ಸ್ವಾಸ್ಥ್ಯ ಮನಸ್ಸಿನಿಂದ ಮಾತ್ರ ಸದೃಢ ಮನುಷ್ಯನಾಗಲು ಸಾಧ್ಯ: ಚೆಸ್ಕಾಂ ಇಂಜಿನಿಯರ್ ಸುಬ್ರಹ್ಮಣ್ಯ ಕರೆ

| Published : Jul 07 2025, 11:48 PM IST

ಸ್ವಾಸ್ಥ್ಯ ಮನಸ್ಸಿನಿಂದ ಮಾತ್ರ ಸದೃಢ ಮನುಷ್ಯನಾಗಲು ಸಾಧ್ಯ: ಚೆಸ್ಕಾಂ ಇಂಜಿನಿಯರ್ ಸುಬ್ರಹ್ಮಣ್ಯ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಮಗೆ ಭಗವಂತ ಎಲ್ಲ ಸೌಲಭ್ಯಗಳನ್ನು ಕೊಟ್ಟಿದ್ದಾನೆ, ಅವುಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮನಸ್ಸು ಪ್ರಶಾಂತವಾಗಿದ್ದಾಗ ಮಾತ್ರ ನಮ್ಮ ಸುತ್ತಲಿನ ವಾತಾವರಣವು ಪ್ರಶಾಂತವಾಗಿರಲು ಸಾಧ್ಯವಾಗುತ್ತದೆ, ಇದರಿಂದ ಆರೋಗ್ಯ- ನೆಮ್ಮದಿ ಕೂಡ ಲಭ್ಯವಾಗುತ್ತದೆ ಎಂದು ಚೆಸ್ಕಾಂ (ಪವರ್) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುಬ್ರಹ್ಮಣ್ಯ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಬಾಳೆನಹಳ್ಳಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಓದಲು ಏಕಾಗ್ರತೆ ಬೇಕು, ನಾನು ಓದಬೇಕೆಂಬ ಮನಸ್ಸು ಬರಬೇಕು. ಅದಕ್ಕೊಂದು ಗುರಿ ಇರಬೇಕು. ಗುರಿ ಸಾಧಿಸುವ ಛಲ ಮತ್ತು ಆತ್ಮಸ್ಥೈರ್ಯ ಇರಲೇಬೇಕು. ಸೋಲುಗಳಿಗೆ ಧೃತಿಗೆಡಬಾರದು. ಕೇವಲ ಮಾರ್ಕ್ಸ್‌ಗಾಗಿ ಓದುವುದು ಸರಿಯಲ್ಲ. ಜ್ಞಾನವನ್ನು ಬೆಳೆಸಿಕೊಳ್ಳಬೇಕು, ನೈತಿಕತೆ ಬೇಕು, ನಾನು ಏನನ್ನಾದರೂ ಸಾಧಿಸುತ್ತೇನೆ ಎಂಬ ಆತ್ಮಸ್ಥೈರ್ಯವನ್ನು ಮೊದಲು ನೀವು ರೂಢಿಸಿಕೊಳ್ಳಬೇಕು. ಸದೃಢವಾಗಿರುವ ಮನಸ್ಸಿನ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸುತ್ತಾರೆ, ಪದವಿ ಪಡೆಯದವರು ಅನೇಕ ಸಾಧನೆಗಳನ್ನೇ ಮಾಡಿ ತೋರಿಸಿದ್ದಾರೆ. ಛಲ, ಗುರಿ ಇರಬೇಕು, ಗುರು- ಹಿರಿಯರಲ್ಲಿ ಗೌರವ ಇರಬೇಕು. ಪಂಚಭೂತಗಳು ನಿಸ್ವಾರ್ಥತೆಯಿಂದ ನಮಗೆ ಎಲ್ಲವನ್ನೂ ಕೊಡುತ್ತವೆ. ಇವುಗಳನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕಲ್ಲವೇ? ಮನಸ್ಸು ಸದೃಢ ವಿಲ್ಲದಿದ್ದಲ್ಲಿ ಚಂಚಲ ಮನಸ್ಸು ದುಶ್ಚಟಗಳತ್ತ ಸೆಳೆಯುತ್ತದೆ. ಈಗ ನೀವು ನಿಮ್ಮ ಭವಿಷ್ಯದ ಪ್ರಮುಖ ಘಟ್ಟದಲ್ಲಿದ್ದೀರಿ, ನೀವು ಇಡುವ ಪ್ರತಿ ಹೆಜ್ಜೆಯೂ ಎಚ್ಚರದಿಂದಿರಬೇಕು. ಈ ಸಮಯದಲ್ಲಿ ಶಿಕ್ಷಕರ ಮಾರ್ಗದರ್ಶನ ಬಹಳ ಅಗತ್ಯ, ಅದನ್ನು ಅನುಸರಿಸಿ ಎಂದು ಕರೆ ನೀಡಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ವಿಷಯ ನಿರೀಕ್ಷಕ ಕಾಂತರಾಜ್, ವಿದ್ಯಾರ್ಥಿಗಳು ಮೊಬೈಲ್ ಗಳಿಂದ ದೂರ ಇರಿ. ಪುಸ್ತಕಗಳು ಹೇಳುತ್ತವೆ, ನೀನು ತಲೆ ಬಗ್ಗಿಸಿ ಓದು, ನಾನು ನಿನ್ನನ್ನು ತಲೆಯೆತ್ತಿ ಮೆರೆಯುವಂತೆ ಮಾಡುತ್ತೇನೆಂದು. ಮೊಬೈಲ್ ಹೇಳುತ್ತದೆ ನೀನು ತಲೆ ಬಗ್ಗಿಸಿ ನನ್ನನ್ನು ಬಳಸು, ನಾನು ನಿನ್ನನ್ನು ಎಂದಿಗೂ ತಲೆಯೆತ್ತದಂತೆ ನೋಡಿಕೊಳ್ಳುತ್ತೇನೆಂದು.ಆದ್ದರಿಂದ ವಿದ್ಯಾರ್ಥಿಗಳೇ ನಿಮಗೆ ಯಾವುದು ಬೇಕು ಆಯ್ದುಕೊಳ್ಳಿ ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ನಿಮಗೆ ಭಗವಂತ ಎಲ್ಲ ಸೌಲಭ್ಯಗಳನ್ನು ಕೊಟ್ಟಿದ್ದಾನೆ, ಅವುಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ, ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಕ್ಷೇತ್ರದಿಂದ ನೀಡಲಾಗುತ್ತಿರುವ ನೆರವುಗಳನ್ನು ಮತ್ತು ಇತರ ಜನಪರ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಶೈಲಜಾ, ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯುವ ಮೂಲಕ ನಿಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು, ಜೀವನದ ಒಂದು ತಿರುವಿನ ಘಟ್ಟದಲ್ಲಿ ನೀವು ಇದ್ದೀರಿ, ಮುಂದಿನ ಭವಿಷ್ಯಕ್ಕೆ ಸೂಕ್ತವಾದ ಅಡಿಪಾಯವನ್ನು ನೀವು ಇಲ್ಲಿಂದಲೇ ಹಾಕಿಕೊಳ್ಳುತ್ತಾ ಹೋಗಬೇಕು, ಇಂದು ನಿಮಗೆ ಸುಬ್ರಹ್ಮಣ್ಯ ಅವರು ಮತ್ತು ಇಲಾಖೆ ಅಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನಾಧಿಕಾರಿಗಳು ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ, ಇದನ್ನು ನೀವು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಎಲ್ಲಾ ಗಣ್ಯರು ಶುಭ ಕೋರಿದರು.

ಶಾಲಾ ಬೋಧಕ ವರ್ಗ, ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಎಚ್‍.ಡಿ ಸೀತಾರಾಮ್ ಕೃಷಿ ಯೋಜನಾಧಿಕಾರಿ ಗುರುಮೂರ್ತಿ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.