ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ಘೋಷಿಸದೆ ಕೇವಲ ₹೨೦೦೦ ಬಿಡುಗಡೆ ಮಾಡಿರುವುದು ಹಾಸ್ಯಾಸ್ಪದವಾಗಿದೆ.
ಕನ್ನಡಪ್ರಭ ವಾರ್ತೆ ಹಿರೇಕೆರೂರು
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ರೈತ ಬೆಳೆದ ಬೆಳೆಗಳಿಗೆ ಕಾನೂನಾತ್ಮಾಕ ಬೆಲೆ ಕೊಡುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ಬೃಹತ್ ಪ್ರತಿಭಟನೆ ಮಾಡುತ್ತಿರುವಾಗ ಕೇಂದ್ರ ಸರ್ಕಾರ ರೈತ ಪ್ರತಿಭಟನೆ ಹತ್ತಿಕ್ಕಲು ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ಘೋಷಿಸದೆ ಕೇವಲ ₹೨೦೦೦ ಬಿಡುಗಡೆ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸದಸ್ಯ ಮಾಲತೇಶ ಪೂಜಾರ ಮಾತನಾಡಿ, ರೈತರಿಗೆ ಬೆಳೆವಿಮಾ ಪರಿಹಾರ ಬಿಡುಗಡೆ ಮಾಡದೇ ವಿಮಾ ಕಂಪನಿಗಳು ರೈತರಿಗೆ ಮೋಸವೆಸಗಿವೆ. ಈ ಮೊದಲಿದ್ದಂತೆ ಅಕ್ರಮ ಸಕ್ರಮ ಯೋಜನೆಯನ್ನು ಪುನಃ ಜಾರಿಗೊಳಿಸಿ ರೈತರ ಐ.ಪಿ. ಶೆಟ್ಟುಗಳಿಗೆ ವಿದ್ಯುತ್ ಒದಗಿಸಿ ನಿರಂತರ ೭ ತಾಸು ವಿದ್ಯುತ್‌ನ್ನು ಪೂರೈಸಬೇಕು, ಡಾ. ಸ್ವಾಮಿನಾಥನ್ ವರದಿಯಂತೆ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಿ ಬೆಂಬಲ ಬೆಲೆಗೆ ಕಾನೂನಾತ್ಮಕ ರೂಪ ನೀಡಬೇಕು. ರೈತರ ಕೃಷಿ ಸಾಲವನ್ನು ಸಿಬಿಲ್‌ನಿಂದ ಹೊರಗಿಡುವಂತೆ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಮತ್ತು ತುಂತುರು ನೀರಾವರಿಗೆ ಎನ್.ಓ.ಸಿ. ಕೇಳುವುದನ್ನು ತಕ್ಷಣ ನಿಲ್ಲಿಸಬೇಕು. ಹಾವೇರಿ ಜಿಲ್ಲೆಯಾಗಿ ೨೫ ವರ್ಷ ಗತಿಸಿದರೂ ಪ್ರತ್ಯೇಕ ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪನೆ ಕನುಸಾಗಿಯೇ ಉಳಿದಿದೆ. ರಾಜ್ಯ ಸರ್ಕಾರ ಶೂನ್ಯಬಡ್ಡಿ ಆಧಾರದಲ್ಲಿ ೫ ಲಕ್ಷಗಳವರೆಗೆ ಕೃಷಿ ಸಾಲ ಕೊಡುತ್ತೇವೆ ಎಂದು ಹೇಳುತ್ತಿರುವುದು ಸೋಜಿಗವಾಗಿದೆ. ನಮ್ಮ ಜಿಲ್ಲೆಯಲ್ಲಿ ಈವರೆಗೂ ಯಾವ ರೈತರಿಗೂ ₹೫ ಲಕ್ಷಗಳ ಸಾಲವನ್ನೆ ನೀಡಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕೆಂದು ಒತ್ತಾಯಿಸಿದರು.ರೈತ ಮುಖಂಡರಾದ ಶಂಕ್ರಪ್ಪ ಶಿರಗಂಬಿ, ಮಹ್ಮದ್‌ಗೌಸ್ ಪಾಟೀಲ,ಗಂಗನಗೌಡ ಮುದಿಗೌಡ್ರ, ಶಂಕರಗೌಡ ಮಕ್ಕಳ್ಳಿ, ಪರಮೇಶ ಪಾಟೀಲ, ಪುಟ್ಟಯ್ಯ ಮಳಲಿಮಠ, ಮಲೇಶಪ್ಪ ದೊಡ್ಡಉಪ್ಪಾರ, ಯಶವಂತ ತಿಣಕಾಪೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.