ವೈದ್ಯ, ಎಂಜಿನಿಯರ್ ಅಷ್ಟೇ ಅಲ್ಲ, ಕಲಾವಿದರೂ ಆಗಬೇಕು: ಎಂ.ಸಿ.ರಮೇಶ

| Published : Mar 02 2025, 01:18 AM IST

ಸಾರಾಂಶ

ವೈದ್ಯ, ಎಂಜಿನಿಯರ್‌ ಆಗುವ ಕನಸ್ಸನ್ನು ಮಾತ್ರವೇ ಕಟ್ಟಿಕೊಳ್ಳದೇ, ಪ್ರಸಿದ್ಧ ಕಲಾವಿದರಾಗುವತ್ತಲೂ ವಿದ್ಯಾರ್ಥಿ, ಯುವಜನರು ಗಮನಹರಿಸಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ ಹೇಳಿದರು.

ವಜ್ರ ಮಹೋತ್ಸವ । ಎಂ.ಸಿ.ರಮೇಶ ಅಭಿಪ್ರಾಯ । ಕಲೆಯಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸಿ, ಕಲಾ ಕಾಲೇಜಿಗೂ ದಾಖಲಿಸಲು ಸಲಹೆ । ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ

ಕನ್ನಡಪ್ರಭ ವಾರ್ತೆ ದಾವಣಗೆರೆ

ವೈದ್ಯ, ಎಂಜಿನಿಯರ್‌ ಆಗುವ ಕನಸ್ಸನ್ನು ಮಾತ್ರವೇ ಕಟ್ಟಿಕೊಳ್ಳದೇ, ಪ್ರಸಿದ್ಧ ಕಲಾವಿದರಾಗುವತ್ತಲೂ ವಿದ್ಯಾರ್ಥಿ, ಯುವಜನರು ಗಮನಹರಿಸಬೇಕು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಯುನಿವರ್ಸಿಟಿ ಕಾಲೇಜ್ ಆಫ್ ವಿಜ್ಯುವಲ್ ಆರ್ಟ್ಸ್‌ ಅಲುಮ್ನಿ ಅಸೋಸಿಯೇಷನ್‌ ಕಾಲೇಜಿನ ವಜ್ರ ಮಹೋತ್ಸವ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಚಿಗುರು ಚಿತ್ತಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ವೈದ್ಯ, ಎಂಜಿನಿಯರ್‌ ಆಗಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ಕಲಾವಿದರಾಗುವುದಕ್ಕೂ ಸಾಧ್ಯವಿಲ್ಲ. ಕಲಾವಿದ ಆಗುವುದೆಂದರೆ ಅದೊಂದು ಅದ್ಭುತ ಅವಕಾಶ. ಚಿಕ್ಕ ವಯಸ್ಸಿನಲ್ಲಿ ಚಂದವಾಗಿ ಚಿತ್ರ ಬರೆದಿರುವ ಇಲ್ಲಿರುವ ಅನೇಕ ಬಾಲಪ್ರತಿಭೆಗಳು ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಬಹುದು. ಹಾಗಾಗಿ, ಮಕ್ಕಳ ಆಸಕ್ತಿ ಜೊತೆಗೆ ತಂದೆ, ತಾಯಿಯ ಪೋತ್ಸಾಹವೂ ಅತಿ ಮುಖ್ಯ ಎಂದು ತಿಳಿಸಿದರು.

ಮಕ್ಕಳ ಪ್ರತಿಭೆ ಗುರುತಿಸಿ, ಕಲಾ ಕಾಲೇಜಿಗೆ ಸೇರಿಸುವುದೂ ಪೋಷಕರ ಜವಾಬ್ದಾರಿಯಾಗಿದೆ. ಈಚಿನ ದಿನಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಹೊಂದಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೆಲ್ಲಾ ಕಲಾ ಕಾಲೇಜಿಗೆ 250-350 ವಿದ್ಯಾರ್ಥಿಗಳು ಬರುತ್ತಿದ್ದರು. ಈಗ ಅದರ ಸಂಖ್ಯೆ ಕೇವಲ 150ಕ್ಕೆ ಇಳಿದಿದೆ. ವಿದ್ಯಾರ್ಥಿ, ಯುವಜನರಲ್ಲೂ ಕಲಾಸಕ್ತಿ ಕಡಿಮೆಯಾಗುತ್ತಿದೆ. ಇದಕ್ಕೆ ಪೋಷಕರ ಪ್ರೋತ್ಸಾಹ ಕೊರತೆಯೂ ಕಾರಣ ಎಂದು ಹೇಳಿದರು.

ಕಲಾ ಕಾಲೇಜಿನಲ್ಲಿ ಎಲ್ಲ ಸೌಲಭ್ಯಗಳೂ ಇವೆ. 12ನೇ ತರಗತಿ ನಂತರ 4 ವರ್ಷಗಳ ಕೋರ್ಸ್ ಮುಗಿಸಿದರೆ ಒಳ್ಳೆಯ ಭವಿಷ್ಯವೂ ಇದೆ. ಕಲಾ ಕಾಲೇಜಿನಲ್ಲಿ ಓದಿ, ದೇಶ, ವಿದೇಶಗಳಲ್ಲಿ ಹೆಸರು ಮಾಡಿ, ಉತ್ತಮ ಸ್ಥಾನಮಾನ, ಗೌರವಗಳನ್ನು ಗಳಿಸಿರುವ ಅನೇಕ ಸಾಧಕರು ಇದೇ ಕಾಲೇಜಿನಿಂದ ಹೊರಬಂದವರು. ವೈದ್ಯರು, ಎಂಜಿನಿಯರ್‌ಗಳಿಗೆ ಇರುವಂತೆ ಕಲಾವಿದರಿಗೂ ಉತ್ತಮ ಅವಕಾಶಗಳು ಇದ್ದೇ ಇವೆ ಎಂದು ರಮೇಶ ವಿವರಿಸಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯರಾದ ಎಸ್.ಗೀತಾ ಮಾತನಾಡಿ, ಆಲೋಚನೆಗಳನ್ನು ಹಿಡಿದಿಡಲು ಚಿತ್ರಕಲೆಯು ಅತ್ಯಂತ ಸಹಕಾರಿಯಾಗಿದೆ. ಭಾವನೆ, ಕಲ್ಪನೆಗಳ ಮೂರ್ತರೂಪವೇ ಚಿತ್ರಕಲೆಯಾಗಿದೆ. ಮೊಬೈಲ್‌, ಟೀವಿ, ಸೋಷಿಯಲ್ ಮೀಡಿಯಾದಲ್ಲಿ ಸಮಯ ವ್ಯರ್ಥ ಮಾಡದೇ, ಸಕಾರಾತ್ಮಕವಾಗಿ ಸಮಯ ಬಳಸಿಕೊಳ್ಳಲು ಚಿತ್ರಕಲೆ ಉತ್ತಮ ಮಾರ್ಗವಾಗಿದೆ. ಇದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಡಾ.ಜೈರಾಜ ಚಿಕ್ಕಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ.ಸತೀಶಕುಮಾರ ಪಿ. ವಲ್ಲೇಪುರೆ, ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ.ಕುಮಾರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪಾಲಕರು ಇದ್ದರು.

ಚಿತ್ರ ಕಲಾವಿದ ಶ್ರೀನಾಥ ಬಿದರೆ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಕಾಲೇಜಿನ ವಜ್ರ ಮಹೋತ್ಸವದ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳ ಸಂಘದಿಂದ ನಾನಾ ಶಾಲೆಗಳಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.