ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾಳಾಗುವ ಭಯ ಒಂದೆಡೆಯಾದರೆ, ದರ ಕುಸಿತದಿಂದ ಹಾಕಿದ ಬಂಡವಾಳ ಕೂಡ ಕೈಗೆ ಬಾರದ ಸ್ಥಿತಿಯನ್ನು ತಾಲೂಕಿನ ಈರುಳ್ಳಿ ಬೆಳೆಗಾರರು ಅನುಭವಿಸುತ್ತಿದ್ದಾರೆ.
ವಿ.ಎಂ. ನಾಗಭೂಷಣ
ಸಂಡೂರು: ಒಂದೆಡೆ ಕುಸಿದ ಈರುಳ್ಳಿ ದರ, ಮತ್ತೊಂದೆಡೆ ಆಲಿಕಲ್ಲು ಮಳೆ ತಾಲೂಕಿನಲ್ಲಿ ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನೀರನ್ನು ತರಿಸುತ್ತಿದೆ. ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾಳಾಗುವ ಭಯ ಒಂದೆಡೆಯಾದರೆ, ದರ ಕುಸಿತದಿಂದ ಹಾಕಿದ ಬಂಡವಾಳ ಕೂಡ ಕೈಗೆ ಬಾರದ ಸ್ಥಿತಿಯನ್ನು ತಾಲೂಕಿನ ಈರುಳ್ಳಿ ಬೆಳೆಗಾರರು ಅನುಭವಿಸುತ್ತಿದ್ದಾರೆ.ಗಣಿನಾಡು ಸಂಡೂರು ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಸಂಡೂರು ರೆಡ್ ಎಂದೇ ಹೆಸರಾದ ಸ್ಥಳೀಯ ತಳಿಯ ಈರುಳ್ಳಿ ಬೆಳೆಯುತ್ತಾರೆ. ತಾಲೂಕಿನ ಸಂಡೂರು, ಲಕ್ಷ್ಮೀಪುರ, ಭುಜಂಗನಗರ, ದೌಲತ್‌ಪುರ, ಕೃಷ್ಣಾನಗರ, ಸುಶೀಲಾನಗರ, ಅಂಕಮನಾಳ್, ತಾರಾನಗರ ಮುಂತಾದ ಗ್ರಾಮಗಳಲ್ಲಿ ಹಿಂಗಾರಿನಲ್ಲಿ ನೀರಾವರಿ ವ್ಯವಸ್ಥೆ ಇರುವೆಡೆ ಈರುಳ್ಳಿ ಬೆಳೆಯಲಾಗುತ್ತದೆ. ನವೆಂಬರ್, ಡಿಸೆಂಬರ್‌ನಲ್ಲಿ ಈರುಳ್ಳಿ ಸಸಿಯನ್ನು ನಾಟಿ ಮಾಡಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಈರುಳ್ಳಿ ಫಸಲನ್ನು ಕಟಾವು ಮಾಡಲಾಗುತ್ತದೆ. ಈ ಭಾಗದಲ್ಲಿ ಬೆಳೆಯುವ ಈರುಳ್ಳಿಯ ಪುಣೆ ಈರುಳ್ಳಿಗಿಂತ ಗಾತ್ರದಲ್ಲಿ ಚಿಕ್ಕದಿರುತ್ತದೆ. ಇಲ್ಲಿ ಬೆಳೆಯುವ ಈರುಳ್ಳಿಯ ಒಳಪದರಗಳು ತೆಳುವಾಗಿರುವುದರಿಂದ ಬೇಗ ಬೇಯುತ್ತವೆ. ಇದೀಗ ತಾಲೂಕಿನ ವಿವಿಧೆಡೆ ಬೆಳೆದಿರುವ ಈರುಳ್ಳಿ ಫಸಲಿನ ಕಟಾವು ಕಾರ್ಯ ನಡೆದಿದೆ. ಕಟಾವು ಮಾಡಿದಂತೆ ಈರುಳ್ಳಿಯನ್ನು ಒಂದೆಡೆ ಸಂಗ್ರಹಿಸಿ, ಗ್ರೇಡಿಂಗ್ ಮಾಡಲಾಗುತ್ತದೆ. ಈ ಕಾರ್ಯ ಹಲವು ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ನೀಡುತ್ತಿದೆ.
ದರ ಕುಸಿತ:ಈರುಳ್ಳಿ ದರ ಕುಸಿತದ ಕುರಿತು ತಮ್ಮ ಅಳಲನ್ನು ತೋಡಿಕೊಂಡ ದೌಲತ್‌ಪುರದ ರೈತರಾದ ಜೆ. ರುದ್ರಪ್ಪ, ವಿ.ಜೆ. ಶ್ರೀಪಾದಸ್ವಾಮಿ, ಪೀರಾಸಾಬ್ ಬಾಗಲಕೋಟೆ, ನಾವು ಒಂದು ಎಕರೆ ಈರುಳ್ಳಿ ಬೆಳೆಯಲು ₹೬೦-೭೦ ಸಾವಿರ ಖರ್ಚು ಬರುತ್ತದೆ. ಎಕರೆಗೆ ೮-೧೨ ಟನ್‌ನಷ್ಟು ಈರುಳ್ಳಿ ಬೆಳೆಯಲಾಗುತ್ತದೆ. ಕೆಜಿ ಈರುಳ್ಳಿಗೆ ಕನಿಷ್ಠ ₹೧೫ ಸಿಕ್ಕರೆ ನಾವು ಒಂದಿಷ್ಟು ಲಾಭ ಕಾಣಬಹುದು. ಆದರೆ ಈ ವರ್ಷ ಈರುಳ್ಳಿ ದರ ಕುಸಿದಿದೆ. ಸಗಟು ಖರೀದಿದಾರರು ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಕೆಜಿಗೆ ₹೬-೭ರಂತೆ ಕೇಳುತ್ತಿದ್ದಾರೆ. ದಿನ ಹಾಗೂ ವಾರದ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ₹೧೫-೨೦ರಂತೆ ಮಾರಾಟವಾಗುತ್ತಿದೆ. ಈ ದರ ರೈತರಿಗೆ ಸಿಗುತ್ತಿಲ್ಲ. ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಬೆಳೆದ ಈರುಳ್ಳಿ ಹಾಳಾಗುವ ಆತಂಕವೂ ಇದೆ. ಈ ವರ್ಷ ಬಾಳೆಯನ್ನು ಕೇಳುವವರಿಲ್ಲದಂತಾಗಿದೆ. ಹೀಗಾಗಿ ಏನು ಬೆಳೆಯಬೇಕೆಂಬುದೇ ತಿಳಿಯುತ್ತಿಲ್ಲ ಎಂದರು. ಈಗಿರುವ ದರಕ್ಕೆ ಮಾರಾಟ ಮಾಡಿದರೆ ಹಾಕಿರುವ ಬಂಡವಾಳವೂ ಕೈಗೆ ಬರುವುದಿಲ್ಲ. ಎಕರೆಗೆ ೨೦-೩೦ ಸಾವಿರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಒಂದೆಡೆ ಹಿಂಗಾರಿನಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಹಾನಿಯಾಗುವ ಆತಂಕ ಹಾಗೂ ಮತ್ತೊಂದೆಡೆ ದರ ಕುಸಿತ ಈರುಳ್ಳಿ ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ.ಈರುಳ್ಳಿ ಬೆಳೆಗಾರರು ತಾವು ಬೆಳೆದ ಈರುಳ್ಳಿ ಬೆಳೆಗೆ ಉತ್ತಮ ಬೆಲೆಯನ್ನು ಪಡೆದು ಲಾಭ ಗಳಿಸಲು ಒಂದೆಡೆ ಪ್ರಕೃತಿ, ಮತ್ತೊಂದೆಡೆ ಮಾರುಕಟ್ಟೆ ವ್ಯವಸ್ಥೆ ಸಹಕರಿಸಬೇಕಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆತು, ಲಾಭ ಗಳಿಸಿದಾಗ ಮಾತ್ರ ಕೃಷಿ ಕಾಯಕಕ್ಕೆ ಉತ್ತೇಜನ ದೊರೆಯಲಿದೆಯಲ್ಲದೆ, ಕೃಷಿ ಕ್ಷೇತ್ರವೂ ಹೆಚ್ಚಲಿದೆ.
ಪ್ರತಿ ಎಕರೆ ಈರುಳ್ಳಿ ಬೆಳೆಯಲು ₹೬೦-೭೦ ಸಾವಿರ ಖರ್ಚಾಗುತ್ತದೆ. ಈಗ ಈರುಳ್ಳಿ ದರ ಕುಸಿದಿದೆ. ಉತ್ತಮ ಗುಣಮಟ್ಟದ ಕ್ವಿಂಟಲ್ ಈರುಳ್ಳಿಯನ್ನು ₹೬೦೦-೭೦೦ರಂತೆ ಖರೀದಿದಾರರು ಕೇಳುತ್ತಿದ್ದಾರೆ. ಈ ದರಕ್ಕೆ ಮಾರಿದರೆ ನಾವು ಹಾಕಿದ ಬಂಡವಾಳವೂ ಕೈಗೆ ಬರುವುದಿಲ್ಲ. ಜಿಲ್ಲಾ ಖನಿಜ ನಿಧಿಯಿಂದ ರೈತರಿಗೆ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನು ತುಂಬಿಕೊಟ್ಟರೆ, ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ದೌಲತ್‌ಪುರ ಈರುಳ್ಳಿ ಬೆಳೆಗಾರ ವಿ.ಜೆ. ಶ್ರೀಪಾದಸ್ವಾಮಿ.ಸಂಡೂರು ತಾಲೂಕಿನಲ್ಲಿ ೧೨೫೦ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಯಾಗಿ ಈರುಳ್ಳಿಯನ್ನು ಬೆಳೆಯಲಾಗಿದೆ ಎನ್ನುತ್ತಾರೆ ಸಂಡೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ.