ಸಾರಾಂಶ
ಭಟ್ಕಳ: ತಾಲೂಕಿನಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ-ಸಡಗರದಿಂದ ಅಚರಿಸಲಾಯಿತು.
ತಾಲೂಕು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಹಾಯಕ ಆಯುಕ್ತೆ ಡಾ. ನಯನಾ ಅವರು, ಹೋರಾಟಗಾರರು, ಹಿರಿಯರ ತ್ಯಾಗ-ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿದ್ದು, ಇದನ್ನು ನಾವೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ದೇಶದ ಬಗ್ಗೆ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ರಕ್ಷಣೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹತ್ವದ ಅಭಿವೃದ್ಧಿ ಸಾಧಿಸಿದೆ. ದೇಶದ ಹೊರಗಿನ ಮತ್ತು ಆಂತರಿಕ ವೈರಿಗಳ ಬಗ್ಗೆ ಸದಾ ಜಾಗೃತಿಯಿಂದ ಇದ್ದು ದೇಶಕ್ಕೆ ತೊಂದರೆಯಾದಾಗ ರಕ್ಷಿಸಿಕೊಳ್ಳಲು ನಾವೆಲ್ಲರೂ ಕಟಿಬದ್ಧರಾಗಬೇಕು. ಇತ್ತೀಚಿನ ಪ್ರಕೃತಿ ವಿಕೋಪದಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಪ್ರತಿಯೊಬ್ಬರೂ ಪರಿಸರ ಮತ್ತು ಅದರ ರಕ್ಷಣೆ ಬಗ್ಗೆ ಪ್ರಾಮುಖ್ಯತೆ ವಹಿಸಬೇಕು. ನಮ್ಮ ಅಭಿವೃದ್ಧಿಗಳು ಯಾವತ್ತೂ ನಿಸರ್ಗದ ಪರವಾಗಿರಬೇಕು. ನಿಸರ್ಗದೊಂದಿಗೆ ನಾವು ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಕೈಸರ್ ಮೊತೆಶ್ಯಾಂ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ತಾಪಂ ಪ್ರಭಾರೆ ಇಒ ರಾಜೇಶ ಮಹಾಲೆ, ಪಶು ವೈದ್ಯಾಧಿಕಾರಿ ಡಾ. ಶಿವಕುಮಾರ ಮುಂತಾದವರಿದ್ದರು.ತಹಸೀಲ್ದಾರ ನಾಗರಾಜ ನಾಯ್ಕಡ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಬಿಇಒ ವೆಂಕಟೇಶ ನಾಯಕ ವಂದಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪೊಲೀಸರು ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅಧಿಕಾರಿಗಳು, ಸಾರ್ವಜನಿಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.