ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ದಾಸೇಗೌಡ, ಲಿಂಗಣ್ಣ, ಕೆ.ಎಸ್. ರಾಮಶೇಷನ್, ಟಿ. ಕಮಲಮ್ಮ, ಜಿ. ಶ್ರೀದೇವಿ, ಡಿ.ಟಿ. ಈರೇಗೌಡ ಹಾಗೂ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸಾರಾಂಗ ಹೊರತಂದಿರುವ ಸಾವಿರಾರು ಶೀರ್ಷಿಕೆಯ ಅಮೂಲ್ಯ ಗ್ರಂಥಗಳು ಜಗತ್ತಿನ ಎಲ್ಲಾ ಓದುಗರಿಗೆ ಲಭ್ಯವಾಗಿಸಲು ಆನ್ ಲೈನ್ ಮೂಲಕ ಪುಸ್ತಕ ಮಾರಾಟ ಮಾಡಲಾಗುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ನಗರದ ಮಾನಸ ಗಂಗೋತ್ರಿಯ ಮೈಸೂರು ವಿವಿ ಪ್ರಸಾರಾಂಗ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಸಾರಾಂಗ ಪುಸ್ತಕೋತ್ಸವ 2025 ಹಾಗೂ ಪ್ರಸಾರಾಂಗದ ಪ್ರಮುಖ ಕೃತಿಗಳ ಪರಾಮರ್ಶೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೂರದ ಪ್ರದೇಶಗಳಿಂದ ಬಂದು ಖರೀದಿಸಲು ಸಾಧ್ಯವಾಗದವರಿಗೆ ಆನ್ ಲೈನ್ ಮೂಲಕ ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸುವ ಉದ್ದೇಶ ವಿವಿಗೆ ಇದೆ. ಪ್ರಸಾರಾಂಗದ ಪುಸ್ತಕವನ್ನು ಜಾಗತಿಕವಾಗಿ ಮಾರಾಟ ಮಾಡುವ ಉದ್ದೇಶ ನಮ್ಮದಾಗಿದೆ. ಪ್ರಸಾರಾಂಗದ ಭಂಡಾರದಲ್ಲಿ ಸಾವಿರಾರು ಪುಸ್ತಕಗಳಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕ ಮಾರಾಟಕ್ಕೆ ಹಿನ್ನೆಡೆಯಾಗಿದೆ ಎಂದರು.

ಕವಿ ಕುವೆಂಪು ಪ್ರಸಾರಾಂಗದ ಕನಸು ಕಂಡಿದ್ದರು. ಕುವೆಂಪು ನಿವೃತ್ತಿಯಾದ ಬಳಿಕ ಪ್ರಸಾರಾಂಗಕ್ಕೆ ಬರುತ್ತಿದ್ದರು. ಪ್ರಸಾರಾಂಗ ಹೆಮ್ಮರವಾಗಿ ಬೆಳೆದಿತ್ತು. ಈಗ ಪುಸ್ತಕ ಮಾರಾಟಕ್ಕೆ ಹಿನ್ನಡೆಯಾದ್ದರಿಂದ ಸಾರ್ವಜನಿಕರಿಗೆ ತಲುಪಿಸಲು ಪುಸ್ತಕೋತ್ಸವ ಆರಂಭಿಸಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

25 ಪೈಸೆಯಿಂದ ಸಾವಿರಾರು ರೂಪಾಯಿ ಪುಸ್ತಕಗಳಿವೆ. ಕನ್ನಡ ಭಾಷೆ ಉಳಿಸುವುದಕ್ಕಾಗಿ ಪುಸ್ತಕದ ಓದು ಹೆಚ್ಚಬೇಕು. ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿರುವ ಕೃತಿಗಳನ್ನು ಎಲ್ಲರೂ ಖರೀದಿಸಬೇಕು ಎಂದು ಅವರು ನುಡಿದರು.

ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ಪ್ರಸಾರಾಂಗ ಜ್ಞಾನದ ಕೇಂದ್ರ. ಕುವೆಂಪು ಅವರ ಕಾಲದಲ್ಲಿ ಪುಸ್ತಕದ ಕೆಲಸಕ್ಕಾಗಿ ಭವ್ಯವಾದ ಕಟ್ಟಡ ನಿರ್ಮಾಣಗೊಂಡಿರುವುದು ಹೆಮ್ಮೆಯ ವಿಚಾರ. ಇದನ್ನು ಉಳಿಸಲು ಎಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದು ಹೇಳಿದರು.

ಪ್ರಸಾರಾಂಗದ ನಿರ್ದೇಶಕ ಡಾ.ಎಂ. ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎಪಿಗ್ರಪಿ ಆಫ್ ಕರ್ನಾಟಕ ಸಂಪುಟಗಳ ಬಗ್ಗೆ ಒಂದು ಸಮೀಕ್ಷೆಯನ್ನು ನಡೆಸಬೇಕು. ಶಾಸನ, ಸಂಪುಟಗಳ ಬಗ್ಗೆ ಇತ್ತೀಚಿನ ಯುವ ಪೀಳಿಗೆಗೆ ಸಾಕಷ್ಟು ಮಾಹಿತಿ ಇಲ್ಲ. ಅದನ್ನು ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಭಾರತೀಯ ಕಾವ್ಯ ಮೀಮಾಂಸೆ ಕೃತಿ ಬಂದು 80 ವರ್ಷ ಆಗಿದೆ. ಇದು ಮೈಸೂರು ವಿಶ್ವವಿದ್ಯಾನಿಲಯದ ಹೆಗ್ಗಳಿಕೆ. ಇಂದಿಗೂ ಕೂಡ ಓದುಗರು ಈ ಪುಸ್ತಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಭಾರತದ ಯಾವುದೇ ಪುಸ್ತಕ ಮಳಿಗೆಗೆ ಹೋದರೆ 50 ಪೈಸೆ ಹಾಗೂ 75 ಪೈಸೆಯ ಪುಸ್ತಕಗಳು ಸಿಗುವುದಿಲ್ಲ. ನಮ್ಮ ಪ್ರಸಾರಂಗದಲ್ಲಿ 50 ಪೈಸೆ, 75 ಪೈಸೆ ಹಾಗೂ 1 ರೂಪಾಯಿ ಪುಸ್ತಕವೂ ಸಿಗುತ್ತದೆ. ಹೀಗಾಗಿ ಜನ ಸಾಮಾನ್ಯರಿಗೆ ಬೇಕಾದ ವಿದ್ವಾಂಸರನ್ನು, ಬರಹಗಾರರನ್ನು ಗುರುತಿಸಿ ದೊಡ್ಡ ದೊಡ್ಡ ಉಪನ್ಯಾಸ ಆಯೋಜಿಸಿ ಹಳ್ಳಿ ಹಳ್ಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ನಿವೃತ್ತರಿಗೆ ಸನ್ಮಾನ:

ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದ ದಾಸೇಗೌಡ, ಲಿಂಗಣ್ಣ, ಕೆ.ಎಸ್. ರಾಮಶೇಷನ್, ಟಿ. ಕಮಲಮ್ಮ, ಜಿ. ಶ್ರೀದೇವಿ, ಡಿ.ಟಿ. ಈರೇಗೌಡ ಹಾಗೂ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪುಸ್ತಕೋತ್ಸವದಲ್ಲಿ ಜನಪದ ಸಂಭ್ರಮ:

ಪ್ರಸಾರಾಂಗದ ಪುಸ್ತಕೋತ್ಸವ ಸಮಾರಂಭದಲ್ಲಿ ಜನಪದ ಸಂಭ್ರಮ ಆಕರ್ಷಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸುಗಮ ಸಂಗೀತ, ಜನಪದ ಗೀತೆ ಹಾಗೂ ಜನಪದ ಕಲೆಗಳ ಪ್ರದರ್ಶನ ಜನಮನ ಸೆಳೆಯಿತು.

ಗಾಯಕ ಅಮ್ಮ ರಾಮಚಂದ್ರ ಮತ್ತು ತಂಡ ಸುಗಮ ಸಂಗೀತ ಹಾಗೂ ಡಾ. ಸುಂದರೇಶ್ ಮತ್ತು ಸಿದ್ದರಾಜು ತಂಡದವರು ಪೂಜಾ ಕುಣಿತ ಪ್ರದರ್ಶಿಸಿದರು.

ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಕೆ.ಟಿ. ವೀರಪ್ಪ, ಪ್ರೊ.ಎಸ್. ಲಕ್ಷ್ಮೀ ನಾರಾಯಣ ಅರೋರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇದ್ದರು.

---

‘ಪ್ರಸಾರಾಂಗ ಕಳೆದ ಒಂದು ವಾರದಿಂದ 3 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದ್ದು, ಓದುಗರು, ಸಾಹಿತಿಗಳು, ಪತ್ರಕರ್ತರು, ನ್ಯಾಯಾಧೀಶರು ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಶೇ.10 ರಿಂದ ಶೆ. 75 ರವರೆಗೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪ್ರಸಾರಾಂಗದ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು. ಡಿಸೆಂಬರ್ ಕೊನೆಯವರೆಗೆ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಕಾರ್ಯ ಮಾಡಲಿದ್ದೇವೆ.’

- ಪ್ರೊ.ಎಂ. ನಂಜಯ್ಯ ಹೊಂಗನೂರು, ನಿರ್ದೇಶಕರು, ಪ್ರಸಾರಾಂಗ.