ಈರುಳ್ಳಿ ದರ ಒಂದೇ ವಾರದಲ್ಲಿ ದುಪ್ಪಟ್ಟು!

| Published : Oct 30 2023, 12:30 AM IST

ಸಾರಾಂಶ

ಮಳೆ ಕೊರತೆಯಿಂದ ಈರುಳ್ಳಿ ಇಳುವರಿಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಮಾರುಕಟ್ಟೆಗೆ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ

ವಸಂತಕುಮಾರ ಕತಗಾಲ

ಕಾರವಾರ:

ಈರುಳ್ಳಿ ಕತ್ತರಿಸಿದರೆ ಕಣ್ಣೀರು ಬರೋದು ಸಹಜ. ಆದರೆ ಈಗ ದರ ಕೇಳಿದರೆ ಕಣ್ಣೀರು ಬರುವಂತಿದೆ. ಹೌದು, ಈರುಳ್ಳಿ ಪ್ರತಿ ಕೆಜಿಗೆ ₹ 80ರಿಂದ ₹ 90 ಆಗಿದೆ. ಈರುಳ್ಳಿ ದರದಲ್ಲಿ ಹಠಾತ್ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ.

ನಗರದಲ್ಲಿ ಭಾನುವಾರ ಸಂತೆ. ಕಡಿಮೆ ಬೆಲೆಯಲ್ಲಿ ತಾಜಾ ಕಾಯಿಪಲ್ಲೆ ಕೊಳ್ಳಲು ಬಂದವರಿಗೆ ಈರುಳ್ಳಿ ದರ ಶಾಕ್ ನೀಡಿದೆ. ಕೆಲವೇ ದಿನಗಳ ಹಿಂದೆ ಪ್ರತಿ ಒಂದು ಕೆಜಿಗೆ ₹ 25ರಿಂದ ₹ 30ಗಳಿಗೆ ಸಿಗುತ್ತಿದ್ದ ಈರುಳ್ಳಿ ಈ ವಾರ ₹ 80ರಿಂದ 90ಕ್ಕೆ ಏರಿಕೆಯಾಗಿದೆ.

ಏರಿಕೆಗೆ ಕಾರಣವೇನು?

ಮಳೆ ಕೊರತೆಯಿಂದ ಈರುಳ್ಳಿ ಇಳುವರಿಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಮಾರುಕಟ್ಟೆಗೆ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಮಹಾರಾಷ್ಟ್ರದ ಪುಣೆ, ಬಳ್ಳಾರಿ ಮತ್ತಿತರ ಕಡೆಯಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣದಲ್ಲೂ ತೀವ್ರ ಕುಸಿತ ಉಂಟಾಗಿದೆ. ಹಾಗಂತ ಬೇಡಿಕೆ ಮಾತ್ರ ಹಿಂದಿನಂತೆಯೇ ಇದೆ. ಇದರಿಂದ ದರದಲ್ಲಿ ಹಠಾತ್ ಹೆಚ್ಚಳ ಉಂಟಾಗಿದೆ. ಮುಂದಿನ ವಾರ ಪ್ರತಿ ಕೆಜಿಗೆ ₹ 110ರಿಂದ ₹ 120 ಏರಿಕೆಯಾಗುವ ಸಾಧ್ಯತೆ ಇದೆ ಎಂದು ಉಳ್ಳಾಗಡ್ಡೆ ವ್ಯಾಪಾರಸ್ಥರು ಅಭಿಪ್ರಾಯಪಡುತ್ತಿದ್ದಾರೆ.

ಅಡುಗೆಯಲ್ಲಿ ಈರುಳ್ಳಿ ಬೇಕೆ ಬೇಕು. ಆದರೆ ಮಾರುಕಟ್ಟೆಗೆ ಬಂದ ಗ್ರಾಹಕರಿಗೆ ಈರುಳ್ಳಿ ಕೈಗೆಟುಕುತ್ತಿಲ್ಲ. 2 ಕೆಜಿ ಕೊಳ್ಳುವವರು 1 ಕೆಜಿ ಕೊಂಡುಕೊಳ್ಳುತ್ತಿದ್ದಾರೆ. ಅದರಲ್ಲೂ ಮುಂದಿನ ವಾರ ದರದಲ್ಲಿ ಮತ್ತೂ ಹೆಚ್ಚಳವಾಗಲಿದೆ ಎನ್ನುವುದು ಇನ್ನಷ್ಟು ಬೇಗುದಿಗೆ ಕಾರಣವಾಗಿದೆ.

ಈಚೆಗೆ ಟೊಮೆಟೋ ದರ ಲಂಗು ಲಗಾಮಿಲ್ಲದೆ ಏರಿಕೆಯಾಗಿತ್ತು. ಅಂತೂ ಇಂತೂ ಟೊಮೆಟೋ ದರ ಮಾಮೂಲಿ ಸ್ಥಿತಿಗೆ ಬಂದಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಾಗಲೆ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ಒಂದಲ್ಲ ಒಂದು ಕಾಯಿಪಲ್ಲೆಯ ದರ ಏರುತ್ತಲೇ ಇದೆ. ಕಾಯಿಪಲ್ಲೆ ಪರಿಣತರ ಪ್ರಕಾರ ಈರುಳ್ಳಿ ದರ ಮುಂದಿನ ದಿನಗಳಲ್ಲಿ ಪ್ರತಿ ಕೆಜಿಗೆ ₹ 150ರಿಂದ ₹ 160ಗೆ ಏರುವ ಸಾಧ್ಯತೆ ಇದೆ. ಉತ್ತರ ಕನ್ನಡಕ್ಕೆ ಬೆಳಗಾವಿ, ಹಾವೇರಿ ಮತ್ತಿತರ ಕಡೆಗಳಿಂದ ಉಳ್ಳಾಗಡ್ಡೆ ಬರಬೇಕು. ಮಳೆ ಕೊರತೆಯಿಂದ ಬೆಳೆ ಇಲ್ಲದೆ ಮಹಾರಾಷ್ಟ್ರದಿಂದ ತರಲಾಗುತ್ತಿತ್ತು. ಆದರೆ ಅಲ್ಲಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಇದರಿಂದ ದರದಲ್ಲಿ ಹೆಚ್ಚಳ ಉಂಟಾಗಿದೆ ಎಂದು ತರಕಾರಿ ಮಾರಾಟಗಾರ ಸಂಗಮೇಶ ಹೇಳಿದರು.ಅಡುಗೆಗೆ ಈರುಳ್ಳಿ ಅಗತ್ಯವಾಗಿ ಬೇಕೆ ಬೇಕು. ಆದರೆ ರೇಟು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾದರೆ ಅಗತ್ಯ ಇರುವಷ್ಟು ಈರುಳ್ಳಿ ಕೊಳ್ಳುವುದು ಕಷ್ಟಕರವಾಗಿದೆ. ಎಂದು ಗ್ರಾಹಕರಾದ ಪ್ರೇಮಾ ಟಿ.ಎಂ.ಆರ್. ತಿಳಿಸಿದರು.