ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬಂದಾಗ ಮನುಷ್ಯ ಎದೆಗುಂದುವ ಸಾಧ್ಯತೆಯೇ ಹೆಚ್ಚಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್‌ನ ರಾಯಭಾರಿ ಆರ್.ಟಿ.ಅರುಣಕುಮಾರ ನೇತೃತ್ವದ ಆಪ್ತ ಸಮಾಲೋಚನಾ ಕೇಂದ್ರವು ರೋಗಪೀಡಿತರಲ್ಲಿ ಹೊಸ ಭರವಸೆ ಮೂಡಿಸಲಿದೆ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾ ಪ್ರಕಾಶ ತಿಳಿಸಿದ್ದಾರೆ.

- ಸುಕ್ಷೇಮ ಆಸ್ಪತ್ರೆಯಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಕೌನ್ಸಿಲಿಂಗ್ ಸೆಂಟರ್‌ಗೆ ಚಾಲನೆ ನೀಡಿ ಪದ್ಮಾ ಪ್ರಕಾಶ ಸಲಹೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬಂದಾಗ ಮನುಷ್ಯ ಎದೆಗುಂದುವ ಸಾಧ್ಯತೆಯೇ ಹೆಚ್ಚಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್‌ನ ರಾಯಭಾರಿ ಆರ್.ಟಿ.ಅರುಣಕುಮಾರ ನೇತೃತ್ವದ ಆಪ್ತ ಸಮಾಲೋಚನಾ ಕೇಂದ್ರವು ರೋಗಪೀಡಿತರಲ್ಲಿ ಹೊಸ ಭರವಸೆ ಮೂಡಿಸಲಿದೆ ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾ ಪ್ರಕಾಶ ತಿಳಿಸಿದರು.

ನಗರದ ಸುಕ್ಷೇಮ ಆಸ್ಪತ್ರೆಯಲ್ಲಿ ಮಂಗಳವಾರ ನೂತನ ಆಪ್ತ ಸಮಾಲೋಚನಾ ಕೇಂದ್ರ (ಕೌನ್ಸಿಲಿಂಗ್ ಸೆಂಟರ್)ವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬಂದಾಗ ಯಾರೇ ಆಗಲಿ, ಎದೆಗುಂದಬಾರದು. ಆಪ್ತ ಸಮಾಲೋಚಕರೊಂದಿಗೆ ಚರ್ಚಿಸಿ, ತಮ್ಮ ಜೀವನಶೈಲಿ, ಜೀವನ ಪದ್ಧತಿ, ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು.

ಸುಕ್ಷೇಮ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪನೆಯಾದ ಆಪ್ತ ಸಮಾಲೋಚನಾ ಕೇಂದ್ರವು ಕ್ಯಾನ್ಸರ್‌ಪೀಡಿತ ರೋಗಿಗಳ ಪಾಲಿಗೆ ಹೊಸ ಆಶಾಕಿರಣ‍ವಾಗಿ ಹೊರಹೊಮ್ಮುವ ವಿಶ್ವಾಸವಿದೆ. ಕ್ಯಾನ್ಸರ್ ರೋಗಿಗಳಲ್ಲಿ ಧೈರ್ಯ ತುಂಬುವ ವಿನೂತನ ಪ್ರಯತ್ನಕ್ಕೆ ಸ್ವತಃ ಕ್ಯಾನ್ಸರ್‌ ರೋಗವನ್ನು ಗೆದ್ದಂತಹ ದಾವಣಗೆರೆಯ ಬಹುಮುಖ ಪ್ರತಿಭೆಯಾದ ಆರ್.ಟಿ. ಅರುಣಕುಮಾರ ಮುಂದಾಗಿರುವುದು ಪ್ರೇರಣಾದಾಯಕ ಸಂಗತಿ ಎಂದು ಶ್ಲಾಘಿಸಿದರು.

ಗಂಭೀರ ಕಾಯಿಲೆ ಇದೆ ಎಂಬುದಾಗಿ ಗೊತ್ತಾದಾಗ ಸಹಜವಾಗಿಯೇ ಮನುಷ್ಯರು ಆತ್ಮವಿಶ್ವಾಸ ಕಳೆದುಕೊಂಡು, ಮಾನಸಿಕವಾಗಿ ಕುಸಿದುಬಿಡುತ್ತಾರೆ. ಆದರೆ, ಆಪ್ತ ಸಮಾಲೋಚನಾ ಕೇಂದ್ರದಲ್ಲಿ ಆಪ್ತ ಸಮಾಲೋಚಕರೊಂದಿಗೆ ಚರ್ಚಿಸುವ ಮೂಲಕ ಕ್ಯಾನ್ಸರ್‌ ನಿಯಂತ್ರಿಸುವ, ಚಿಕಿತ್ಸೆ ಪಡೆಯುವ, ಜೀವನ ಪದ್ಧತಿಯಲ್ಲಿ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬೇಕೆಂಬ ಬಗ್ಗೆ ಅರಿವು ಹೊಂದುವುದು ಸಹ ಅತ್ಯಗತ್ಯ ಎಂದು ತಿಳಿಸಿದರು.

ಕ್ಯಾನ್ಸರ್‌ನಿಂದ ಬಳಲಿ, ಚೇತರಿಸಿಕೊಂಡ ಆರ್‌.ಟಿ. ಅರುಣಕುಮಾರ ಮಾತನಾಡಿ, ವೈದ್ಯರ ಕಾಳಜಿಯಿಂದ, ಕುಟುಂಬದವರ ಸ್ಪಂದನೆಯಿಂದಾಗಿ ಚೇತರಿಸಿಕೊಂಡ ತಮಗೆ ಇದು ಬೋನಸ್ ಲೈಫ್. ಸಮಾಜಕ್ಕೆ ಶಕ್ತಿ ತುಂಬಲು ಇಂತಹ ಕೇಂದ್ರದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಶೀಘ್ರದಲ್ಲೇ ದುಬೈನ ಗುರುಪ್ರಶಾಂತ ನೇತೃತ್ವದ ಸುಕ್ಷೇಮ ತಂಡ ಹಾಗೂ ಸಂಕಲನಾಕಾರ, ಛಾಯಾಗ್ರಾಹಕ ಕೆ.ಎಂ. ಉಮಾಶಂಕರ ಸಹಕಾರದಲ್ಲಿ ಆರೋಗ್ಯ ಜಾಗೃತಿಯ ಯುಟ್ಯೂಬ್ ಮತ್ತು ಪೋಡ್ ಕಾಸ್ಟ್ ಚಾನಲ್ ಆರಂಭಿಸಲಿದ್ದೇವೆ ಎಂದು ಘೋಷಿಸಿದರು.

ಗಂಭೀರ ಕಾಯಿಲೆಗಳಿಂದ ಬಳಲುವ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಮನೋಸ್ಥೈರ್ಯ ತುಂಬುವ ಕೆಲಸವು ಸುಕ್ಷೇಮ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾದ ಆಪ್ತ ಸಮಾಲೋಚನಾ ಕೇಂದ್ರದಲ್ಲಿ ನಡೆಯಲಿದೆ. ಡಾ. ಶ್ರೀಶೈಲ್ ಬ್ಯಾಡಗಿ, ಡಾ.ಸುನೀಲ್ ಬ್ಯಾಡಗಿ ಇಂತಹ ಜವಾಬ್ದಾರಿ ನನಗೆ ನೀಡಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗೆ ತುತ್ತಾದವರಲ್ಲಿ ಹೊಸ ಆಶಾಕಿರಣವಾಗಿ ಕೇಂದ್ರ ಹೊರ ಹೊಮ್ಮಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವೈದ್ಯರಾದ ಡಾ.ಶ್ರೀಶೈಲ ಬ್ಯಾಡಗಿ, ಡಾ.ಸುನೀಲ ಬ್ಯಾಡಗಿ, ಆಸ್ಪತ್ರೆ ನಿರ್ದೇಶಕಿ ಸುಮತಿ ಶ್ರೀಶೈಲ ಬ್ಯಾಡಗಿ, ಪ್ರಿಯಾ ಸುನಿಲ್ ಬ್ಯಾಡಗಿ, ಆಡಳಿತಾಧಿಕಾರಿ ಕಾವ್ಯ ಪಾಟೀಲ, ನಿವೃತ್ತ ವೈದ್ಯಾಧಿಕಾರಿ ಡಾ. ಜಿ.ಡಿ.ರಾಘವನ್‌, ಪಾಲಿಕೆ ವಿಪಕ್ಷದ ಮಾಜಿ ಸದಸ್ಯ ಕೆ.ಪ್ರಸನ್ನಕುಮಾರ, ನಿರಂಜನ್‌, ಸಿವಿಲ್ ಎಂಜಿನಿಯರ್‌ ಮಂಜುನಾಥ ಸ್ವಾಮಿ ಇತರರು ಇದ್ದರು.

- - -

(ಬಾಕ್ಸ್‌)

* ಅರುಣಕುಮಾರ ಜೀವನೋತ್ಸವ ಸ್ಫೂರ್ತಿಯಾಗಲಿ

​ಹಿರಿಯ ಎಂಜಿನಿಯರ್ ಆರ್.ಎಸ್. ವಿಜಯಾನಂದ ಮಾತನಾಡಿ, ನಾಲ್ಕು ಸಲ ಸಾವಿನ ದವಡೆಯಿಂದ ಪಾರಾಗಿ ಬಂದ ಆರ್.ಟಿ.ಅರುಣಕುಮಾರ ಜೀವನೋತ್ಸವ ಗಂಭೀರ ಕಾಯಿಲೆಗೆ ತುತ್ತಾದವರಿಗೆ ಸ್ಫೂರ್ತಿಯಾಗಿದ್ದಾರೆ. ಕ್ಯಾನ್ಸರ್‌ ರೋಗಿಗಳಿಗೆ ಧೈರ್ಯ ತುಂಬುವ ವಿನೂತನ ಪ್ರಯತ್ನವನ್ನು ಸುಕ್ಷೇಮ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನಾ ಕೇಂದ್ರದ ಮೂಲಕ ಆರ್.ಟಿ.ಅರುಣಕುಮಾರ ಮಾಡಲು ಹೊರಟಿದ್ದು, ಆರ್‌ಟಿ ಕಾಳಜಿ, ಸದುದ್ದೇಶಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ತಿಳಿಸಿದರು.

- - -

-22ಕೆಡಿವಿಜಿ1:

ದಾವಣಗೆರೆ ಸುಕ್ಷೇಮ ಆಸ್ಪತ್ರೆಯಲ್ಲಿ ಮಂಗಳವಾರ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆ ಪೀಡಿತರಿಗಾಗಿ ಸ್ಥಾಪಿತ ನೂತನ ಆಪ್ತ ಸಮಾಲೋಚನಾ ಕೇಂದ್ರವನ್ನು ಪದ್ಮಾ ಪ್ರಕಾಶ, ಆರ್‌.ಟಿ.ಅರುಣಕುಮಾರ ಇತರರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.