ಉಡುಪಿ: ಮಕ್ಕಳು ಉತ್ತಮ ಶಿಕ್ಷಣ ಪಡೆದು ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಾವು ಹುಟ್ಟಿದ ಊರು ಮತ್ತು ಹೆತ್ತವರನ್ನು ಎಂದಿಗೂ ಮರೆಯಬಾರದು ಎಂದು ಉಡುಪಿ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಹೇಳಿದರು.ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ಜಾನ್ ಡಿಸಿಲ್ವಾ ಫೌಂಡೇಶನ್ ಮುಂಬೈ ಇವರ ಜಂಟಿ ಆಶ್ರಯದಲ್ಲಿ ಆಯೋಜಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹುಟ್ಟಿದ ಊರು ನಮ್ಮ ಅಸ್ತಿತ್ವದ ಬೇರು. ಬೆಳೆದ ಮೇಲೆ ಆ ಊರಿನ ಪ್ರಗತಿಗೆ ಕೈಲಾದಷ್ಟು ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ. ಯಶಸ್ಸಿನ ಜೊತೆಗೆ ಮಾನವೀಯ ಮೌಲ್ಯಗಳು ಮತ್ತು ಕೃತಜ್ಞತಾ ಭಾವನೆ ಇದ್ದಾಗ ಮಾತ್ರ ಆ ಶಿಕ್ಷಣಕ್ಕೆ ನಿಜವಾದ ಸಾರ್ಥಕತೆ ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಜಸಿಂತಾ ಡಿಸೋಜ, ಫೌಂಡೇಶನ್ ಮುಖ್ಯಸ್ಥ ಜೋನ್ ಡಿಸಿಲ್ವಾ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐವರು, ಪಿಎಚ್ ಡಿ ಪದವಿ ಪಡೆದ ಏಳು ಮಂದಿ ಹಾಗೂ ಧರ್ಮಪ್ರಾಂತ್ಯದ 52 ಚರ್ಚ್‌ಗಳಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಅಧ್ಯಕ್ಷತೆ ವಹಿಸಿದ್ದರು. ಫೌಂಡೇಶನ್‌ನ ಗ್ಲಾಡಿಸ್ ಡಿಸಿಲ್ವಾ, ಕ್ಯಾಥೋಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಉರ್ಬಾನ್ ಲೂವಿಸ್, ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ವಲೇರಿಯನ್ ಫರ್ನಾಂಡಿಸ್, ಆಲ್ವಿನ್ ಕ್ವಾಡ್ರಸ್, ಸಂತೋಷ್ ಕರ್ನೆಲಿಯೋ, ಪದಾಧಿಕಾರಿಗಳಾದ ಲೂಯಿಸ್ ಡಿಸೋಜ, ಸೋನು ಸಿಕ್ವೇರಾ, ತಿಯೋದರ್ ಮೆಂಡೊನ್ಸಾ ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಚಾಲಕ ಡಾ. ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯದರ್ಶಿ ಜುಲಿಯೇಟ್ ಡಿಸೋಜ ವಂದಿಸಿದರು. ಅಲನಿ ದಾಂತಿ ನಿರೂಪಿಸಿದರು.