ಯಾಣಿಕರ ಸುರಕ್ಷತೆ ಮತ್ತು ಸೌಲಭ್ಯ ಒದಗಿಸಿಕೊಡಬೇಕಿರುವ ಅಧಿಕಾರಿಗಳು ನಿರ್ಲಕ್ಷ್ಯ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಶತಮಾನದ ಕನಸು ಬಹುನಿರೀಕ್ಷೆಗಳ ನಡುವೆ ಉದ್ಘಾಟನೆಗೊಂಡ ಕುಷ್ಟಗಿ ರೈಲು ನಿಲ್ದಾಣಕ್ಕೆ ಮೇ 15ಕ್ಕೆ ವರ್ಷವಾದರೂ ಸಹಿತ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾಣದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಕಾರಣವಾಗಿದೆ.

ಕಳೆದ ವರ್ಷ ಮೇ15ರಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ರೈಲು ನಿಲ್ದಾಣ ಉದ್ಘಾಟಿಸುವ ಮೂಲಕ ಕುಷ್ಟಗಿ-ಹುಬ್ಬಳ್ಳಿಗೆ ರೈಲು ಸಂಚಾರ ಸೇವೆಗೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ರೈಲು ನಿಲ್ದಾಣದ ಅಭಿವೃದ್ಧಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಪ್ರಯಾಣಿಕರಿಗೆ ಕುಡಿವ ನೀರಿನ ಸೌಕರ್ಯವಿಲ್ಲ ರೈಲು ನಿಲ್ದಾಣಕ್ಕೆ ಬರುವಾಗ ಮನೆಯಿಂದ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಯಾಣಿಕರು ದ್ವಿಚಕ್ರ ವಾಹನವನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಸಂದರ್ಭದಲ್ಲಿ ಪೆಟ್ರೋಲ್, ಸಾಮಗ್ರಿ ಕಳ್ಳತನದ ಘಟನೆ ನಡೆಯುತ್ತಿದ್ದು, ಸರಿಯಾದ ಸಿಸಿ ಕ್ಯಾಮೇರಾ ಭದ್ರತಾ ವ್ಯವಸ್ಥೆ ಇಲ್ಲ. ಪ್ರಯಾಣಿಕರ ಸುರಕ್ಷತೆ ಮತ್ತು ಸೌಲಭ್ಯ ಒದಗಿಸಿಕೊಡಬೇಕಿರುವ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.

ಪ್ರಸ್ತುತ ಕುಷ್ಟಗಿ-ಹುಬ್ಬಳ್ಳಿಗೆ ಕೇವಲ ಒಂದೇ ರೈಲು ಸಂಚರಿಸುತ್ತಿದ್ದು, ಉಳಿದ ಸಮಯದಲ್ಲಿ ರೈಲು ನಿಲ್ದಾಣ ಖಾಲಿ ಖಾಲಿ ಕಾಣಿಸುತ್ತಿದ್ದು, ಉದ್ಘಾಟನೆ ಸಮಯದಲ್ಲಿ ಹೆಚ್ಚಿನ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆ ಇತ್ತು ಆದರೆ ವರ್ಷವಾದರೂ ಸಹಿತ ಪ್ರಯಾಣಿಕರಿಗೆ ಹೆಚ್ಚಿನ ರೈಲು ಸೇವೆಯ ಭಾಗ್ಯ ಇಲ್ಲದಂತಾಗಿದೆ.

ಕುಷ್ಟಗಿ ತಾಲೂಕಿನ ಜನರ ಶತಮಾನದ ಕನಸಾಗಿದ್ದ ರೈಲ್ವೆ ಸೌಲಭ್ಯ ಆರಂಭವಾದ ಬಳಿಕ ಅಭಿವೃದ್ಧಿಗೆ ವೇಗ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿತ್ತು, ಆದರೆ ಕೇವಲ ಒಂದೇ ರೈಲು ಸಂಚರಿಸುವ ಪರಿಣಾಮ ರೈಲ್ವೆ ನಿಲ್ದಾಣ ಉಪಯೋಗಕ್ಕೆ ಬರುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಕುಷ್ಟಗಿ ತಾಲೂಕು ಸೇರಿದಂತೆ ಇಲಕಲ್, ಗಜೇಂದ್ರಗಡ, ಹನಮನಾಳ, ಹನುಮಸಾಗರ, ದೋಟಿಹಾಳ, ತಾವರಗೇರಾ, ಕನಕಗಿರಿ ವಿವಿಧ ನಗರ, ಗ್ರಾಮೀಣ ಜನರ ಅನುಕೂಲಕ್ಕಾಗಿ ಕುಷ್ಟಗಿ-ಬೆಂಗಳೂರು ರೈಲು ಸೇವೆ ಜೊತೆಗೆ ಹುಬ್ಬಳ್ಳಿಗೆ ಮತ್ತೊಂದು ಹೆಚ್ಚುವರಿ ರೈಲು ಆರಂಭಿಸುವಂತೆ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ನೇತೃತ್ವದಲ್ಲಿ ಕುಷ್ಟಗಿ ರೈಲ್ವೆ ಹೋರಾಟ ಸಮಿತಿ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣರಿಗೆ ಮನವಿ ಸಲ್ಲಿಸಿದರೂ ಸಹಿತ ಕ್ರಮವಾಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.

ಈ ಭಾಗದಿಂದ ಪ್ರತಿನಿತ್ಯ ಒಂದು ಸಾವಿರಕ್ಕೂ ಅಧಿಕ ಪ್ರಯಾಣಿಕರು ಬಸ್‌, ಬಾಡಿಗೆ ವಾಹನಗಳ ಮೂಲಕ ಬೆಂಗಳೂರು ನಗರಕ್ಕೆ ಪ್ರಯಾಣ ಮಾಡುತ್ತಿರುವದು ಒಂದಡೆಯಾದರೆ ಇಲಕಲ್, ಹುನಗುಂದ, ವಿವಿಧ ಮಾರ್ಗದಿಂದ ಕುಷ್ಟಗಿ ಮೂಲಕ 50ಕ್ಕೂ ಅಧಿಕ ಖಾಸಗಿ ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದು ತಿಂಗಳಿಗೆ 40 ಸಾವಿರಕ್ಕೂ ಅಧಿಕ ಜನರು ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದು ರೈಲು ಸಂಚಾರ ಸೇವೆ ಆರಂಭಿಸಿದಲ್ಲಿ ಇಲಾಖೆಗೆ ಆದಾಯದ ಜತೆಗೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಪುರಸಭೆ ಮಾಜಿ ಸದಸ್ಯ ಜೆ.ಜೆ.ಆಚಾರ್.

ಕುಷ್ಟಗಿ-ಬೆಂಗಳೂರು ಹಾಗೂ ಕುಷ್ಟಗಿ-ಹುಬ್ಬಳ್ಳಿಗೆ ಹೆಚ್ಚಿನ ರೈಲು ಸೇವೆ ಒದಗಿಸುವಂತೆ ರೈಲ್ವೆ ಸಚಿವ ವಿ.ಸೋಮಣ್ಣ ಹಾಗೂ ಸಂಸದರಿಗೆ ಮನವಿ ಸಲ್ಲಿಸಿದ್ದರೂ ಯಾವುದೆ ಕ್ರಮವಾಗಿಲ್ಲ. ಬೆಂಗಳೂರು-ಹುಬ್ಬಳ್ಳಿಗೆ ಗದಗ ಜಂಕ್ಷನ್ ಮೂಲಕ ತೆರಳುವ ಸೂಪರ್ ಫಾಸ್ಟ್ ರೈಲ್ವೆ ಕುಷ್ಟಗಿವರೆಗೂ ವಿಸ್ತರಿಸಬೇಕು ಹಾಗೂ ರೈಲು ನಿಲ್ದಾಣದ ಅಭಿವೃದ್ದಿಗೆ ಮುಂದಾಗಬೇಕಿದೆ ಎಂದು ಕುಷ್ಟಗಿ ರೈಲು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವಿರೇಶ ಬಂಗಾರಶೆಟ್ಟರ ತಿಳಿಸಿದ್ದಾರೆ.