಮಂತನ ಕುಟುಂಬಸ್ಥರು, ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಉಳಿದ ಗಣೇಶನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇನ್ನು ನಾಪತ್ತೆಯಾದ ಹನುಮಂತ ವಿಚಾರವಾಗಿ ಸಾಕಷ್ಟು ಅನುಮಾನ ಮೂಡಿದೆ.ಈ ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹನುಮಂತ ಹುಡುಕಾಟಕ್ಕೆ ತಿರುಪತಿಗೆ ತೆರಳಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ಈ ಮೂವರು ಸ್ನೇಹಿತರು ಯಾವುದೇ ರೀತಿಯ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ ಎಂಬ ಅಂಶವು ಬೆಳಕಿಗೆ ಬಂದಿದ್ದು, ಇದರಿಂದಾಗಿ ಈ ಪ್ರಕರಣ ಮತ್ತಷ್ಟು ಕ್ಲಿಷ್ಟಕರವಾಗಿದೆ.
ನಾಪತ್ತೆಯಾದ ಹನುಮಂತನ ಹುಡುಕಲು ಈಗ ಕುಟುಂಬಸ್ಥರು ತಿರುಪತಿಗೆ ತೆರಳಿರುವುದು ಗೊತ್ತಾಗಿದೆ. ಅಲ್ಲದೇ ಪೊಲೀಸರು ಗಣೇಶನನ್ನು ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ರೀತಿ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.