ಜೀವನದಲ್ಲಿ ಯಾವುದೇ ಸಾಧನೆ, ಹುದ್ದೆ ದೊರೆತರೂ ಗುರುಗಳ ಮಾರ್ಗದರ್ಶನ ಹಾಗೂ ನಮ್ಮ ಬಾಲ್ಯದ ಸ್ನೇಹ, ಕುಟುಂಬದವರ ಪ್ರೋತ್ಸಾಹ ಎಂದಿಗೂ ಮರೆಯಬಾರದು ಎಂದು ಅಪರ ಜಿಲ್ಲಾಧಿಕಾರಿ ವಿರೇಶ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಜೀವನದಲ್ಲಿ ಯಾವುದೇ ಸಾಧನೆ, ಹುದ್ದೆ ದೊರೆತರೂ ಗುರುಗಳ ಮಾರ್ಗದರ್ಶನ ಹಾಗೂ ನಮ್ಮ ಬಾಲ್ಯದ ಸ್ನೇಹ, ಕುಟುಂಬದವರ ಪ್ರೋತ್ಸಾಹ ಎಂದಿಗೂ ಮರೆಯಬಾರದು ಎಂದು ಅಪರ ಜಿಲ್ಲಾಧಿಕಾರಿ ವಿರೇಶ ಬಿರಾದಾರ ಹೇಳಿದರು.

ಎಸಿ ಗ್ರೇಡ್‌ನಿಂದ ಅಪರ ಜಿಲ್ಲಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಬಾಲ್ಯ ಸ್ನೇಹಿತರ ಬಳಗದ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಮಾಣಿಕತೆ, ಶಿಸ್ತು ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸುವುದೇ ನನ್ನ ಆಶಯವಾಗಿದೆ ಎಂದು ತಿಳಿಸಿದರು.ಶಿಕ್ಷಕ ಮದನ ಕುಲಕರ್ಣಿ ಮಾತನಾಡಿ, ಶಾಲಾ ಶಿಕ್ಷಣದ ದಿನಗಳಿಂದಲೇ ವಿರೇಶ ಬಿರಾದಾರ ಅವರು ಉತ್ತಮ ಕಲಿಕಾ ಸಾಮರ್ಥ್ಯ ಹೊಂದಿದ್ದರು. ಪಾಠ ಪ್ರವಚನಗಳಲ್ಲಿ ಆಸಕ್ತಿ, ಸೂಕ್ಷ್ಮವಾಗಿ ವಿಷಯಗಳನ್ನು ಗ್ರಹಿಸುವ ಗುಣ ಹಾಗೂ ಚುರುಕುತನ ಅವರಲ್ಲಿತ್ತು. ಅದೇ ರೀತಿ ಬಾಲ್ಯದಲ್ಲಿ ತುಂಟಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಸ್ನೇಹಿತರೊಂದಿಗೆ ಆತ್ಮೀಯವಾಗಿ ಬೆರೆಯುವ ಸ್ವಭಾವ ಹೊಂದಿದ್ದರು ಎಂದು ವಿರೇಶ ಬಿರಾದಾರ ಅವರ ಬಾಲ್ಯದ ದಿನಗಳನ್ನು ಸ್ಮರಿಸಿದರು.ಬಾಲ್ಯದ ಸ್ನೇಹ, ಶಾಲಾ ದಿನಗಳ ನೆನಪುಗಳು ಹಾಗೂ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿಯಾದ ಈ ಸನ್ಮಾನ ಸಮಾರಂಭವು ಆತ್ಮೀಯ ವಾತಾವರಣದಲ್ಲಿ ನಡೆಯಿತು. ಸ್ನೇಹಿತನ ಸಾಧನೆಯನ್ನು ತಮ್ಮದೇ ಸಾಧನೆಯೆಂಬಂತೆ ಸಂಭ್ರಮಿಸಿದ ಬಾಲ್ಯ ಸ್ನೇಹಿತರ ಬಳಗದ ಈ ಗೌರವ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.ಈ ವೇಳೆ ಸ್ನೇಹಿತರಾದ ಪಿಂಟು ಸಾಲಿಮನಿ, ಪ್ರಶಾಂತ ರಾಂಪೂರ, ರವಿ ಜಗಲಿ, ಮುರುಗೇಶ ಪಾಟೀಲ, ಮಲ್ಲು ಚೌಧರಿ, ಶಿಕ್ಷಕ ಜಗದೀಶ ಸಜ್ಜನ, ಕೇಶವ ಪತ್ತಾರ, ಸಿದ್ದು ಮಾಮನಿ, ಮಹೇಶ ಹಡಪದ, ಗುರುರಾಜ ಹೊಳಿ, ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಚಾರಿ ಸೇರಿದಂತೆ ಹಲವರು ಇದ್ದರು.ಬಾಲ್ಯದ ಸ್ನೇಹಿತರ ಪ್ರೀತಿ, ಅಭಿಮಾನ ಹಾಗೂ ಗೌರವ ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ ಸ್ನೇಹಿತರೆಲ್ಲರೂ ಒಂದೆಡೆ ಸೇರಿ ನೀಡಿದ ಈ ಗೌರವ ಅತ್ಯಂತ ಸಂತಸ ತಂದಿದೆ.

-ವಿರೇಶ ಬಿರಾದಾರ, ಅಪರ ಜಿಲ್ಲಾಧಿಕಾರಿ.ವಿರೇಶ ಬಿರಾದಾರವರು ಬಾಲ್ಯದಿಂದಲೂ ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುವ ಗುಣ ಹೊಂದಿದ್ದರು. ಅವರಲ್ಲಿದ್ದ ಕಲಿಕೆಯ ಆಸಕ್ತಿ, ಶಿಸ್ತು, ಪರಿಶ್ರಮ ಮತ್ತು ಸಾಧಿಸುವ ಛಲ ಇಂದು ಅವರನ್ನು ಉನ್ನತ ಆಡಳಿತಾತ್ಮಕ ಹುದ್ದೆಗೆ ತಂದು ನಿಲ್ಲಿಸಿದೆ. ಬಾಲ್ಯದ ಸ್ನೇಹಿತನೊಬ್ಬ ತನ್ನ ಪರಿಶ್ರಮದಿಂದ ಅಪರ ಜಿಲ್ಲಾಧಿಕಾರಿಗಳಂತಹ ಮಹತ್ವದ ಜವಾಬ್ದಾರಿ ಹೊಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಅವರ ಈ ಸಾಧನೆ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಲಿ.

-ಮದನ ಕುಲಕರ್ಣಿ,

ಶಿಕ್ಷಕರು.