ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಶಾಲೆ ಮಕ್ಕಳಿಗೆ ಕನ್ನಡದ ಜತೆಗೆ ಇಂಗ್ಲಿಷ್‌ ಮಾಧ್ಯಮದಲ್ಲೂ ಬೋಧಿಸಲು ಕನ್ನಡ ಮಾಧ್ಯಮದ ಶಿಕ್ಷಕರಿಗೂ ಐದು ದಿನಗಳ ತರಬೇತಿ ನೀಡುತ್ತಿರುವ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ಪ್ರಯೋಗಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕಳೆದ ಸಾಲಿನಲ್ಲಿ ಸುಮಾರು 9000 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆ ಆರಂಭಿಸಿದ್ದ ಸರ್ಕಾರ, 2026-27ನೇ ಸಾಲಿನಲ್ಲಿ ರಾಜ್ಯದ ಹದಿನೈದು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿ ಮಕ್ಕಳಿಗೆ ಕನ್ನಡದ ಜೊತೆಗೆ ಇಂಗ್ಲಿಷ್‌ ಮಾಧ್ಯಮದಲ್ಲೂ (ದ್ವಿಭಾಷಾ ಮಾಧ್ಯಮ) ಪಾಠ ಮಾಡಲು 1.55 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಸರ್ಕಾರ ಕೇವಲ ಐದು ದಿನಗಳ ತರಬೇತಿ ನೀಡುತ್ತಿದೆ. ಇದು ಶಿಕ್ಷಕರ ವಲಯದಲ್ಲೇ ಟೀಕೆಗೆ ಗುರಿಯಾಗಿದೆ. ಇನ್ನು, ಶಿಕ್ಷಣ ತಜ್ಞರು ಸರ್ಕಾರ ಯಾವ ವೈಜ್ಞಾನಿಕ ಆಧಾರದಲ್ಲಿ ತರಬೇತಿಗೆ ಐದು ದಿನ ನಿಗದಿಪಡಿಸಿದೆಯೋ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ.

1 ತಿಂಗಳಾದರೂ ಬೇಕು:


ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹಳಷ್ಟು ಶಿಕ್ಷಕರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಾಗಿರುತ್ತಾರೆ. ಅಲ್ಲದೆ, ಈವರೆಗೆ ಕನ್ನಡ ಮಾಧ್ಯಮದಲ್ಲೇ ಬೋಧನೆ ಮಾಡುತ್ತಾ ಬಂದಿದ್ದಾರೆ. ಅಂಥವರಿಗೆ ಐದು ದಿನ ತರಬೇತಿ ನೀಡಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುವ ಮಟ್ಟಕ್ಕೆ ತಯಾರು ಮಾಡಲು ಎಷ್ಟು ಪರಿಣಾಮಕಾರಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಸರ್ಕಾರ ಏಕಾಏಕಿ ಆಂಗ್ಲ ಮಾಧ್ಯಮ ಬೋಧನೆಗೆ ಅರ್ಹ ವಿಷಯವಾರು ಶಿಕ್ಷಕರ ನೇಮಕ ಮಾಡಿಕೊಳ್ಳಲು ಸಾಧ್ಯವಾಗದೆ ಹೋಗಬಹುದು. ಆದರೆ, ಇರುವ ಶಿಕ್ಷಕರಿಂದಲೇ ಆಂಗ್ಲ ಮಾಧ್ಯಮದಲ್ಲಿ ಬೋಧನೆಗೆ ಕನಿಷ್ಠ ಒಂದು ತಿಂಗಳಾದರೂ ತರಬೇತಿ ನೀಡಬೇಕು. ಇಲ್ಲದಿದ್ದರೆ ದ್ವಿಭಾಷಾ ಮಾಧ್ಯಮ ಬೋಧನೆ ಹೆಸರಿಗಷ್ಟೇ ಅನ್ನುವಂತಾಗುತ್ತದೆ ಎನ್ನುವುದು ಪೋಷಕರ ವಲಯದಲ್ಲಿ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ.

ಡಿಎಸ್‌ಇಆರ್‌ಟಿಯಿಂದ ತರಬೇತಿ!:

ಹದಿನೈದು ಜಿಲ್ಲೆಗಳ 1,55,950 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲೀಷ್‌ ಮಾಧ್ಯಮ ಟೀಚರ್ಸ್‌ ಟ್ರೈನಿಂಗ್‌ ಅನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್‌ಇಆರ್‌ಟಿ) ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಪ್ರಾದೇಶಿಕ ಇಂಗ್ಲಿಷ್‌ ಸಂಸ್ಥೆ, ದಕ್ಷಿಣ ಭಾರತ್(ಆರ್‌ಐಇಎಸ್‌ಐ)ನಿಂದ ಶಿಕ್ಷಕರಿಗೆ ನೀಡಲಾಗುತ್ತಿದೆ. ಇಂಗ್ಲಿಷ್ ಭಾಷೆಯಲ್ಲಿ ಸರಳ ಬೋಧನೆ, ಸಂವಹನ ಕೌಶಲ ಮತ್ತು ವಿಷಯಾಧಾರಿತ ದ್ವಿಭಾಷಾ ಬೋಧನಾ ವಿಧಾನಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುತ್ತಿದೆ.

ಮೊದಲ ಹಂತದಲ್ಲಿ 585 ವಲಯ ಡಯಟ್‌ ಅಧಿಕಾರಿಗಳಿಗೆ, 2ನೇ ಹಂತದಲ್ಲಿ ಪ್ರತಿ ತಾಲೂಕಿನಿಂದ 15 ಜನರಂತೆ ಒಟ್ಟು 3,060 ರಾಜ್ಯ ಸಂಪನ್ಮೂಲಕ ವ್ಯಕ್ತಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಎರಡು ಹಂತದಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಜಿಲ್ಲಾ ಶಿಕ್ಷಕ ಮತ್ತು ತರಬೇತಿ ಸಂಸ್ಥೆಗಳಲ್ಲಿ (ಡಯಟ್‌ ಕೇಂದ್ರ) ಒಟ್ಟು 1.55 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಿದ ಶಿಕ್ಷಕರು, ಐದು ದಿನಗಳಲ್ಲಿ ಭಾಷೆ ಕಲಿಯಲು ಹಾಗೂ ವಿದ್ಯಾರ್ಥಿಗಳಿಗೆ ಬೋಧಿಸಲು ಹೇಗೆ ಸಾಧ್ಯ? ಎಂದು ಕೇಳುತ್ತಾರೆ. ನಾವು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಶಿಕ್ಷಕರಾಗಿರುವವರಿಗೆ ಐದು ದಿನದ ತರಬೇತಿ ಸಾಕಾಗುತ್ತದೆ. ಆದರೆ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಕನಿಷ್ಠ 15 ರಿಂದ 1 ತಿಂಗಳು ತರಬೇತಿ ಅಗತ್ಯ ಎನ್ನುತ್ತಿದ್ದಾರೆ.

-ಬಾಕ್ಸ್‌-

ಎಲ್ಲೆಲ್ಲಿ ದ್ವಿಭಾಷಾ ಶಾಲೆಗಳು?

ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ, ರಾಮನಗರ, ಹಾವೇರಿ, ಕಲಬುರಗಿ, ಶಿವಮೊಗ್ಗ, ಹಾಸನ, ತುಮಕೂರು, ದಕ್ಷಿಣ ಕನ್ನಡ, ಕೋಲಾರ, ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ಕೊಪ್ಪಳ ಸೇರಿ ಒಟ್ಟು 15 ಜಿಲ್ಲೆಗಳಲ್ಲಿ ಹಾಗೆಯೇ ಗಣಿ ಬಾಧಿತ ತಾಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ, ಮೊಣಕಾಲ್ಮುರು, ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು, ಬಳ್ಳಾರಿ (ಪಶ್ಚಿಮ), ಸಂಡೂರು ಮತ್ತು ಹೊಸ ಪೇಟೆ ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2026-27ನೇ ಸಾಲಿನಿಂದ ದ್ವಿಭಾಷಾ ಶಿಕ್ಷಣ ಕ್ರಮ ಜಾರಿಗೆ ಬರಲಿದೆ.