ಸಾರಾಂಶ
ಗದಗ: ಗದಗ- ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ್ ನೇತೃತ್ವದ ಬಿಜೆಪಿ ತಂಡ ಅಲ್ಪ ಅವಧಿಯಲ್ಲೇ ಒಂದು ಸುತ್ತು ಪ್ರಚಾರಕಾರ್ಯ ಪೂರ್ಣಗೊಳಿಸಿದ್ದು, ಭಾರೀ ಸಂಖ್ಯೆಯಲ್ಲಿ ಬಂದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದೆ.
ಪ್ರತಿ ಬೂತ್ ನಲ್ಲಿಯೂ 370ಕ್ಕೂ ಹೆಚ್ಚಿನ ಮತಗಳು ಬರಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಪೂರ್ವದಲ್ಲಿಯೇ ಗದಗ ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ತೆರಳಿ, ಅಲ್ಲಿಯೇ ಕಾರ್ಯಕರ್ತರ ಸಭೆಗಳನ್ನು ನಡೆಸಿ ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗಿದೆ. ಮನೆ ಮನೆಗೂ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ.ಆಯಾ ಗ್ರಾಮಗಳಲ್ಲಿನ ಪಕ್ಷದ ಪ್ರಮುಖರು ಮತ್ತು ಯುವಕರನ್ನು ಒಂದೆಡೆ ಸೇರಿಸಿ, ಹಳೆ ಬೇರು ಹೊಸ ಚಿಗುರು ಸೇರಿಸಿ ಚುನಾವಣೆ ನಡೆಸುವ ರಣತಂತ್ರ ರೂಪಿಸಿ ಎಲ್ಲರಲ್ಲಿಯೂ ಜಾಗೃತಿ ಮೂಡಿಸಿದರು.
ಪ್ರೀತಿ, ಮತಗಳಾಗಲಿ:ಬೇರೆ ಬೇರೆ ಸಣ್ಣ ಪುಟ್ಟ ಕಾರಣಗಳಿಂದ ಪಕ್ಷದಿಂದ ದೂರವಾದವರು, ಮುನಿಸಿಕೊಂಡು ಮನೆಯಲ್ಲಿದ್ದವರನ್ನು ಖುದ್ದು ಸಂಪರ್ಕಿಸಿ ಅವರಲ್ಲಿ ಭರವಸೆ ಮೂಡಿಸಿ. ಪಕ್ಷ ದೊಡ್ಡದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸುವುದು ಹೇಗೆ? ದೇಶದ ಪ್ರತಿಯೊಬ್ಬರ ಮೋದಿ ಅವರನ್ನು ಪ್ರೀತಿಸುತ್ತಾರೆ, ಆದರೆ ಈ ಪ್ರೀತಿ ಮತಗಳಾಗಿ ರೂಪಿಸಬೇಕು ಎಂದು ಯುವ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.
ವಿಪ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭದ್ರೇಶ ಕುಸಲಾಪುರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದು ಪಲ್ಲೇದ, ಮುಖಂಡ ಅಶೋಕ ಸಂಕಣ್ಣವರ, ಗದಗ ಗ್ರಾಮೀಣ ಅಧ್ಯಕ್ಷ ದ್ಯಾಮಣ್ಣ ನೀಲಗುಂದ, ಕಾರ್ಯದರ್ಶಿ ಬೂದಪ್ಪ ಹಳ್ಳಿ, ಬಸವಣ್ಣೆಪ್ಪ ಚಿಂಚಲಿ, ನಗರಸಭೆ ಸದಸ್ಯ ಮಹಾಂತೇಶ ನಲವಡಿ, ಪ್ರಶಾಂತ ನಾಯ್ಕರ, ಶಿವು ಹಿರೇಮನಿ ಪಾಟೀಲ, ಮಹೇಶ ದಾಸರ, ಸುಧೀರ ಕಾಟೇಗಾರ, ಮಂಜುನಾಥ ಮುಳಗುಂದ, ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಅಮರನಾಥ ಗಡಗಿ ಸೇರಿದಂತೆ ಅನೇಕರು ಸಿ.ಸಿ.ಪಾಟಲ್ರಿಗೆ ಹೆಗಲುಗೊಟ್ಟು ಶ್ರಮಿಸುತ್ತಿದ್ದಾರೆ.ಈಗಾಗಲೇ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಲಾಗಿದೆ. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರಿಗೆ ಬೇಸರ ಉಂಟಾಗಿದೆ. ನಮ್ಮ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅತೀ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.ಗದಗ ಜಿಲ್ಲೆಯಾದ್ಯಂತ ನಮ್ಮ ಪಕ್ಷದ, ಹಿರಿಯ ನಾಯಕರು, ಕಾರ್ಯಕರ್ತರು ಪ್ರಧಾನಿ ಮೋದಿ ಅವರ ಜನಪರ ಕಾರ್ಯಗಳನ್ನು ತಿಳಿಸುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ಕಂಡು ಬರುತ್ತಿದೆ ಎಂದು ಹಾವೇರಿ, ಗದಗ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.