ಎಸ್.ಜಿ. ತೆಗ್ಗಿನಮನಿ
ನರಗುಂದ: ತಾಲೂಕಿನ ಬಹುತೇಕ ಕಡೆ ಸದ್ಯ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲ. ಆದರೆ ಕೆಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ತಾಲೂಕಿನ ಮೂಗನೂರು ಗ್ರಾಮಕ್ಕೆ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.ತಾಲೂಕಿನ ಬನಹಟ್ಟಿ ಗ್ರಾಪಂ ವ್ಯಾಪ್ತಿಯ ಬನಹಟ್ಟಿ ಮತ್ತು ಮೂಗನೂರು ಗ್ರಾಮಗಳಿಗೆ ನೀರು ಸಂಗ್ರಹ ಮಾಡಲು ಒಂದೇ ಟ್ಯಾಂಕ್ ಇದೆ. ಇದರಿಂದ ಜಲಾಶಯದಿಂದ ಬರುವ ನೀರನ್ನು ಸಂಗ್ರಹಿಸಿಕೊಂಡು ಈ ಎರಡು ಗ್ರಾಮಗಳಿಗೆ ನೀರು ಪೂರೈಕೆ ಮಾಡುವುದು ಗ್ರಾಪಂ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ.
ಮೂಗನೂರು ಗ್ರಾಮಕ್ಕೆ 1 ತಿಂಗಳಲ್ಲಿ 2 ಬಾರಿ ಕುಡಿಯುವ ನೀರು ಪೂರೈಕೆ ಮಾಡುವುದರಿಂದ ಗ್ರಾಮಸ್ಥರ ಸಮಸ್ಯೆ ಹೇಳತೀರದಾಗಿದೆ. ಅದೇ ರೀತಿ ಬನಹಟ್ಟಿ ಗ್ರಾಮಕ್ಕೆ ವಾರಕ್ಕೊಂದು ಬಾರಿ ನಲ್ಲಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ತಾಲೂಕಿನಲ್ಲಿ ಈ ಎರಡು ಗ್ರಾಮಗಳಲ್ಲೇ ನೀರಿನ ಸಮಸ್ಯೆ ಅಧಿಕವಾಗಿದೆ.ಜಲಾಶಯದಿಂದ ನೀರು ಪೂರೈಕೆ: ತಾಲೂಕಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ಜಲಾಶಯದಿಂದ ಪೈಪಲೈನ ಮೂಲಕ ನೀರು ತಂದು ಕಳೆದು ಹಲವು ವರ್ಷಗಳಿಂದ ನೀರು ಪೂರೈಕೆಯನ್ನು ಗ್ರಾಮೀಣ ಭಾಗಗಳಿಗೆ ಮಾಡಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಪೈಪಲೈನ ಸರಿಯಾಗಿ ಆಗದ್ದರಿಂದ ಪ್ರತಿ ಮನೆಗಳಿಗೆ ನೀರು ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಪಾಳು ಬಿದ್ದ ಕೆರೆಗಳು: ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೆರೆಗಳಿದ್ದವು. ಆದರೆ ತಾಲೂಕಿನಲ್ಲಿ ಜೆಜೆಎಂ ಮೂಲಕ ಜಲಾಶಯದಿಂದ ನೀರು ಪೂರೈಕೆ ಪ್ರಾರಂಭವಾದ ನಂತರ ಈ ಎಲ್ಲ ಕೆರೆಗಳು ಪಾಳು ಬಿದ್ದು ಜಾಲಿ ಕಂಟಿಗಳು ಬೆಳೆದು ವಿಷಜಂತುಗಳು ಓಡಾಡುವ ಪ್ರದೇಶವಾಗಿವೆ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಕೆರೆಯಲ್ಲಿನ ಜಾಲಿ ಕಂಟಿಗಳನ್ನು ಸ್ವಚ್ಛ ಮಾಡಿಸಿ ಕೆರೆಗೆ ನೀರು ತುಂಬಿಸಬೇಕೆಂದು ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.ಪ್ರತಿವರ್ಷ ಪೈಪಲೈನಗೆ ಹಾನಿ: ಮಲಪ್ರಭಾ ಜಲಾಶಯದಿಂದ ಪೈಪಲೈನ ಮೂಲಕ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಪೈಪಗಳು ರೈತರ ಜಮೀನುಗಳ ಬದಿ ಹಾಕಲಾಗಿದೆ. ಹಾಗಾಗಿ ಹಲವೆಡೆ ಬೇಸಿಗೆ ವೇಳೆ ರೈತರು ಪೈಪಗಳನ್ನು ಒಡೆದು ಜಮೀನುಗಳಿಗೆ ನೀರು ಹಾಯಿಸಿಕೊಳ್ಳುತ್ತಾರೆ. ಇದರಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಆಗುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆಟ್ಟು ನಿಂತ ಶುದ್ಧ ಘಟಕ: ಸರ್ಕಾರ ಲಕ್ಷಾಂತರ ರು. ಹಣ ಖರ್ಚು ಮಾಡಿ ಪ್ರತಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಿದೆ. ಆದರೆ ಜೆಜೆಎಂ ಯೋಜನೆ ಪ್ರಾರಂಭವಾದ ನಂತರ ಈ ಎಲ್ಲ ಶುದ್ಧ ನೀರಿನ ಘಟಕಗಳು ತುಕ್ಕು ಹಿಡಿದಿವೆ.
ತಾಲೂಕಿನ ಹದಲಿ, ಮುದ್ಗಣಿಕಿ, ಗಂಗಾಪುರ, ಖಾನಾಪುರ, ರಡ್ಡೇರನಾಗನೂರ, ಭೈರನಹಟ್ಟಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ಪ್ರತಿದಿನ ಸರಿಯಾಗಿ ನಲ್ಲಿಗಳಲ್ಲಿ ನೀರು ಬರುವುದಿಲ್ಲ. 6ರಿಂದ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ಕೇಳಿದರೆ ಪೈಪ್ ಒಡೆದಿದೆ ಅಥವಾ ವಿದ್ಯುತ್ ಸಮಸ್ಯೆಯಿಂದ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲವೆಂದು ಗ್ರಾಪಂನವರು ಹೇಳುತ್ತಾರೆಂದು ಹದಲಿ ಗ್ರಾಮಸ್ಥ ಗುರಯ್ಯ ಶಿವಯ್ಯ ಭೂಸನೂರಮಠ ಆರೋಪಿಸಿದರು.ತೊಂದರೆಯಾಗದಂತೆ ಕ್ರಮ: ಸದ್ಯ ನರಗುಂದ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆ ಸರಾಗವಾಗಿ ನಡೆದಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂಜಯಕುಮಾರ ತಿಳಿಸಿದರು.
ನೀರು ಪೂರೈಕೆಯಲ್ಲಿ ತೊಂದರೆ: ಬನಹಟ್ಟಿ- ಮೂಗನೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಒಂದೇ ನೀರು ಸಂಗ್ರಹ ಟ್ಯಾಂಕ್ ಇದೆ. ಅಲ್ಲದೇ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ ಎಂದು ಪ್ರಭಾರಿ ಬನಹಟ್ಟಿಯ ಪಿಡಿಒ ಮಂಜುನಾಥ ಗಣಿ ತಿಳಿಸಿದರು.