ಕೆಆರ್ ಎಸ್ ನಿಂದ 1.70 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

| Published : Aug 01 2024, 12:27 AM IST

ಸಾರಾಂಶ

ಕೆಆರ್‌ಎಸ್‌ನ ಬೃಂದಾವನ ಗಾರ್ಡನ್‌ಗೆ ತೆರಳುವ ರಸ್ತೆ ಹಾಗೂ ಪಾರ್ಕಿಂಗ್ ಸ್ಥಳ ನೀರಿನಿಂದ ಸಂಪೂರ್ಣ ಮುಳುಗಡೆಯಾದ ಕಾರಣ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಲಾಗಿದೆ. ಬೃಂದಾವನದ ಪಕ್ಕದಲ್ಲಿರುವ ಬೋಟಿಂಗ್ ಪಾಂಟಿಂಗ್‌ನಿಂದ ನೀರು ಹೆಚ್ಚಾಗಿ ಬೃಂದಾವನ ಗಾರ್ಡನ್ ಮುಳುಗಡೆ ಭೀತಿ ಎದುರಿಸುತ್ತಿದೆ. ಹೀಗಾಗಿ ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ನಿಗಮದ ಎಇಇ ಅಭು ಫಾರುಕ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೃಷ್ಣರಾಜಸಾಗರ ಜಲಾಶಯದಿಂದ 1.70 ಲಕ್ಷ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡುತ್ತಿರುವುದರಿಂದ ತಾಲೂಕಿನ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆ ಭೀತಿ ಎದುರಿಸುತ್ತಿದೆ.

ಕೊಡಗು ಸೇರಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಜುಲೈ 31 ಮತ್ತು ಆಗಸ್ಟ್ 1 ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರಿಂದ ಹೆಚ್ಚಿನ ನೀರು ಕೆಆರ್ ಎಸ್ ಗೆ ಹರಿದು ಬರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಲಕ್ಷಾಂತರ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ.

ತಾಲೂಕಿನ ಪ್ರವಾಸಿ ತಾಣಗಳಾದ ಕೆಆರ್‌ಎಸ್ ಬೃಂದಾವನ, ಬಲಮುರಿ, ಎಡಮುರಿ, ರಂಗನತಿಟ್ಟು ಪಕ್ಷಿಧಾಮ, ಘೋಸಾಯಿಘಾಟ್, ಸಂಗಮ, ಪಶ್ಚಿಮ ವಾಹಿನಿ, ನದಿ ತೀರದ ಅಜುಬಾಜು ಸೇರಿ ಹಲವು ತಾಣಗಳಿಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಕೊಡಗು ಮತ್ತು ಕೇರಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕಾವೇರಿ, ಕಪಿಲಾ ನದಿ ಉಕ್ಕಿ ಹರಿಯುತ್ತಿವೆ. ಕೆಆರ್ ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದ ಒಳ ಹರಿವು ಹೆಚ್ಚಾಗಿದ್ದು, ಅಣೆಕಟ್ಟೆಯಿಂದ ನದಿಗೆ 1,72,161 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ನದಿ ಪಾತ್ರದ ಕೆಳ ಭಾಗದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ತಾಲೂಕು ಹಾಗೂ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಆರ್‌ಎಸ್‌ನ ಬೃಂದಾವನ ಗಾರ್ಡನ್‌ಗೆ ತೆರಳುವ ರಸ್ತೆ ಹಾಗೂ ಪಾರ್ಕಿಂಗ್ ಸ್ಥಳ ನೀರಿನಿಂದ ಸಂಪೂರ್ಣ ಮುಳುಗಡೆಯಾದ ಕಾರಣ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶವನ್ನು ಅನಿರ್ದಿಷ್ಟಾವಧಿವರೆಗೂ ಮುಂದೂಡಲಾಗಿದೆ. ಬೃಂದಾವನದ ಪಕ್ಕದಲ್ಲಿರುವ ಬೋಟಿಂಗ್ ಪಾಂಟಿಂಗ್‌ನಿಂದ ನೀರು ಹೆಚ್ಚಾಗಿ ಬೃಂದಾವನ ಗಾರ್ಡನ್ ಮುಳುಗಡೆ ಭೀತಿ ಎದುರಿಸುತ್ತಿದೆ. ಹೀಗಾಗಿ ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ನಿಗಮದ ಎಇಇ ಅಭು ಫಾರುಕ್ ತಿಳಿಸಿದ್ದಾರೆ.

ಮುಳುಗುವ ಬೀತಿಯಲ್ಲಿ ವೆಲ್ಲೆಸ್ಲಿ ಸೇತುವೆ:

ಕೆಆರ್ ಎಸ್ ನಿಂದ ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಪಟ್ಟಣದ ಐತಿಹಾಸಿಕ 200 ವರ್ಷಗಳ ಹಳೆಯದಾದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಭೀತಿ ಎದುರಿಸುತ್ತಿದೆ. ಕೆಲ ವರ್ಷಗಳ ಹಿಂದೆ ಸೇತುವೆ ಮುಳುಗಡೆಯಾಗಿತ್ತು.

ಪಟ್ಟಣದ ನಿಮಿಷಾಂಭ ದೇವಸ್ಥಾನ, ಸಂಗಮ, ಸಾಯಿ ಆಶ್ರಮ ಸೇರಿ ಹಲವು ಪ್ರವಾಸಿತಾಣಗಳು ಪಟ್ಟಣದಲ್ಲಿ ಮುಳುಗಡೆ ಹಂತ ತಲುಪಿವೆ. ಇಂದು ಅಥವಾ ನಾಳೆ ಯಾವುದೇ ಕ್ಷಣದಲ್ಲಾದರೂ 2 ಲಕ್ಷಕ್ಕೂ ಅಧಿಕ ನೀರನ್ನು ಹೊರ ಬಿಡಲಾಗುವುದು ಎಂದು ಜಿಲ್ಲಾಡಳಿತ, ಕೆಆರ್ ಎಸ್ ಅಧೀಕ್ಷಕರು ತಿಳಿಸಿರುವುದರಿಂದ ತಾಲೂಕಿನ ತಗ್ಗು ಪ್ರದೇಶಗಳು ಮತಷ್ಟು ಮುಳುಗಡೆ ಭೀತಿ ಎದುರಿಸುತ್ತಿವೆ.