ಸಾರಾಂಶ
ಹೂವಿನಹಡಗಲಿ: ತಾಲೂಕಿನ ವಿವಿಧ ಕಡೆಗಳಲ್ಲಿ ಬಿತ್ತನೆಯಾಗಿರುವ, ಈರುಳ್ಳಿ ಬೆಳೆಗೆ ಅತಿಯಾದ ಮಳೆ, ವಿಪರೀತ ಶೀತ ವಾತವರಣದಿಂದ ಕೊಳೆ ರೋಗ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತಂಗಿ ಗ್ರಾಮದ ಕೀರ್ತಿಗೌಡ, ಎ.ಪ್ರಭು ಸೇರಿದಂತೆ ಈರುಳ್ಳಿ ಬೆಳೆಗಾರರ ಜಮೀನುಗಳಿಗೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಿದಾನಂದಪ್ಪ, ತೋಟಗಾರಿಕೆ ಅಧಿಕಾರಿ ನಾಗರಾಜ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಮಂಜುನಾಥ ಭಾನುವಳಿ ಇವರು ಈರುಳ್ಳಿ ಬೆಳೆಗೆ ಬಂದಿರುವ ಕೊಳೆ ರೋಗವನ್ನು ನಿಯಂತ್ರಣದಲ್ಲಿ ತರುವ ಹಾಗೂ ವಿವಿಧ ಔಷಧ ಸಿಂಪರಣೆಯ ಮಾಹಿತಿಯನ್ನು ರೈತರಿಗೆ ಮಾಹಿತಿ ನೀಡಿದರು.ಹಿಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ 12 ಸಾವಿರ ಎಕ್ರೆ, ಹಡಗಲಿ ತಾಲೂಕಿನಲ್ಲಿ 3 ಸಾವಿರ ಎಕ್ರೆ ಈರುಳ್ಳಿ ಬಿತ್ತನೆಯಾಗಿದೆ. ಈರುಳ್ಳಿ ಈಗ ತಾನೆ ಗಡ್ಡೆ ಮೂಡುತ್ತಿದೆ. ಇಂತಹ ಸಂದರ್ಭದಲ್ಲೇ ಅತಿ ಶೀತ ಮತ್ತು ಮುಂಜಾನೆಯ ಇಬ್ಬನಿಯ ನೀರಿನಿಂದ ಈರುಳ್ಳಿಗೆ ಕೊಳೆ ರೋಗ ಹಾಗೂ ಮಂಗಮಾರಿ ರೋಗ ಬಂದಿದೆ. ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಸಾಕಷ್ಟು ಔಷಧಿಯನ್ನು ಸಂಪರಣೆ ಮಾಡಿದ್ದರೂ, ರೋಗ ನಿಯಂತ್ರಣಕ್ಕೆ ಬಂದಿಲ್ಲ. ಇದೊಂದು ವೈರಸ್ ನಿತ್ಯ ಹತ್ತಾರು ಎಕ್ರೆ ಈರುಳ್ಳಿ ಹಾನಿಯಾಗುತ್ತಿದೆ. ಆದರಿಂದ ಅಧಿಕಾರಿಗಳು ನಷ್ಟವಾಗಿರುವ ಬೆಳೆ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಿ ಸೂಕ್ತ ಪರಿಹಾರ ಕೊಡಿಸಬೇಕೆಂದು ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ.ಸಿದ್ದೇಶ ಒತ್ತಾಯಿಸಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಈರುಳ್ಳಿ ಬೆಳೆಗೆ ಥ್ರಿಪ್ಸ್ ನುಸಿ ಬಾಧೆ, ತಿರುಗಣಿ ರೋಗ, ನೇರಳೆ ಮಚ್ಚೆ ರೋಗಗಳು ಕಂಡು ಬಂದಿವೆ. ತಾಪಮಾನದಲ್ಲಿ ಇಳಿಕೆ, ಮುಂಜಾವಿನ ಮಂಜು ರೋಗ ಉಲ್ಬಣವಾಗಲು ಅನುಕೂಲಕರ ವಾತವರಣ ಸೃಷ್ಟಿಯಾಗುತ್ತಿದೆ. ಇದರ ನಿರ್ವಹಣೆಗೆ ಕೀಟನಾಶಕ ಮತ್ತು ಕೆಲ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಬೇಕಿದೆ. ಅದರೂ ಈ ಕೊಳೆ ರೋಗ ಒಂದು ರೀತಿಯ ವೈರಸ್, ಪಕ್ಕದ ಜಮೀನಿಗೂ ಹರಡುವ ಮೂಲಕ ಇಡೀ ಬೆಳೆಯನ್ನು ಹಾನಿ ಮಾಡುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಿದಾನಂದಪ್ಪ ಹೇಳಿದರು.ಈ ಸಂದರ್ಭದಲ್ಲಿ ಮೂಲಿಮನಿ ಶರಣಪ್ಪ, ಎಸ್.ಎಂ.ಫಕ್ಕೀರಯ್ಯ, ನಂದಿಹಳ್ಳಿ ಉಮಾಪತಿ, ಎಚ್.ಯಲ್ಲಪ್ಪ ಚಿಕ್ಕಗೌಡ್ರು ಸೇರಿದಂತೆ ಇತರರಿದ್ದರು.