ಸಮಾಜದಲ್ಲಿ ಅನ್ಯರಿಗೆ ತೊಂದರೆ ನೀಡದೇ ಬದುಕಬೇಕು

| Published : Dec 23 2024, 01:00 AM IST

ಸಾರಾಂಶ

ಮನುಷ್ಯರಿಗೆ ಎಲ್ಲ ಜ್ಞಾನ, ತಿಳಿವಳಿಕೆ, ಬುದ್ಧಿವಂತಿಕೆಗಳಿವೆ. ನಾಗರೀಕ ಸಮಾಜದಲ್ಲಿ ಈ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು, ಇನ್ನೊಬ್ಬರಿಗೆ ತೊಂದರೆ ಕೊಡದೇ ಜೀವಿಸಬೇಕು. ಆಗಲೇ ಉತ್ತಮ ಸತ್ಪ್ರಜೆಯಾಗಿರಲು ಸಾಧ್ಯವಾಗುವುದು ಎಂದು ಡಾ.ಗುರುಬಸವ ಮಹಾಸ್ವಾಮೀಜಿ ಚನ್ನಗಿರಿ ನುಡಿದಿದ್ದಾರೆ.

- ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಡಾ.ಗುರುಬಸವ ಶ್ರೀ ಆಶೀರ್ವಚನ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಮನುಷ್ಯರಿಗೆ ಎಲ್ಲ ಜ್ಞಾನ, ತಿಳಿವಳಿಕೆ, ಬುದ್ಧಿವಂತಿಕೆಗಳಿವೆ. ನಾಗರೀಕ ಸಮಾಜದಲ್ಲಿ ಈ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು, ಇನ್ನೊಬ್ಬರಿಗೆ ತೊಂದರೆ ಕೊಡದೇ ಜೀವಿಸಬೇಕು. ಆಗಲೇ ಉತ್ತಮ ಸತ್ಪ್ರಜೆಯಾಗಿರಲು ಸಾಧ್ಯವಾಗುವುದು ಎಂದು ಡಾ.ಗುರುಬಸವ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಶನಿವಾರ ಸಂಜೆ 12ನೇ ಶತಮಾನದ ಶರಣ ಒಕ್ಕಲಿಗ ಮುದ್ದಣ್ಣನವರ ಸ್ಮರಣೋತ್ಸವ ಮತ್ತು 866ನೇ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಎಲ್ಲರಲ್ಲಿ ಒಳ್ಳೆಯ ಗುಣ, ಆಲೋಚನೆಗಳು ಬರಬೇಕಾಗಿದೆ. ಇನ್ನೊಬ್ಬರಿಗೆ ತೊಂದರೆ ನೀಡದಂತೆ ಜೀವನ ಸಾಗಿಸಬೇಕು. ಕೃಷಿಕರಾಗಿದ್ದ ಮುದ್ದಣ್ಣ ತನ್ನ ಕಾಯಕ ಮಾಡುವ ಜೊತೆಗೆ ವಚನಕಾರರಾಗಿದ್ದರು. ಅವರು ಬರೆದ ಸಾಮಾಜಿಕ ಚಿಂತನೆಯ ವಚನಗಳು ಇಂದಿಗೂ ಮಾದರಿಯಾಗಿವೆ ಎಂದರು.

ಅಮ್ಮನಘಟ್ಟ ಗ್ರಾಮದ ಪ್ರಗತಿಪರ ರೈತ ಎ.ಎಸ್. ಮಹೇಶಣ್ಣ ಮಾತನಾಡಿ, ಇಂದಿನ ಪ್ರಸ್ತುತ ದಿನಗಳಲ್ಲಿ ಭೂಮಿಯಿಂದ ಹಿಡಿದು, ಬೆಳೆಗಳವರೆಗೂ ಎಲ್ಲವೂ ಕಲುಷಿತಗೊಂಡಿದೆ. ಈ ಸಂದರ್ಭದಲ್ಲಿ ರೈತರು ನೈಸರ್ಗಿಕ ಆಹಾರ ಮತ್ತು ಸಾವಯವ ಗೊಬ್ಬರಗಳನ್ನು ಬಳಸಿ, ಪುಷ್ಠಿದಾಯಕವಾದ ಬೆಳೆಗಳ ಬೆಳೆದು, ನಾಡಿಗೆ ನೀಡುವಂಥ ಸಾವಯವ ಕೃಷಿಗೆ ಮುಂದಾಗಬೇಕಿದೆ ಎಂದರು.

ದಾವಣಗೆರೆಯ ಎಸ್.ಎನ್.ಆರ್. ಎಲೆಕ್ಟ್ರಿಕಲ್ಸ್‌ ಮಾಲೀಕ ರುದ್ರೇಶ್ ಮಾತನಾಡಿ, ರೈತರು ವಿದ್ಯುತ್ ಶಕ್ತಿ ಮತ್ತು ನೀರನ್ನು ಮಿತವಾಗಿ ಬಳಸಿಕೊಂಡು, ಕೃಷಿ ಮಾಡುವ ಪದ್ಧತಿ ಅನುಸರಿಸಬೇಕು. ಆಗ ಅಂತರ್ಜಲ ಕ್ಷೀಣಿಸುವುದನ್ನು ತಪ್ಪಿಸಬಹುದು. ವಿದ್ಯುತ್ ಅಪಘಾತಗಳಿಂದ ಎಚ್ಚರವಾಗಿರಬೇಕು ಎಂದರು.

ಅರಸೀಕೆರೆಯ ಎತ್ತಿನಹೊಳೆ ಯೋಜನೆಯ ಸಹಾಯಕ ಅಭಿಯಂತರ ಕೆ.ಎಂ. ಇಂದುಕುಮಾರ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಹರಿಹರದ ಅಂತರ ರಾಷ್ಟ್ರೀಯ ಯೋಗಪಟು ಕೆ.ವೈ. ಸೃಷ್ಠಿ ಯೋಗಕಲೆ ಪ್ರದರ್ಶಿಸಿದರು.

ಮುಖ್ಯ ಅತಿಥಿಗಳಾಗಿ ಡಾ.ಇಂಚರ, ಎಚ್.ಕೆ. ದೇವರಾಜ್, ಜಗದೀಶ್, ಎಬೂರಪ್ಪ, ಎಂ.ಬಿ. ನಾಗರಾಜ್ ಉಪಸ್ಥಿತರಿದ್ದರು.

- - - -22ಕೆಸಿಎನ್‌ಜಿ2.ಜೆಪಿಜಿ:

ಅರಸೀಕೆರೆಯ ಎತ್ತಿನಹೊಳೆ ಯೋಜನೆಯ ಸಹಾಯಕ ಅಭಿಯಂತರ ಕೆ.ಎಂ. ಇಂದುಕುಮಾರ್ ಪಾಟೀಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.