ಸಾರಾಂಶ
ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ
ಈರುಳ್ಳಿ ಬೆಲೆ ಕುಸಿತದಿಂದ ತಾಲೂಕಿನಲ್ಲಿ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಗದಗ ಜಿಲ್ಲೆಯ ಮುಂಡರಗಿ, ರೋಣ, ಗಜೇಂದ್ರಗಡ, ನರಗುಂದ, ಶಿರಹಟ್ಟಿ ಪ್ರದೇಶದ ಸುಮಾರು ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ವಿವಿಧ ತಳಿಯ ಈರುಳ್ಳಿ ಬೆಳೆಯಿದೆ. ಪ್ರತಿ ವರ್ಷ ರಾಜ್ಯದ ಈರುಳ್ಳಿ ಉತ್ಪಾದನೆಯ ಅರ್ಧದಷ್ಟು ಗದಗ ಜಿಲ್ಲೆಯಲ್ಲಿ ಆಗುತ್ತಿದೆ.
ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಗ್ರಾಮಗಳ ವ್ಯಾಪ್ತಿಯಲ್ಲಿ ಹಲವಾರು ರೈತರು ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಲಕ್ಷಾಂತರ ರು. ಸಾಲ ಮಾಡಿದ್ದಾರೆ. ಬ್ಯಾಂಕ್ ಸಾಲ, ಕೈ ಸಾಲ, ಬಡ್ಡಿ ಸಾಲ ಮಾಡಿದವರೂ ಇದ್ದಾರೆ. ಕಳೆ ತೆಗೆಯಲು ಪ್ರತಿ ಒಬ್ಬರಂತೆ ಕೂಲಿ ಆಳಿಗೆ ₹400ರಿಂದ ₹500ರ ವರೆಗೆ ಖರ್ಚು ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸತತ ಮಳೆಗೆ ಈರುಳ್ಳಿ ಭೂಮಿಯಲ್ಲಿಯೇ ಕೊಳೆಯುತ್ತಿದ್ದರೆ ಅಳಿದು ಉಳಿದ ಬೆಳೆಗಾದರೂ ಉತ್ತಮ ಬೆಲೆ ಬರುತ್ತದೆ ಎಂದು ರೈತರು ಕಾದು ಕುಳಿತಿದ್ದರು.ಈಗ ಬೆಲೆ ಬರುತ್ತದೆ, ನಾಳೆ ಬೆಲೆ ಬರುತ್ತದೆ ಎನ್ನುವ ಆಶಾಭಾವನೆ ರೈತರಲ್ಲಿ ಒಂದು ತಿಂಗಳಿಂದಲೂ ಇತ್ತು. ಈರುಳ್ಳಿಗಳನ್ನು ಕಿತ್ತು ಕಟಾವು ಮಾಡಿ ಕಾಯುತ್ತಿದ್ದರು. ಈಗ ಬೆಲೆ ಕುಸಿದಿರುವುದರಿಂದ ಕಂಗಾಲಾಗಿದ್ದಾರೆ.
ಡಂಬಳ ಗ್ರಾಮದ ಸಾವಿರಾರು ರೈತರು ಈರುಳ್ಳಿಯನ್ನು ಜಮೀನಿನಲ್ಲಿ ಕಟಾವು ಮಾಡದೆ ಬಿಟ್ಟಿದ್ದಾರೆ. ಇನ್ನು ಕೆಲವು ರೈತರು ರಾಶಿ ಹಾಕಿದ್ದಾರೆ. ಈಗ ದಿಕ್ಕು ತೋಚದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮನನೊಂದ ಕೆಲವು ರೈತರು ಬೆಳೆದ ಬೆಳೆ ನಾಶಪಡಿಸುತ್ತಿದ್ದಾರೆ.ಹೆಚ್ಚಿನ ಇಳುವರಿ, ಇತರ ರಾಜ್ಯಗಳಿಂದ ಆವಕ, ಮಧ್ಯವರ್ತಿಗಳ ಹಾವಳಿ ಮುಂತಾದ ಕಾರಣಗಳಿಂದ ಈರುಳ್ಳಿ ಬೆಳೆ ಕುಸಿದಿದೆ. ಈರುಳ್ಳಿ ಬೆಲೆಗಾರರು ಮತ್ತಷ್ಟು ಸಾಲಗಾರರಾಗುವ ಭೀತಿ ಎದುರಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನಿಗದಿಪಡಿಸಬೇಕು. ವಿದೇಶಗಳಿಗೆ ಹೆಚ್ಚು ಸಾಗಾಟಕ್ಕೆ ಅವಕಾಶ ಮಾಡಿಕೊಡಬೇಕು. ಈರುಳ್ಳಿ ಶೇಖರಿಸಿಡಲು ಸೂಕ್ತವಾದ ಶೈತ್ಯಾಗಾರ ನಿರ್ಮಿಸಬೇಕು. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದರು.ಈಗಾಗಲೆ ಬ್ಯಾಂಕ್ ಸಾಲ, ಕೈಸಾಲ ಮಾಡಿ, ಎರಡು ಲಕ್ಷ ರು. ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇವೆ. ಕೇಂದ್ರ, ರಾಜ್ಯ ಸರ್ಕಾರಗಳು ಶೀಘ್ರವಾಗಿ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರ ಹಿತ ಕಾಪಾಡುವುದಕ್ಕಾಗಿ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಡಂಬಳ ಗ್ರಾಮದ ರೈತ ಶಿವಪ್ಪ ಕರಿಗಾರ ತಿಳಿಸಿದ್ದಾರೆ.
2700 ಹೆಕ್ಟೇರ್ ಈರುಳ್ಳಿ ಬೆಳೆ ಇದ್ದು, ಬೆಳೆ ವಿಮೆ ಮಾಡಿರುವ, ಮಳೆಯ ಹಾನಿಗೆ ಒಳಗಾದ ಬೆಳೆಗಳಿಗೆ ಎರಡು ಮೂರು ದಿನಗಳಲ್ಲಿ ಮಧ್ಯಂತರ ಶೇ. 15ರಿಂದ 20ರಷ್ಟು ಪರಿಹಾರ ನೀಡಲಾಗುತ್ತದೆ. ಮೆಣಸಿನಕಾಯಿ ಬೆಳೆಗೂ ಕೂಡಾ ನೀಡಲಾಗುತ್ತದೆ. ಆನಂತರ ಬೆಳೆ ವಿಮೆ ಮಾಡದೆ ಇರುವವರಿಗೆ ಸರ್ಕಾರದಿಂದ ಪರಿಹಾರ ನೇರವಾಗಿ ರೈತರ ಖಾತೆಗೆ ನೀಡಲಾಗುವುದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಎಂ. ತಾಂಬೋಟಿ ತಿಳಿಸಿದ್ದಾರೆ.ಮಹಾರಾಷ್ಟ್ರ ರಾಜ್ಯದಿಂದ ಹಳೆಯ ಈರುಳ್ಳಿ ಹೆಚ್ಚು ಬರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಉತ್ತವಾಗಿರುವ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತದೆ. ಹೆಚ್ಚಿನ ರಫ್ತಿಗೆ ಅವಕಾಶ ಮಾಡಿಕೊಟ್ಟರೆ ರೈತರಿಗೆ ಉತ್ತಮ ಬೆಲೆ ಬರುತ್ತದೆ. ವರ್ತಕರು ಅಮರೇಶ್ವರ ಟ್ರೇಡಿಂಗ್ ಕಂಪನಿ, ಬೆಂಗಳೂರು ಸಿದ್ದಣ್ಣ ಬಳಗೇರ ತಿಳಿಸಿದ್ದಾರೆ.