ಸಾರಾಂಶ
ಯಾದಗಿರಿ : ದೇಶದ ರಕ್ಷಣೆಗಾಗಿ ಇಸ್ರೇಲ್ ದೇಶದ ಮಾದರಿಯಲ್ಲಿ ಸೈನಿಕನನ್ನು ರೂಪಿಸಬೇಕು, ಇದಕ್ಕಾಗಿ, "ಮನೆಗೊಬ್ಬರು ಸೇನೆ ಕಡ್ಡಾಯ " ಎಂಬ ನಿಯಮವಾದಾಗ ಮಾತ್ರ ದೇಶ ಸುರಕ್ಷಿತವಾಗಿರಲು ಸಾಧ್ಯ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬುಧವಾರ ಯಾದಗಿರಿಗೆ ಆಗಮಿಸಿದ್ದ ಅವರು, ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ವಿಶ್ವದಲ್ಲಿಯೇ ಇಸ್ರೇಲ್ ಚಿಕ್ಕ ರಾಷ್ಟ್ರ. ಆದರೆ, ಅಲ್ಲಿನ ನಾಗರೀಕರು ಪ್ರಜ್ಞಾವಂತರು, ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿದ್ದಾರೆ, ಆದರೂ ಅವರ ದೇಶಕ್ಕೆ ಯಾರಿಂದ ತೊಂದರೆ ಬರಬಹುದು ಎಂದು ಅರಿತು ಕುಟುಂಬದಲ್ಲಿ ಒಬ್ಬ ಯುವಕ ದೇಶದ ಸೈನ್ಯಕ್ಕೆ ಸೇರಿ, ನಾಗರೀಕರ ರಕ್ಷಣೆಗೆ ಮುಂದಾಗಿ, ಇತರ ದೇಶಗಳಿಗೆ ಮಾದರಿಯಾಗಿದ್ದಾರೆ, ಅದರಂತೆ ದೇಶದಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನು ತರುವ ಮೂಲಕ ಇಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬ ಒಬ್ಬ ಯುವಕನನ್ನು ಭಾರತೀಯ ಸೈನ್ಯಕ್ಕೆ ಸೇರಿಸಬೇಕು, ಅಂದಾಗ ಮಾತ್ರ ದೇಶ ಸುರಕ್ಷಿತವಾಗಿರುತ್ತದೆ, ಎಲ್ಲಾ ವರ್ಗದ ಜನರಲ್ಲಿ ದೇಶಾಭಿಮಾನ ಮೂಡಿ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಳೆದ 12 ವರ್ಷಗಳಲ್ಲಿ ದೇಶ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ, ಇಲ್ಲಿ ಎಲ್ಲ ವರ್ಗದ ಜನರೂ ಶಾಂತಿ, ಸಾಮರಸ್ಯದಿಂದ ಬಾಳುತ್ತಿದ್ದಾರೆ. ಆದರೆ, ಅಭಿವೃದ್ಧಿ ಸಹಿಸದ ನೆರೆಯ ಪಾಕಿಸ್ತಾನದ ಉಗ್ರ ಸಂಘಟನೆಗಳು ಪದೇ ಪದೇ ಭಾರತೀಯರ ಮೇಲೆ ಮೋಸದಿಂದ ದಾಳಿ ಮಾಡಿ, ಪ್ರಾಣಹಾನಿ ಮಾಡುತ್ತಿದ್ದಾರೆ, ನಾವೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು. ಈ ಹಿಂದೆ ದೇಶ ಸ್ವಾತಂತ್ರ ಸಂದರ್ಭದಲ್ಲಿ ಕೆಲವು ನಾಯಕರು ಮಾಡಿದ ತಪ್ಪು ನಿರ್ಧಾರಗಳಿಂದ ಇಂದೂ ಕೂಡ ಭಯೋತ್ಪಾದಕರಿಂದ ತೊಂದರೆ ಅನುಭವಿಸುತ್ತಿದ್ದೇವೆ, ಇದನ್ನು ಅರಿತು ಕೇಂದ್ರ ಸರ್ಕಾರ ಕಾಶ್ಮಿರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿತು. ಪರಿಣಾಮ ಅಲ್ಲಿ ಶಾಂತಿ, ಪ್ರಗತಿಗೆ, ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ನೀಡಿತು, ಇದನ್ನು ಸಹಿಸದ ಪಾಕ್ ಆಶ್ರಯದ ಉಗ್ರ ಸಂಘಟನೆಗಳು ಮಂಗಳವಾರ ಜಮ್ಮು-ಕಾಶ್ಮೀರದ ಪಹಲ್ಗಾಮ್‌ಗೆ ಪ್ರವಾಸಕ್ಕೆ ತೆರಳಿದ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ, ಇದರಲ್ಲಿ 28 ಕ್ಕೂ ಹೆಚ್ಚು ಭಾರತೀಯ ನಾಗರಿಕರು ಅದರಲ್ಲಿ ಕನ್ನಡಿಗ ಮೂವರು ಸಾವನ್ನಪ್ಪಿರುವುದು ಎಲ್ಲರಿಗೂ ನೋವು ತಂದಿದೆ. ಭಯೋತ್ಪಾದಕರು ಹಿಂದೂಗಳನ್ನೆ ಟಾರ್ಗೆಟ್ ಮಾಡಿ ಗುಂಡು ಹಾರಿಸಿ ಕೊಲೆ ಮಾಡಿರುವ ಅಮಾನವೀಯ ಕೃತ್ಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಉಗ್ರರು ಎಲ್ಲೇ ಅಡಗಿದ್ದರು, ಭಾರತೀಯ ಸೈನಿಕರು ಅವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.