ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೆ

| Published : Oct 31 2023, 01:16 AM IST

ಸಾರಾಂಶ

ಕಳೆದ ಕೆಲವು ದಿನಗಳ ಹಿಂದೆ ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಈಗ ಈರುಳ್ಳಿಯ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದೇ ವಾರದಲ್ಲಿ ದುಪ್ಪಟ್ಟಿಗೂ ಹೆಚ್ಚಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೆಜಿ ಈರುಳ್ಳಿಗೆ ₹100ರ ಗಡಿ ದಾಟುವ ಆತಂಕ ಹೆಚ್ಚಿದೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳೆದ ಕೆಲವು ದಿನಗಳ ಹಿಂದೆ ಟೊಮ್ಯಾಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಈಗ ಈರುಳ್ಳಿಯ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಒಂದೇ ವಾರದಲ್ಲಿ ದುಪ್ಪಟ್ಟಿಗೂ ಹೆಚ್ಚಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೆಜಿ ಈರುಳ್ಳಿಗೆ ₹100ರ ಗಡಿ ದಾಟುವ ಆತಂಕ ಹೆಚ್ಚಿದೆ.

ಕೆಲವು ತಿಂಗಳ ಹಿಂದೆ ಕೆಂಪು ಸುಂದರಿ ಟೊಮ್ಯಾಟೋಗೆ ಇನ್ನಿಲ್ಲದ ಬೇಡಿಕೆ ಬಂದಿತ್ತು. ಇದೀಗ ಈರುಳ್ಳಿ ಬೆಲೆಯೂ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಈರುಳ್ಳಿ ಕತ್ತರಿಸುವಾಗ ಮಾತ್ರವಲ್ಲ ಖರೀದಿ ಮಾಡುವಾಗಲೂ ಕಣ್ಣೀರು ಬರುವಂತಾಗಿದೆ. ಕಳೆದ ವಾರ ಕೆಜಿಗೆ ₹25ರಿಂದ ₹30 ಇದ್ದ ಬೆಲೆ ಈಗ ಡಬಲ್ ಆಗಿದ್ದು, ಕೆಜಿ ₹70, ₹80 ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ₹100 ಗಡಿ ತಲುಪುವುದರಲ್ಲಿ ಸಂಶಯವಿಲ್ಲ.

ಪೂರೈಕೆಯಲ್ಲಿ ಗಣನೀಯ ಇಳಿಕೆ:

ಪ್ರತಿ ವರ್ಷ ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ಪೂನಾ ಸೇರಿದಂತೆ ಧಾರವಾಡ, ಅಕ್ಕಪಕ್ಕದ ಜಿಲ್ಲೆಗಳಿಂದ ನಿತ್ಯವೂ 25ರಿಂದ 30 ಲೋಡ್ ಈರುಳ್ಳಿ ಇಲ್ಲಿನ ಎಪಿಎಂಸಿಗೆ ಬರುತ್ತಿತ್ತು. ಆದರೆ, ಕಳೆದ 10 ದಿನಗಳಿಂದ ಪ್ರತಿದಿನ 7-8 ಟ್ರಕ್‌ಗಳು ಬರುತ್ತಿವೆ. ಒಂದೊಂದು ಸಾರಿ ಅಷ್ಟು ಬರುವುದಿಲ್ಲ. ಹೀಗಾಗಿ, ಈರುಳ್ಳಿ ಕೊರತೆ ಉಂಟಾಗಿದ್ದು, ದಿಢೀರನೇ​ ಬೆಲೆ ಏರಿಕೆಯಾಗಿದೆ.

ಅನಾವೃಷ್ಟಿಯ ಹೊಡೆತ:

ಸಮರ್ಪಕವಾಗಿ ಈರುಳ್ಳಿ ಪೂರೈಕೆಯಾಗದ ಕಾರಣ ದರ ದುಪ್ಪಟ್ಟಾಗಿದೆ. ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಅನಾವೃಷ್ಟಿಯಿಂದ ತುಂಬಾ ರೈತರು ಈರುಳ್ಳಿ ಬಿತ್ತನೆ ಮಾಡಿಲ್ಲ. ಅಲ್ಲದೇ ವರ್ಷದ ಆರಂಭದಲ್ಲೇ ಕೆಲ ರೈತರು ಈರುಳ್ಳಿ ಬೆಳೆದು ಮಳೆ ಬಾರದ ಕಾರಣ ನಷ್ಟ ಅನುಭವಿಸಿದ್ದರು. ಇದೆಲ್ಲ ಮಾರುಕಟ್ಟೆ ಮೇಲೆ ದೊಡ್ಡ ಪರಿಣಾಮ ಬೀರಿದೆ.

ಪೂನಾದ ಈರುಳ್ಳಿಯೂ ಬರುತ್ತಿಲ್ಲ:

ಹುಬ್ಬಳ್ಳಿ ಮಾರುಕಟ್ಟೆಗೆ ಸ್ಥಳೀಯ ಈರುಳ್ಳಿ ಹೊರತುಪಡಿಸಿದರೆ ಹೆಚ್ಚಾಗಿ ಬರುವುದು ಪೂನಾದಿಂದ. ಈ ಬಾರಿ ಅಲ್ಲಿಯೂ ಮಳೆಯಾಗದೇ ಇಳುವರಿ ಕುಂಠಿತಗೊಂಡಿರುವುದರಿಂದ ಹುಬ್ಬಳ್ಳಿ ಎಪಿಎಂಸಿಗೆ ಪೂನಾ ಈರುಳ್ಳಿ ಬರುತ್ತಿಲ್ಲ. ಇನ್ನು ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆದ ಈರುಳ್ಳಿಯು ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ.

ಈ ಕುರಿತು ಸೂಪರ್‌ ಮಾರ್ಕೆಟ್‌ ಚಿಕ್ಕ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ವಾಲ್ಮೀಕಿ ಪ್ರತಿಕ್ರಿಯಿಸಿ, ಇನ್ನೊಂದು ವಾರದಲ್ಲಿ ಸಮರ್ಪಕವಾಗಿ ಈರುಳ್ಳಿ ಪೂರೈಕೆಯಾಗದೇ ಇದ್ದರೆ ₹100ರ ಗಡಿ ದಾಟಲಿದೆ ಎಂಬುದು ಮಾರಾಟಗಾರರ ಮಾತು. ಒಟ್ಟಾರೆಯಾಗಿ ಮಾರುಕಟ್ಟೆಯಲ್ಲಿ ದರದ ಏರಿಳಿತವಾದರೆ ಕಷ್ಟ ಅನುಭವಿಸುವುದಂತೂ ಸಾಮಾನ್ಯ ಗ್ರಾಹಕರು.

ಗ್ರಾಹಕರಿಗೆ ಈರುಳ್ಳಿ ಬೆಲೆ ಹೇಳುವುದೇ ತಲೆನೋವಾಗಿದೆ. ಬಂದು ಈರುಳ್ಳಿ ಬೆಲೆ ಕೇಳಿ ದಂಗಾಗುತ್ತಾರೆ. ಕ್ವಿಂಟಲ್‌ ಈರುಳ್ಳಿಗೆ ₹6000 ದಿಂದ ₹7000ದ ವರೆಗೆ ಕೊಟ್ಟು ಖರೀದಿಸಿ ಹೇಗೆ ಮಾರಾಟ ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ. ಈರುಳ್ಳಿ ಬೆಲೆಯ ಏರಿಳಿತ

ದಿನಾಂಕ.. ಕೆಜಿ ಈರುಳ್ಳಿಯ ದರ

ಅ. 23.ರು. 40-45

ಅ. 24. ರು. 40-60

ಅ. 25. ರು. 40-60

ಅ. 26.ರು. 50-80

ಅ. 27ರಿಂದ 29ರು. 60-70

ಅ. 30.ರು. 70-80