ಕಸಾಪ ರಾಜ್ಯಾಧ್ಯಕ್ಷರಿಂದ ಏಕಪಕ್ಷೀಯ ವರ್ತನೆ: ಆರೋಪ

| Published : Nov 05 2024, 12:50 AM IST

ಕಸಾಪ ರಾಜ್ಯಾಧ್ಯಕ್ಷರಿಂದ ಏಕಪಕ್ಷೀಯ ವರ್ತನೆ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲಾಧ್ಯಕ್ಷರು ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರು ಯಾರೆಂಬುದೇ ಜನರಿಗೆ ಈವರೆಗೂ ಗೊತ್ತಿಲ್ಲ. ಜಿಲ್ಲಾಧ್ಯಕ್ಷರಾಗಿದ್ದ ಸಿ. ರವಿಕುಮಾರ ಸಾವಿಗೀಡಾಗಿ ಒಂದು ವರ್ಷ ಸನ್ನಿಹಿತವಾಗುತ್ತಿದ್ದರೂ ಕಸಾಪ ಜಿಲ್ಲಾಧ್ಯಕ್ಷರ ಒಪ್ಪಿಗೆ ಪಡೆದು ಪ್ರಾಮಾಣಿಕ ಕೆಲಸ ಮಾಡುವವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ. ವೀರಪ್ಪ ಮತ್ತಿತರರು ಟೀಕಿಸಿದ್ದಾರೆ.

ಮಂಡ್ಯ ಜಿಲ್ಲಾಧ್ಯಕ್ಷರು ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರು ಯಾರೆಂಬುದೇ ಜನರಿಗೆ ಈವರೆಗೂ ಗೊತ್ತಿಲ್ಲ. ಜಿಲ್ಲಾಧ್ಯಕ್ಷರಾಗಿದ್ದ ಸಿ. ರವಿಕುಮಾರ ಸಾವಿಗೀಡಾಗಿ ಒಂದು ವರ್ಷ ಸನ್ನಿಹಿತವಾಗುತ್ತಿದ್ದರೂ ಕಸಾಪ ಜಿಲ್ಲಾಧ್ಯಕ್ಷರ ಒಪ್ಪಿಗೆ ಪಡೆದು ಪ್ರಾಮಾಣಿಕ ಕೆಲಸ ಮಾಡುವವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿಲ್ಲವೆಂದು ದೂರಿದ್ದಾರೆ.

ಜಿಲ್ಲಾಧ್ಯಕ್ಷರ ತೀವ್ರ ವಿರೋಧದ ನಡುವೆ ಕಸಾಪ ಬೈಲಾವನ್ನೇ ತಿದ್ದುಪಡಿ ಮಾಡಿ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಅನುಕೂಲವಾಗುವಂತೆ ಜಿಲ್ಲಾಧ್ಯಕ್ಷರ ಕೆಲಸ ಕಾರ್ಯಗಳನ್ನು ಅವರ ಇಲ್ಲದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರೇ ನಿರ್ವಹಿಸುವುದು ಎಂದು ಬದಲಾವಣೆ ಮಾಡಿಕೊಂಡಿರುತ್ತಾರೆಂದು ತಿಳಿದು ಬಂದಿರುವುದಾಗಿ ಆರೋಪಿಸಿದ್ದಾರೆ.

ಹಾಗೆಯೇ ಚುನಾವಣಾ ನೀತಿ ಸಂಹಿತೆ ಕಸಾಪ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸದಿದ್ದರೂ ವಿನಾಕಾರಣ ದಿನಾಂಕಗಳನ್ನು ತಮಗಿಷ್ಟ ಬಂದಂತೆ ಬದಲಿಸುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮ್ಮೇಳನಾಧ್ಯಕ್ಷರ ಆಯ್ಕೆಯಾಗದೆ ಅವರ ಭಾವಚಿತ್ರವಿಲ್ಲದೆ ಮೇಲಿನ ಪ್ರಚಾರ ಕಾರ್ಯ ಅರ್ಥಹೀನ ಹಾಗೂ ಸಾರ್ವಜನಿಕ ತೆರಿಗೆ ಹಣದ ದುರುಪಯೋಗ ಎಂದು ಟೀಕಿಸಿದ್ದಾರೆ.

ಕನ್ನಡ ನಾಡಿನ ಮಹನೀಯರು ಕಟ್ಟಿ ಬೆಳೆಸಿದ ಮಹೋನ್ನತವಾದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸ್ವಾಯತ್ತತೆ, ಮೌಲ್ಯಗಳನ್ನು ಕಳೆದುಕೊಳ್ಳದೆ ಜಿಲ್ಲಾಧ್ಯಕ್ಷರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕದೆ ಎಲ್ಲಾ ಜಿಲ್ಲಾಧ್ಯಕ್ಷರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಷಯ ಹಾಗೂ ಸೌಹಾರ್ದ ನಡವಳಿಕೆಗಳಿಂದ ಕಸಾಪ ರಾಜ್ಯಾಧ್ಯಕ್ಷರು ಸಮ್ಮೇಳನವನ್ನು ಮುನ್ನಡೆಸಬೇಕು ಎಂದು ರೈತ ಮುಖಂಡ ಕೆ. ಬೊರಯ್ಯ, ಪ್ರಾಂಶುಪಾಲ ಕೆ..ಜೆ. ಜಯದೇವಗಾಂಧಿ, ವಕೀಲ, ಕೆ. ಶಿವಲಿಂಗಯ್ಯ, ಚಿತ್ರಕಲಾವಿದ ಎಂ.ಎಲ್. ಸೋಮನಾಥ್, ರಂಗಭೂಮಿ ನಟ ಶಶಿ ಅಪೂರ್ವ, ಶ್ರೀಧರ್ ಪ್ರಸಾದ್ ಮನವಿ ಮಾಡಿದ್ದಾರೆ.